ADVERTISEMENT

ಕೋವಿಡ್ ಕಾಲದ ವಿಜಯಪುರದ ‘ಹಿರೋ‘ಗಳು

ಕೋವಿಡ್‌ ಕಟ್ಟಿಹಾಕುತ್ತಿರುವ ಅಧಿಕಾರಿ ಪಡೆ; ಡಿಸಿ ಕಾರ್ಯವೈಕರಿಗೆ ಎಲ್ಲೆಡೆ ಮೆಚ್ಚುಗೆ

ಬಸವರಾಜ ಸಂಪಳ್ಳಿ
Published 7 ಜೂನ್ 2021, 16:54 IST
Last Updated 7 ಜೂನ್ 2021, 16:54 IST
ಪಿ.ಸುನೀಲ್‌ ಕುಮಾರ್
ಪಿ.ಸುನೀಲ್‌ ಕುಮಾರ್   

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕನ್ನು ತಹಬದಿಗೆ ತರುವಲ್ಲಿ, ಸಾವು–ನೋವು ತಗ್ಗಿಸುವಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳ ಪಡೆ ಮುಂಚೂಣಿ ಸೇನಾನಿಗಳಾಗಿ ಹಗಲಿರುಳು ಶ್ರಮಿಸುವ ಮೂಲಕ ‘ಕೋವಿಡ್ ಕಾಲದ ಹಿರೋ’ಗಳಾಗಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಯುವ, ದಕ್ಷ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಗ್ರಾಮೀಣ ಒಳಹೊರಗನ್ನು ಕರಗತ ಮಾಡಿಕೊಂಡಿರುವ ಉತ್ಸಾಹಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲೆಯ ಜನರ ಆರೋಗ್ಯ ಮಿಡಿತ ಅರಿತಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪಸೆ ಮತ್ತು ಕೊಟ್ಟ ಕೆಲಸವನ್ನು ಶ್ರದ್ಧೆ ಮತ್ತು ತಾಳ್ಮೆಯಿಂದ ಅಚ್ಚುಕಟ್ಟಾಗಿ ನಿರ್ವಹಿಸಬಲ್ಲ ಕೋವಿಡ್‌ ನೋಡೆಲ್‌ ಅಧಿಕಾರಿ ಡಾ.ಔದ್ರಾಮ್‌ ಹಾಗೂ ಖಡಕ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ಅವರ ಸಮನ್ವಯದ ಕಾರ್ಯವು ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಐವರು ಅಧಿಕಾರಿಗಳು ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಂತು ಅವರಿಗೆ ಅಗತ್ಯ ಮಾರ್ಗದರ್ಶನ, ಸಲಹೆ, ಸೂಚನೆಗಳನ್ನು ನೀಡುವ ಜೊತೆಗೆ ಎರಡು ತಿಂಗಳಿಂದ ಮನೆ, ನಿದ್ರೆ, ಊಟವನ್ನೂ ಕಡೆಗಣಿಸಿದರೂ ತಾಳ್ಮೆಯನ್ನು ಕಳೆದುಕೊಳ್ಳದೇ ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಹಗಲು–ರಾತ್ರಿ ಎನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ಮುಖ್ಯಮಂತ್ರಿ, ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ನಡೆಸುವ ವಿಡಿಯೊ ಕಾನ್ಫರೆನ್ಸ್‌, ಜಿಲ್ಲಾ ಉಸ್ತುವಾರಿ ಸಚಿವ ಸಭೆಗಳಿಗೆ ಹಾಜರಾಗುವ ಜೊತೆಗೆ ಸ್ವತಃ ತಾವು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಿಡಿದು ಗ್ರಾಮ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ಸಭೆ, ಸಂವಾದ, ವಿಡಿಯೋ ಕಾನ್ಪರೆನ್ಸ್‌ ಮಾಡುವ ಮೂಲಕ ಸರ್ಕಾರದ ಆದೇಶ, ನಿಯಮಗಳ ಬಗ್ಗೆ, ಕೋವಿಡ್‌ ನಿಯಂತ್ರಣದ ಬಗ್ಗೆ ಚರ್ಚಿಸಿ, ಸಲಹೆ, ಸೂಚನೆಗಳನ್ನು ನೀಡುವ ಮೂಲಕ ಎಲ್ಲರನ್ನು ಕೋವಿಡ್‌ ನಿರ್ವಹಣೆಯಲ್ಲಿ ಅಚ್ಚುಕಟ್ಟಾಗಿ ತೊಡಗಿಸಿಕೊಂಡಿದ್ದಾರೆ.

ಕೇವಲ ಹವಾನಿಯಂತ್ರಿತ ಕೊಠಡಿಯಲ್ಲಿ ಕೂತು ಆದೇಶ ಹೊರಡಿಸಲು, ಸಭೆ ನಡೆಸಲು ಸೀಮಿತವಾಗದೇ ಸ್ವತ: ಕಾರ್ಯಕ್ಷೇತ್ರಕ್ಕೆ ಇಳಿದು ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಅರಿತು, ಅಗತ್ಯ ಕ್ರಮಕೈಗೊಂಡಿದ್ದಾರೆ.

ಜಿಲ್ಲಾಸ್ಪತ್ರೆ ಮಾತ್ರವಲ್ಲದೇ, ಖಾಸಗಿ ಕೋವಿಡ್‌ ಆಸ್ಪತ್ರೆಗಳಿಗೆ ಸ್ವತಃ ಜಿಲ್ಲಾಧಿಕಾರಿ ಭೇಟಿ ನೀಡಿ ಅಲ್ಲಿಯ ವೈದ್ಯರು, ಮುಖ್ಯಸ್ಥರೊಂದಿಗೂ ಚರ್ಚಿಸಿ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿ ಎಲ್ಲಿಯೂ ಲೋಪವಾಗದಂತೆ ಎಚ್ಚರ ವಹಿಸಿದ್ದಾರೆ.

ಎಲ್ಲೆಡೆಯಂತೆ ಜಿಲ್ಲೆಯಲ್ಲೂ ಆಕ್ಸಿಜನ್‌, ರೆಮ್‌ಡಿಸಿವಿರ್‌, ಬೆಡ್‌, ವೆಂಟಿಲೇಟರ್‌ ಕೊರತೆ ಎದುರಾದರೂ ಎಲ್ಲಿಯೂ ಲೋಪವಾಗದಂತೆ ಎಚ್ಚರ ವಹಿಸಿ ಅವುಗಳನ್ನು ಕಾಲಕಾಲಕ್ಕೆ ವ್ಯವಸ್ಥೆ ಮಾಡುವ ಮೂಲಕ ಹೆಚ್ಚಿನ ಜೀವ ಹಾನಿಯಾಗದಂತೆ ಕ್ರಮಕೈಗೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಜಿಲ್ಲೆಯ ಕೆಲವು ಜನಪ್ರತಿನಿಧಿಗಳು ಜನರ ಕೈಗೂ ಸಿಗದೇ, ದೂರವಾಣಿ ಸಂಪರ್ಕಕ್ಕೂ ಸಿಗದೇ ಕೈಚೆಲ್ಲಿ ಅವಿತುಕೊಂಡಿದ್ದ ಸಂದರ್ಭದಲ್ಲಿ ದಿನದ 24 ತಾಸು ಜನರ ಸಂಕಷ್ಟಕ್ಕೆ ಸ್ಪಂದಿಸಿದ ಕೀರ್ತಿ ಈ ಅಧಿಕಾರಿ ವರ್ಗಕ್ಕೆ ಸಲ್ಲುತ್ತದೆ.

ಆರಂಭದಲ್ಲೇ ಬೆಡ್‌ ಮ್ಯಾನೇಜ್‌ಮೆಂಟ್‌ ಪೋರ್ಟಲ್‌ ಆರಂಭಿಸಿ, ರೋಗಿಗಳಿಗೆ ಹಾಸಿಗೆ ಲಭಿಸುವಂತೆ ಜಿಲ್ಲಾಧಿಕಾರಿ ಸುನೀಲ್‌ ಕುಮಾರ್‌ ಮಾಡಿದರು. ಜೊತೆಗೆ ತುರ್ತು ಇರುವವರಿಗೆ ಆದ್ಯತೆ ಮೇರೆಗೆ ರೆಮ್‌ಡಿಸಿವಿರ್‌, ಆಮ್ಲಜನಕ ಒದಗಿಸುವ ಕಾರ್ಯ ಮಾಡಿದರು.

ಆಕ್ಸಿಜನ್‌ ತರುವ ಲಾರಿ ಚಾಲಕನೊಂದಿಗೆ ಸ್ವತಃ ಜಿಲ್ಲಾಧಿಕಾರಿ ಸುನೀಲ್‌ಕುಮಾರ್‌ ನೇರ ಸಂಪರ್ಕ ಇಟ್ಟುಕೊಂಡು ಜಿಲ್ಲೆಗೆ ಆಕ್ಸಿಜನ್‌ ಪೂರೈಕೆಗೆ ಆದ್ಯತೆ ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ರೆಮ್‌ಡಿಸಿವಿರ್‌ ಇಂಜೆಕ್ಷನ್‌ ಅಧಿಕ ದರಕ್ಕೆ ಮಾರಾಟವಾಗುವುದನ್ನು ನಿಯಂತ್ರಿಸಲು ಪೊಲೀಸರು ಒತ್ತು ನೀಡಿ ಕಾಳಸಂತೆಕೋರರಿಗೆ ಕಡಿವಾಣ ಹಾಕುವಲ್ಲಿ, ನಗರ, ಗ್ರಾಮೀಣ ಪ್ರದೇಶದಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಹಾಗೂ ಜನ ಅನಗತ್ಯವಾಗಿ ತಿರುಗಾಡದಂತೆ ಪೊಲೀಸಸರು ಕಡಿವಾಣ ಹಾಕುವ ಮೂಲಕ ಕೋವಿಡ್‌ ನಿಯಂತ್ರಣಕ್ಕೆ ಆದ್ಯತೆ ನೀಡಿದ್ದಾರೆ.

***

ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರದಿಂದ ಕೋವಿಡ್‌ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸುವ ಮೂಲಕ ಸಾವು–ನೋವು ತಡೆಯಲು ಸಾಧ್ಯವಾಯಿತು. ಇದು ಬಹಳ ಖುಷಿ ನೀಡುವ ಸಂಗತಿ

-ಪಿ.ಸುನೀಲ್‌ ಕುಮಾರ್‌, ಜಿಲ್ಲಾಧಿಕಾರಿ

***

ಗ್ರಾಮೀಣ ಭಾಗದಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗದಂತೆ ತಡೆಯುವಲ್ಲಿ ಆಶಾ, ಅಂಗನವಾಡಿ, ಪಿಡಿಒ ಅವರರೊಂದಿಗೆ ಯೋಜನಾ ಬದ್ಧವಾಗಿ ಶ್ರಮಿಸಿದ ಬಗ್ಗೆ ತೃಪ್ತಿ ಇದೆ

–ಗೋವಿಂದ ರೆಡ್ಡಿ, ಸಿಇಒ, ಜಿಲ್ಲಾ ಪಂಚಾಯ್ತಿ

***

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಕ್ಸಿಜನ್‌, ರೆಮ್‌ಡಿಸಿವಿರ್‌ ಜಿಲ್ಲೆಯಲ್ಲಿ ಕೊರತೆಯಾಗದಂತೆ ಸಮರ್ಪಕವಾಗಿ ನಿರ್ವಹಣೆ ಮಾಡಿದ ಖುಷಿ ಇದೆ

–ಡಾ.ಔದ್ರಾಮ್‌, ಕೋವಿಡ್‌ ನೋಡೆಲ್‌ ಅಧಿಕಾರಿ

***

ಜಿಲ್ಲಾಧಿಕಾರಿ ಅವರ ಮಾರ್ಗದರ್ಶನದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸಿದ ಹೆಮ್ಮೆ ಇದೆ. ಜಿಲ್ಲೆಯಲ್ಲಿ ಕೋವಿಡ್‌ ಹರಡುವಿಕೆ, ಸಾವಿನ ಪ್ರಮಾಣ ತೀವ್ರಗತಿಯಲ್ಲಿ ಕಡಿಮೆಯಾಗಲು ವೈದ್ಯ ಸಿಬ್ಬಂದಿ ಶ್ರಮ ಅಭಿನಂದನೀಯ

–ಡಾ.ಮಹೇಂದ್ರ ಕಾಪಸೆ, ಡಿಎಚ್‌ಒ, ವಿಜಯಪುರ

***

ಕೋವಿಡ್‌ ವ್ಯಾಪಕವಾಗಿ ಹರಡಂತೆ ತಡೆಯುವಲ್ಲಿ ಲಾಕ್‌ಡೌನ್‌ ಕಠಿಣವಾಗಿ ಜಾರಿಗೊಳಿಸುವ ಸವಾಲು ಇತ್ತು. ನಮ್ಮ ಸಿಬ್ಬಂದಿ ಇದನ್ನು ಯಶಸ್ವಿಯಾಗಿ ಮಾಡಿದ್ದಾರೆ. ಜನರೂ ಸಹಕರಿಸಿದ್ದಾರೆ

–ಅನುಪಮ್‌ ಅಗರವಾಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.