ADVERTISEMENT

ಭಣಗುಡುತ್ತಿರುವ ಹರ್ಡೇಕರ್‌ ಮಂಜಪ್ಪ ಸ್ಮಾರಕ

‘ಕರ್ನಾಟಕ ಗಾಂಧಿ’ ಖ್ಯಾತಿಯ ಮಂಜಪ್ಪನವರ ಜನ್ಮದಿನ ಇಂದು

ಚಂದ್ರಶೇಖರ ಕೊಳೇಕರ
Published 17 ಫೆಬ್ರುವರಿ 2021, 19:30 IST
Last Updated 17 ಫೆಬ್ರುವರಿ 2021, 19:30 IST
ಆಲಮಟ್ಟಿಯಲ್ಲಿರುವ ಹರ್ಡೇಕರ ಮಂಜಪ್ಪ ಸ್ಮಾರಕ ಭವನ
ಆಲಮಟ್ಟಿಯಲ್ಲಿರುವ ಹರ್ಡೇಕರ ಮಂಜಪ್ಪ ಸ್ಮಾರಕ ಭವನ   

ಆಲಮಟ್ಟಿ: ‘ಕರ್ನಾಟಕ ಗಾಂಧಿ’ ಹರ್ಡೇಕರ್‌ ಮಂಜಪ್ಪನವರ ಸ್ಮರಣೆಗಾಗಿ ರಾಜ್ಯ ಸರ್ಕಾರ ₹1.5 ಕೋಟಿ ಅನುದಾನದಲ್ಲಿ ಮೂರು ವರ್ಷಗಳ ಹಿಂದೆ ಆಲಮಟ್ಟಿಯಲ್ಲಿ ನಿರ್ಮಿಸಿರುವ ಸ್ಮಾರಕದಲ್ಲಿ ಯಾವುದೇ ಕಾರ್ಯಕ್ರಮಗಳು, ಚಟುವಟಿಕೆಗಳು ನಡೆಯದೇ ಭಣಗುಡುತ್ತಿದೆ.

1886ರ ಫೆ.18ರಂದು ಬನವಾಸಿಯಲ್ಲಿ ಜನಿಸಿ, ಪತ್ರಕರ್ತರಾಗಿ ಗಾಂಧಿ ತತ್ವದ ಪ್ರಚಾರಕರ್ತರಾಗಿ ಕಾಯಕ ತತ್ವದ ಶಾಲೆ ತೆರೆದು, ಖಾದಿ ಪ್ರಚುರಗೊಳಿಸಿದ ಮಂಜಪ್ಪ ಹರ್ಡೇಕರ ಅವರ ಕರ್ಮಭೂಮಿ ಆಲಮಟ್ಟಿಯಲ್ಲಿ ಅವರ ಸ್ಮರಣೆಗಾಗಿ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಿ, ಅಲ್ಲಿ ಮಂಜಪ್ಪನವರ ಕಂಚಿನ ಪುತ್ಥಳಿ ಸ್ಥಾಪಿಸಲಾಗಿದೆ.

ಈ ಸ್ಮಾರಕ ಉದ್ಘಾಟಿಸಿ ಮೂರು ವರ್ಷ ಕಳೆದರೂ ಈ ತನಕ ಮಂಜಪ್ಪನವರ ಬದುಕು, ಬರಹಗಳನ್ನು ರಕ್ಷಿಸುವ ಯಾವುದೇ ಪ್ರಯತ್ನ ನಡೆದಿಲ್ಲ.

ADVERTISEMENT

ಸದ್ಯ ಗದುಗಿನ ತೋಂಟದಾರ್ಯ ಮಠದ ಉಸ್ತುವಾರಿಯಲ್ಲಿರುವ ಸ್ಮಾರಕ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳಿಲ್ಲದೇ ಭಣಗುಡುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದಆಲಮಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹಿರೇಮಠ, ‘ಸ್ಮಾರಕ ನಿರ್ವಹಣೆಗೆ ಸಮಿತಿ ರಚಿಸಿ, ಅದರ ಮೂಲಕ ವಿವಿಧ ಸೃಜನಾತ್ಮಕ ಕಾರ್ಯಚಟುವಟಿಕೆ ನಡೆಸಬೇಕು. ಮಂಜಪ್ಪನವರ ಕೃತಿಗಳ ಮರುಮುದ್ರಣ, ಅವರು ಬಳಿಸಿದ ಪ್ರಿಂಟಿಂಗ್‌ ಪ್ರೆಸ್‌ ಸೇರಿ ನಾನಾ ವಸ್ತುಗಳ ಸಂಗ್ರಹ, ಅವರ ಬದುಕನ್ನು ಕಲೆಗಳ ಮೂಲಕ ಅನಾವರಣಗೊಳಿಸುವ ಪ್ರಯತ್ನ ನಡೆಯಬೇಕಿದೆ’ ಎಂದು ಹೇಳಿದರು.

ಜಯಂತಿ ಇಂದು

ಹರ್ಡೇಕರ್‌ಮಂಜಪ್ಪನವರ 135ನೇ ಜನ್ಮ ದಿನ ಕಾರ್ಯಕ್ರಮ ಫೆ.18ರಂದು ಇಲ್ಲಿನ ಮಂಜಪ್ಪ ಸ್ಮಾರಕ ಭವನದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.