ADVERTISEMENT

ಬಸವನಬಾಗೇವಾಡಿ | ಹೆಡ್ ಕಾನ್‌ಸ್ಟೆಬಲ್‌ಗೆ ಚಾಕುವಿನಿಂದ ಇರಿದ ಕಳ್ಳ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 14:25 IST
Last Updated 6 ಆಗಸ್ಟ್ 2025, 14:25 IST
   

ಬಸವನಬಾಗೇವಾಡಿ: ಪಟ್ಟಣದ ಎಪಿಎಂಸಿ ಮಾರುಕಟ್ಟೆ ಹಿಂಭಾಗದಲ್ಲಿರುವ ಶ್ರೀನಗರದ ಮನೆಯೊಂದರ ಬೀಗ ಮುರಿದು ಮಂಗಳವಾರ ರಾತ್ರಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಹಿಡಿಯಲು ಮುಂದಾದ ರಾತ್ರಿ ಗಸ್ತಿನಲ್ಲಿದ್ದ ಹೆಡ್ ಕಾನ್‌ಸ್ಟೆಬಲ್‌ಗೆ ಚಾಕುವಿನಿಂದ ಇರಿದು, ಹಲ್ಲೆ ಮಾಡಿ ಕಳ್ಳರು ಪರಾರಿಯಾಗಿದ್ದಾರೆ.

ಹೆಡ್‌ ಕಾನ್‌ಸ್ಟೆಬಲ್‌ ರಮೇಶ ಗೂಳಿ ಅವರ ಭುಜ, ಕುತ್ತಿಗೆ, ಎದೆ ಮತ್ತು ತೊಡಗೆ ಕಳ್ಳರು ಚಾಕುವಿನಿಂದ ತೀವ್ರವಾಗಿ ಇರಿದು ಗಾಯಗೊಳಿಸಿದ್ದು, ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಂಬುವವರು ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿ ಕಳ್ಳರನ್ನು ಹಿಡಿಯುವ ವೇಳೆ ಕಳ್ಳರು‌ ಚಾಕುವಿನಿಂದ ಹೆಡ್ ಕಾನ್ಸ್ಟೇಬಲ್ ಭುಜ, ಕುತ್ತಿಗೆ, ಎದೆ ಹಾಗೂ ತೊಡೆಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಸಂಭವಿಸಿದೆ.

ADVERTISEMENT

ಫಟನೆ ವಿವರ

ಮಂಗಳವಾರ ತಡರಾತ್ರಿ 2.30ರ ಸುಮಾರಿಗೆ ಮಳೆ ಸುರಿಯುತ್ತಿದ್ದ ವೇಳೆ ಬಸವನಬಾಗೇವಾಡಿ ಪಟ್ಟಣದ ಶ್ರೀನಗರದ ನಿವಾಸಿ ಸಚಿನ್ ಖಾನಾಪುರ ಎನ್ನುವವರ ಬಾಡಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾಲ್ವರು ಕಳ್ಳರು ಮನೆ ಕಳ್ಳತನಕ್ಕೆ ಯತ್ನಿಸಿದ್ದಾರೆ.

ಈ ಕುರಿತು ಸ್ಥಳೀಯರು ಪೊಲೀಸರಿಗೆ ಫೋನ್‌ ಮಾಡಿ ಮಾಹಿತಿ ನೀಡಿದ ತಕ್ಷಣ ಪೊಲೀಸ್ ಇನ್‌ಸ್ಪೆಕ್ಟರ್ ಗುರುಶಾಂತ ದಾಶ್ಯಾಳ ಅವರ ಜೀಪಿನ ಚಾಲಕರಾಗಿರುವ ಹೆಡ್ ಕಾನ್‌ಸ್ಟೆಬಲ್ ರಮೇಶ ಗೂಳಿ ಹಾಗೂ ಇನ್ನೊಬ್ಬ ಸಿಬ್ಬಂದಿ ಸ್ಥಳಕ್ಕೆ‌ ದೌಡಾಯಿಸಿದ್ದಾರೆ.

ಕಳ್ಳರು ತಪ್ಪಿಸಿಕೊಳ್ಳುವ ವೇಳೆ ಹೆಡ್ ಕಾನ್‌ಸ್ಟೆಬಲ್‌ ರಮೇಶ ಅವರು ಕಳ್ಳನನ್ನು ಹಿಡಿದಾಗ ಆತ ತನ್ನ ಬಳಿ ಇದ್ದ ಚಾಕುವಿನಿಂದ ಇರಿದು, ಪರಾರಿಯಾಗಿದ್ದಾನೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಆಸ್ಪತ್ರೆಗೆ ಭೇಟಿ ನೀಡಿ, ಹಲ್ಲೆಗೊಳಗಾದ ಹೆಡ್ ಕಾನ್‌ಸ್ಟೆಬಲ್ ರಮೇಶ ಗೂಳಿ ಅವರ ಆರೋಗ್ಯ ವಿಚಾರಿಸಿ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಗುರುಶಾಂತ ದಾಶ್ಯಾಳ ಘಟನಾ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲಿಸಿದರು. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.