ಚಡಚಣ: ಸತತವಾಗಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ನದಿ, ಹಳ್ಳ, ಕೊಳ್ಳ, ಕೆರ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಪಟ್ಟಣದ ಹೊರ ವಲಯದಲ್ಲಿರುವ ಪಠಾಣ ಸಾಬ್ ಹಳ್ಳ ಸತತ ಮಳೆಯಿಂದ ತುಂಬಿ ಹರಿಯುತ್ತಿರುವ ಪರಿಣಾಮ ಹೊಲಗದ್ದೆಗಳಿಗೆ ತೆರಳುವ ರೈತರು ತೀವ್ರ ಪರದಾಡುವಂತಾಗಿದೆ.
ಈ ಹಳ್ಳಕ್ಕೆ ಖಾಸಗಿ ಜಮೀನು ಮಾಲೀಕರೊಬ್ಬರು ಅಳವಡಿಸಿದ ಗೇಟ್ ಮುಚ್ಚದ ಪರಿಣಾಮ ಪಕ್ಕದಲ್ಲಿರುವ ಶಾಂತಿನಗರ ಬಡಾವಣೆಯ ಹಲವಾರು ಮನೆಗಳಿಗೆ ನೀರು ನುಗ್ಗಿದೆ.
ಈ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ ಪಟ್ಟಣ ಪಂಚಾಯ್ತಿ ಸದಸ್ಯ ರಾಜೂ ಕೋಳಿ, ಮಳೆಗಾಲ ಬಂದರೆ ಈ ಸಮಸ್ಯೆ ಎದುರಾಗುತ್ತದೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ ಸೇತುವೆ ನಿರ್ಮಿಸಲು ಕೋರಲಾಗಿದ್ದರೂ ಯಾರೊಬ್ಬರು ಗಮನ ಹರಿಸಿಲ್ಲ. ಈ ಮಾರ್ಗವಾಗಿ ಹೊಲ ಗದ್ದೆಗಳಿಗೆ ತೆರಳಲು ರೈತರು ತೀವ್ರ ಸಂಕಷ್ಕಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.
ಮಂಗಳವಾರ ಈ ಹಳ್ಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ತಾವಸೆ, ಕೂಡಲೇ ಹಳ್ಳಕ್ಕೆ ಸೇತುವೆ ನಿರ್ಮಿಸಿ, ಈ ಹಳ್ಳಕ್ಕೆ ಖಾಸಗಿಯವರು ಅಳವಡಿಸಿದ ಗೇಟ್ ತೆಗೆದು ಸುಗಮವಾಗಿ ನೀರು ಹರಿದು ಹೋಗಲು ಅನುವು ಮಾಡಿಕೊಡುವ ಭರವಸೆ ನೀಡಿದರು.
ಭೀಮೆಗೆ ಮತ್ತೆ ಪ್ರವಾಹದ ಭೀತಿ
ಸೋಲಾಪುರ: ಪ್ರಸ್ತುತ ಉಜನಿ ಆಣೆಕಟ್ಟಿನ ಸ್ಥಳೀಯ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಹಾಗೂ ನೀರಿನ ಒಳಹರಿವು ಹೆಚ್ಚಾಗುತ್ತಿರುವುದರಿಂದ ಭೀಮಾ ನದಿಯ ಪ್ರವಾಹ ನಿಯಂತ್ರಣಕ್ಕಾಗಿ ಸೆ.22ರಿಂದ ಹೊರ ಹರಿವು 40 ಸಾವಿರ ಕ್ಯೂಸೆಕ್ ಗಳಿಗೆ ಹೆಚ್ಚಿಸಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ನೀರಿನ ಹೊರಹರಿವು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಉಜಿನಿ ಅಣೆಕಟ್ಟು ನಿರ್ವಹಣಾ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಯು.ದುಂಬಾರೆ ತಿಳಿಸಿದ್ದಾರೆ.
ಭೀಮಾ ನದಿಯ ಸುತ್ತಮುತ್ತಲಿನ ಪ್ರದೇಶದಲ್ಲಿರುವ ನಾಗರಿಕರು ತಮ್ಮ ಜಾನುವಾರುಗಳು ನದಿಗೆ ಪ್ರವೇಶಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಎಲ್ಲ ನಾಗರಿಕರು ಸೂಕ್ತ ಮುನ್ನೆಚ್ಚರಿಕೆ ಕ್ರಮ ಹಾಗೂ ಜಾಗರೂಕತೆಯನ್ನು ತೆಗೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಸೀನಾ ನದಿಗೆ ಪ್ರವಾಹ
ಸೋಲಾಪುರ: ಕಳೆದ ಹತ್ತು ದಿನಗಳಿಂದ ಪ್ರತಿದಿನ ಸುಮಾರು 9–15 ಮೀಲಿ ಮೀಟರ್ ಮಳೆಯಾಗುತ್ತಿದೆ. ಪರಿಣಾಮವಾಗಿ ಎಲ್ಲೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. 4 ದಿನಗಳವರೆಗೆ ಜಿಲ್ಲೆಯಲ್ಲಿ ಯಲ್ಲೊ ಅಲರ್ಟ್ ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಹಾಗೂ ಸೋಮವಾರ ರಾತ್ರಿ ಮಳೆಯಾಗಿದ್ದರಿಂದ ದಕ್ಷಿಣ ಸೋಲಾಪುರ ತಾಲೂಕಿನ ವಡಕಬಾಳ ಗ್ರಾಮದ ಬಳಿ ಸೀನಾ ನದಿಗೆ ಪ್ರವಾಹ ಬಂದಿದೆ. ಅಲ್ಲೇ ಹತ್ತಿರದಲ್ಲಿರುವ ಹತ್ತೂರ ಕ್ರಾಸ್ ಬಳಿ ಸೋಲಾಪುರ- ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ನಿಂತಿದೆ. ಹೊಲಗದ್ದೆಗಳಲ್ಲಿ ಕೆರೆಯಂತೆ ಕಾಣುತ್ತಿವೆ. ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿ ಉಂಟಾಗಿದೆ. ಹೊಲದಲ್ಲಿ ವಾಸಿಸುತ್ತಿರುವ ನಾಗರಿಕರ ಜೀವನ ಅಸ್ತವ್ಯಸ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.