
ವಿಜಯಪುರ: ‘ಭಾರತವೆಂದರೆ ಕೇವಲ ಸಂವಿಧಾನ, ಅಂಬೇಡ್ಕರ್, ರಾಷ್ಟ್ರ ಧ್ವಜ ಮಾತ್ರವಲ್ಲ’ ಎಂದು ಧರ್ಮ ಜಾಗರಣ ಪ್ರಾಂತ ಸದಸ್ಯ ಹಣಮಂತ ಮಳಲಿ ಹೇಳಿದರು.
ಇಲ್ಲಿನ ಜಲನಗರದ ಬಿಡಿಎ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬೃಹತ್ ಹಿಂದೂ ಸಮ್ಮೇಳನದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಮಾತನಾಡಿದರು.
‘ಇಡೀ ವಿಶ್ವಕ್ಕೆ ಮೊದಲ ಬಾರಿಗೆ ವಿಮಾನ, ಯೋಗ, ಸೊನ್ನೆ, ಶಿಲ್ಪಕಲೆ, ವಸ್ತ್ರ ನೀಡಿದ ದೇಶ ಭಾರತ ಎಂಬುದನ್ನು ಮರೆತು ಸ್ವಾಭಿಮಾನ ಶೂನ್ಯರಾಗಬಾರದು’ ಎಂದು ಹೇಳಿದರು.
‘ಹಿಂದುಗಳಲ್ಲಿ ದೇವರು, ಉಪಾಸನ, ಆಚಾರ-ವಿಚಾರ ಬೇರೆಯಾದರೂ ಗಂಗಾ ಪೂಜೆ, ಭೂಮಿ ಪೂಜೆ, ಹೆತ್ತ ತಂದೆ, ತಾಯಿ ಪೂಜೆ, ಲಕ್ಷ್ಮಿ ಪೂಜೆ ಮಾಡುವ ಮೌಲ್ಯಾಧಾರಿತ ಜೀವನ ಪದ್ಧತಿ ಒಂದೇ ಇದೆ’ ಎಂದರು.
‘10 ಸಾವಿರ ವರ್ಷಗಳ ಕಾಲ ಆವಿಷ್ಕಾರಗೊಂಡು, ರೂಪುಗೊಂಡ ಧರ್ಮವೇ ಹಿಂದೂ ಧರ್ಮವಾಗಿದೆ, ಹಿಂಸೆ, ಹೀನತನ ಒಪ್ಪದ ಧರ್ಮವೇ ಹಿಂದೂ ಧರ್ಮವಾಗಿದೆ’ ಎಂದರು.
‘ಯಾವುದೇ ಪಕ್ಷಕ್ಕೆ ಮತ ಹಾಕಿ. ಆದರೆ, ರಾಷ್ಟ್ರದ ಹಿತ ಕಾಯುವವರಿಗೆ ಮಾತ್ರ ಮತ ಹಾಕಿ. ಜಾತಿ, ಮತ, ಪಂಥ, ವೈಯಕ್ತಿಕ ವಿಷಯ ಬಿಟ್ಟು ದೇಶದ ಹಿತಕ್ಕಾಗಿ ಶ್ರಮಿಸಿ’ ಎಂದರು.
‘ರುದ್ರಾಕ್ಷಿ, ವಿಭೂತಿ, ಕಾವಿ ಧರಿಸಿದ ಕೆಲ ಸ್ವಾಮೀಜಿಗಳೇ ಇಂದು ನಾವು ಹಿಂದುಗಳಲ್ಲ ಎಂದು ಹೇಳತೊಡಗಿದ್ದಾರೆ. ಅಜ್ಞಾನಪೂರ್ವಕವಾಗಿ ಎಂದೋ ಆಚರಣೆಯಲ್ಲಿದ್ದ ಅಸ್ಪೃಶ್ಯತೆ ಬಗ್ಗೆ ಇಂದಿಗೂ ಹೇಳಿಕೊಂಡು ಹೋದರೆ ಆಗದು’ ಎಂದರು.
‘ವಿಶ್ವವೇ ಇಂದು ಭಾರತಕ್ಕೆ ಹೆದರುವ ಕಾಲ ಬಂದಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಭಾರತೀಯ ವಸ್ತುಗಳನ್ನೇ ಖರೀದಿಸಬೇಕು, ವಿದೇಶಿ ವಸ್ತುಗಳನ್ನು ನಿರಾಕರಿಸಬೇಕು, ಪರಿಸರ ಬೆಳೆಸಬೇಕು, ಕುಟುಂಬ ಸಂಸ್ಕಾರ ಬಲಪಡಿಸಬೇಕು, ನಾಗರಿಕ ಕರ್ತವ್ಯ ಪಾಲನೆ ಮಾಡಬೇಕು, ಜಾತಿ–ಭೇದಗಳ ದೂರ ಸರಿಸಬೇಕು, ಸಮರಸ ಸಮಾಜ ರಚಿಸಬೇಕು’ ಎಂದರು.
ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಕೆಸರಟ್ಟಿಯ ಸೋಮಲಿಂಗ ಸ್ವಾಮೀಜಿ, ಬುರಾಣಪುರದ ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು.
ಹಿಂದೂ ಸಮ್ಮೇಳನದ ಸಂಚಾಲನಾ ಸಮಿತಿ ಸಂಚಾಲಕ ಸುರೇಶ ದೇಸಾಯಿ, ಡಾ.ಪ್ರಾಣೇಶ ಜಹಾಗೀರದಾರ, ಲಿಂಗರಾಜ ಹಿರೇಮಠ, ಚಂದ್ರು ಚೌಧರಿ, ಶ್ರೀಧರ ನಾರಾಯಣಕರ, ನಾರಾಯಣಸಿಂಗ್ ಹಜೇರಿ, ಭುವನೇಶ್ವರಿ ಕೋರವಾರ, ಸುನೀತಾ ಪಾಟೀಲ, ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ, ವಿಕಾಸ ಪದಕಿ ಇದ್ದರು.
ಆರ್. ಎಸ್. ಎಸ್ ತನ್ನ ವಿರುದ್ಧದ ಯಾವುದೇ ಟೀಕೆಗಳಿಗೆ ಉತ್ತರ ನೀಡುವುದಿಲ್ಲ. ಆರ್‌ಎಸ್‌ಎಸ್ ವಿರೋಧಿಸುವವರು ಸಂಘಕ್ಕೆ ಬರಬೇಕು ತಿಳಿದುಕೊಳ್ಳಬೇಕು ಅರ್ಥೈಸಿಕೊಳಬೇಕು -ಹಣಮಂತ ಮಳಲಿ, ಸದಸ್ಯ ಧರ್ಮ ಜಾಗರಣ ಪ್ರಾಂತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.