ADVERTISEMENT

Karnataka Rains | ಧಾರಾಕಾರ ಮಳೆಗೆ ನಲುಗಿದ ವಿಜಯಪುರ

ಗುಡುಗು, ಸಿಡಿಲು ಸಹಿತ ಒಂದು ತಾಸು ಮಳೆ, ತಗ್ಗು ಪ್ರದೇಶ ಜಲಾವೃತ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:03 IST
Last Updated 6 ಆಗಸ್ಟ್ 2025, 5:03 IST
ವಿಜಯಪುರ ನಗರದ ಕೆ.ಸಿ.ಮಾರ್ಕೆಟ್‌ ರಸ್ತೆಯಲ್ಲಿ ತುಂಬಿ ಹರಿದ ಮಳೆ ನೀರಿನಲ್ಲೇ ಬೈಕ್‌ ಸವಾರರು ತೆರಳಿದರು –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ 
ವಿಜಯಪುರ ನಗರದ ಕೆ.ಸಿ.ಮಾರ್ಕೆಟ್‌ ರಸ್ತೆಯಲ್ಲಿ ತುಂಬಿ ಹರಿದ ಮಳೆ ನೀರಿನಲ್ಲೇ ಬೈಕ್‌ ಸವಾರರು ತೆರಳಿದರು –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ    

ವಿಜಯಪುರ: ವಿಜಯಪುರ ನಗರ ಸೇರಿದಂತೆ ಮುದ್ದೇಬಿಹಾಳ, ಬಸವನ ಬಾಗೇವಾಡಿ, ನಾಲತವಾಡ, ಬಬಲೇಶ್ವರ, ಕೊಲ್ಹಾರ, ಸಿಂದಗಿ ಸೇರಿದಂತೆ ಹಲವೆಡೆ ಮಂಗಳವಾರ ಸಂಜೆ ಗುಡುಗು, ಸಿಡಿಲು ಸಹಿತ ಒಂದು ತಾಸು ಧಾರಾಕಾರ ಮಳೆ ಸುರಿಯಿತು.

ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ ವಿಜಯಪುರ ನಗರದಲ್ಲಿ ಇಷ್ಟೊಂದು ಬಿರುಸಿನ ಮಳೆ ಆಗಿರಲಿಲ್ಲ. ದಟ್ಟವಾಗಿ ಕವಿದ ಮೋಡಗಳು ಒಮ್ಮೆಲೆ ಧರೆಗೆ ಮುತ್ತಿಕ್ಕುವ ಮೂಲಕ ಕರಾವಳಿ, ಮಲೆನಾಡನ್ನು ನೆನಪಿಸುವಷ್ಟು ಮಳೆ ರಭಸವಾಗಿ ಸುರಿಯಿತು. 

ಎರಡು–ಮೂರು ದಿನಗಳಿಂದ ಬಿಸಿಲಿನ ತಾಪದಿಂದ ಜಿಲ್ಲೆಯ ಜನ ತತ್ತರಿಸಿದ್ದರು. ಮಂಗಳವಾರ ಸಂಜೆ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು.

ADVERTISEMENT

ವಿಜಯಪುರ ನಗರದಲ್ಲಿ ರಭಸದ ಮಳೆಗೆ ಕೆ.ಸಿ.ರಸ್ತೆ, ಬಡಿಕಮಾನ್ ರಸ್ತೆ ಸೇರಿದಂತೆ ಹಲವೆಡೆ ರಸ್ತೆ ಮೇಲೆ ನೀರು ಪ್ರವಾಹದೋಪಾದಿಯಲ್ಲಿ ಹರಿಯಿತು. ಈ ವೇಳೆ ಆಟೋ, ಬೈಕ್‌ ಸಂಚಾರಕ್ಕೆ ಅಡಚಣೆಯಾಯಿತು. ಕೆ.ಸಿ. ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟಿಗೆ ತೊಂದರೆಯಾಯಿತು. ತಗ್ಗು ಪ್ರದೇಶಗಳು ಜಲಾವೃತವಾಗಿ, ಸಮಸ್ಯೆಯಾಯಿತು. ಅನೇಕ ಮನೆಗಳಿಗೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ಮಳೆ ಕೊರತೆಯಿಂದ ಬೆಳೆಗಳು ಬಾಡುವ ಸ್ಥಿತಿ ತಲುಪಿತು. ಇದೀಗ ಧಾರಾಕಾರ ಮಳೆ ಸುರಿದಿರುವುದರಿಂದ ರೈತರ ಮೊಗದಲ್ಲಿ ಸಂತಸ ಮೂಡಿತು. 

ರಸ್ತೆ ಮೇಲೆ ಹರಿದ ಹಳ್ಳ:

ಬಬಲೇಶ್ವರ ತಾಲ್ಲೂಕಿನ ಸಂಗಾಪುರ ಎಸ್.ಎಚ್. ಗ್ರಾಮದ ಸಂಗಾಪುರದಿಂದ ಕಂಬಾಗಿ ಹೋಗುವ ದಾರಿಯಲ್ಲಿ ಹಳ್ಳ ತುಂಬಿ ಹರಿದ ಕಾರಣ ಸಂಚಾರಕ್ಕೆ ಅಡಚಣೆಯಾಯಿತು.

ನಾವೇ  ಮುಚ್ಚುತ್ತೇವೆ: 

ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ವಾಹನ ಸವಾರರು ತಿರುಗಾಡಲು ಉಂಟಾಗಿರುವ ಗುಂಡಿಯನ್ನು ಪುರಸಭೆಯವರು ಮುಚ್ಚಲು ಕ್ರಮ ಕೈಗೊಳ್ಳಿದಿದ್ದಲ್ಲಿ ಗೆಳೆಯರ ಬಳಗದಿಂದಲೇ ದುರಸ್ತಿ ಮಾಡಲು ಮುಂದಾಗುತ್ತೇವೆ ಎಂದು ಗೆಳೆಯರ ಬಳಗದ ಸದಸ್ಯ ಮುಸ್ತಾಕ ಬಾಗವಾನ ತಿಳಿಸಿದ್ದಾರೆ.

ತಾಳಿಕೋಟೆ ತಾಲ್ಲೂಕು ಕಲಕೇರಿ, ರಾಮಪುರ, ತುರುಕಣಗೇರಿ ಅಸ್ಕಿ, ಮೊದಲಾದೆಡೆ ಸೋಮವಾರ ಸಂಜೆ ಅಲ್ಪ ಸಮಯ ಮಳೆಯಾಯಿತು. ಮಳೆಯಿಲ್ಲದೆ ಬಾಡುತ್ತಿದ್ದ ಹತ್ತಿ, ತೊಗರಿ, ಸೂರ್ಯಕಾಂತಿ ಬೆಳೆಗಳಿಗೆ  ಮಳೆ ಒಂದೆರಡು ದಿನ ಆಸರೆಯಾಯಿತೇ ವಿನಃ ರೈತರ ಅಗತ್ಯದಷ್ಟು ಮಳೆಯಾಗದ್ದರಿಂದ ರೈತಾಪಿಗಳು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಲಕೇರಿ ಗ್ರಾಮದಲ್ಲಿ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತು ರಸ್ತೆ ಸಂಚಾರಕ್ಕೆ ತೊಂದರೆಯಾಯಿತು.

ವಿಜಯಪುರ ನಗರದ ಹೂವಿನ ಮಾರ್ಕೆಟ್‌ ರಸ್ತೆ ಮಳೆ ನೀರಿನಿಂದ ತುಂಬಿ ಹರಿಯಿತು –ಪ್ರಜಾವಾಣಿ ಚಿತ್ರ
ಬಡಿ ಕಮಾನ್‌ ಬಳಿ ವಾಹನ ಸಂಚಾರಕ್ಕೆ ಅಡಚಣೆ | ಕೆ.ಸಿ. ಮಾರುಕಟ್ಟೆಯಲ್ಲಿ ಮಳೆಯಿಂದ ಆವಾಂತರ |ತಗ್ಗು ಪ್ರದೇಶಗಳು ಜಲಾವೃತ, ಮನೆಗಳಿಗೆ ನುಗ್ಗಿದ ನೀರು
ಬಬಲೇಶ್ವರ ತಾಲ್ಲೂಕಿನ ಸಂಗಾಪುರ ಎಸ್.ಎಚ್. ಗ್ರಾಮದ ಸಂಗಾಪುರದಿಂದ ಕಂಬಾಗಿ ಹೋಗುವ ದಾರಿಯಲ್ಲಿ ಹಳ್ಳ ತುಂಬಿ ಹರಿದ ಕಾರಣ ಸಂಚಾರಕ್ಕೆ ಅಡಚಣೆಯಾಯಿತು 

ರಸ್ತೆ ಮೇಲೆ ಹರಿದ ಕೊಳಚೆ ನೀರು

ಮುದ್ದೇಬಿಹಾಳ ಪಟ್ಟಣವೂ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಂಗಳವಾರ ಸಂಜೆ ಒಂದು ಗಂಟೆ ಕಾಲ ಮಳೆ ಸುರಿಯಿತು. ಇದರಿಂದ ಪಟ್ಟಣದ ಚರಂಡಿಗಳು ತುಂಬಿ ಹರಿದು ಕೊಳಚೆ ನೀರು ರಸ್ತೆಯ ಮೇಲೆ ಹರಿಯಿತು. ಪಟ್ಟಣದ ಹುಡ್ಕೋಗೆ ತೆರಳುವ ಕಿತ್ತೂರು ರಾಣಿ ಚನ್ನಮ್ಮ ಮಹಾದ್ವಾರದ ಬಳಿ ಮಳೆ ನೀರು ಚರಂಡಿಗೆ ಸೇರದೆ ಅಲ್ಲಿಯೇ ಸಂಗ್ರಹಗೊಂಡು ವಾಹನ ಸವಾರರು ಸಂಚರಿಸುವುದಕ್ಕೆ ತೊಂದರೆ ಅನುಭವಿಸಿದರು. ಈಗಾಗಲೇ ಎರಡ್ಮೂರು ಬಾರಿ ವೃತ್ತದಲ್ಲಿ ಕಾಂಕ್ರಿಟ್ ಹಾಕಿ ರಸ್ತೆ ಸುಧಾರಿಸಿದ್ದರೂ ಮತ್ತೆ ಗುಂಡಿಗಳು ಬೀಳುತ್ತಿದ್ದು ವೃತ್ತದ ಸುತ್ತಮುತ್ತ ಉಂಟಾಗಿರುವ ಗುಂಡಿಗಳನ್ನು ಮುಚ್ಚಿ ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.