
ವಿಜಯಪುರ: ದೇಶದಾದ್ಯಂತ ಹಲಾಲ್ ಪ್ರಮಾಣಪತ್ರ ನೀಡುತ್ತಿರುವ ಎಲ್ಲಾ ಏಜೆನ್ಸಿಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ಪತ್ರ ಬರೆದಿರುವ ಅವರು, ಹಲಾಲ್ ಪ್ರಮಾಣಪತ್ರದ ಹೆಸರಿನಲ್ಲಿ ಸಂಗ್ರಹವಾಗುತ್ತಿರುವ ನಿಧಿಗಳನ್ನು ಉಗ್ರ ಚಟುವಟಿಕೆಗಳು, ರಾಷ್ಟ್ರವಿರೋಧಿ ಚಳವಳಿಗಳು ಮತ್ತು ಆರೋಪಿತರ ಕಾನೂನು ನೆರವಿಗೆ ದುರುಪಯೋಗವಾಗುತ್ತಿವೆ ಎಂದು ಗಂಭೀರ ಆರೋಪಿಸಿದ್ದಾರೆ.
ಇನ್ನು ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಹಲಾಲ್ ಪ್ರಮಾಣಪತ್ರ ನೀಡುವ ಸಂಸ್ಥೆಗಳನ್ನು ನಿಷೇಧಿಸಿದ್ದು, ಇದೇ ರೀತಿಯಾಗಿ ರಾಷ್ಟ್ರದ ಭದ್ರತೆಯ ಹಿತಾಸಕ್ತಿಯ ದೃಷ್ಟಿಯಿಂದ ಕೇಂದ್ರ ಸರ್ಕಾರವೂ ಈ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಹಲಾಲ್ ಇಂಡಿಯಾ, ಜಮಿಯತ್ ಉಲಮಾ-ಇ-ಹಿಂದ್ ಹಲಾಲ್ ಟ್ರಸ್ಟ್, ಗ್ಲೋಬಲ್ ಇಸ್ಲಾಮಿಕ್ ಶರಿಯಾ, ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹಲಾಲ್ ಸರ್ಟಿಫಿಕೇಶನ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಜಮಿಯತ್ ಉಲಮಾ-ಎ-ಮಹಾರಾಷ್ಟ್ರ ಮೊದಲಾದ ಇಸ್ಲಾಮಿಕ್ ಸಂಸ್ಥೆಗಳು ಧಾರ್ಮಿಕ ಮುಖವಾಡದಡಿ ಅನಧಿಕೃತವಾಗಿ ಹಲಾಲ್ ಪ್ರಮಾಣಪತ್ರ ನೀಡುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2016ರಲ್ಲಿ ಉಲಮಾ ಪ್ರತಿನಿಧಿ ಗುಲ್ಜಾರ್ ಅಜ್ಮಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿರುವ ಯತ್ನಾಳ್, ಹಲಾಲ್ ಪ್ರಮಾಣಪತ್ರದಿಂದ ಸಂಗ್ರಹವಾಗುವ ನಿಧಿಗಳನ್ನು ಉಗ್ರರ ಜಾಮೀನುಗಾಗಿ ಬಳಸಲಾಗಿದೆ ಎಂದು ಆರೋಪಿಸಿದರು. ಇನ್ನು ಹಲಾಲ್ ಶರಿಯಾ ಕಾನೂನುಗಳಡಿ ಬರುವುದರಿಂದ ಭಾರತದಲ್ಲಿ ಅದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಆದ್ದರಿಂದ ಈ ಪ್ರಮಾಣಪತ್ರ ನೀಡುವ ಕಾರ್ಯವೇ ಅಕ್ರಮವಾಗಿದೆ. ಈ ಏಜೆನ್ಸಿಗಳನ್ನು ತಕ್ಷಣ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.