ಆಂದೋಲ ಸಿದ್ಧಲಿಂಗ ಸ್ವಾಮೀಜಿ
ವಿಜಯಪುರ: ‘ಸಂಘ ಪರಿವಾರ ಬಲಿಷ್ಠವಾದರೆ ತಮ್ಮ ಸೋಲು ಖಚಿತ ಎಂಬ ಭಯದಿಂದ ಪ್ರಿಯಾಂಕ್ ಖರ್ಗೆ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ‘ ಎಂದು ಶಿವಸೇನೆ (ಏಕನಾಥ ಶಿಂಧೆ ಬಣ) ರಾಜ್ಯ ಘಟಕದ ಅಧ್ಯಕ್ಷ ಆಂದೋಲ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಘ ಪರಿವಾರದ ಪಥಸಂಚಲನದಲ್ಲಿ ಭಾಗಿಯಾದ ಪಿಡಿಒಗೆ ಅಮಾನತ್ತು ಮಾಡಲಾಗಿದೆ. ಆದರೆ ಅನೇಕ ಭ್ರಷ್ಟ ಪಿಡಿಒಗಳು ಅವರ ಸುತ್ತ ಸುತ್ತುತ್ತಾರೆ ಅವರನ್ನು ಅಮಾನತ್ತು ಮಾಡಲಿ‘ ಎಂದರು.
‘ಮಾತಿನ ಭರದಲ್ಲಿ ಆಡಿದ ಮಾತುಗಳನ್ನೇ ದೊಡ್ಡದು ಮಾಡಿ ಕನೇರಿ ಶ್ರೀಗಳಿಗೆ ಅಪಮಾನ ಮಾಡುವ ಕೆಲಸ ನಡೆಯುತ್ತಿದೆ. ಅಂಬಿಗರ ಚೌಡಯ್ಯನವರು ಸಹ ಕಟುವಾಗಿ ತಮ್ಮ ವಚನಗಳಲ್ಲಿ ಅನ್ಯಾಯವನ್ನು ವಿರೋಧಿಸಿದ್ದಾರೆ. ಇದೇ ಮಾದರಿಯಲ್ಲಿ ಕನೇರಿ ಶ್ರೀಗಳು ಒಡಕು ಮೂಡಿಸುವುದರ ವಿರುದ್ಧ ಕಿಡಿಕಾರಿದ್ದಾರೆ’ ಎಂದರು.
‘ಲಿಂಗಾಯತ ಮಹಾಸಭೆಗೆ ಸೂತ್ರಧಾರಿಯಾಗಿರುವ ಜಿಲ್ಲೆಯ ಉಸ್ತುವಾರಿ ಸಚಿವರು ಶ್ರೀಗಳಿಗೆ ಕರೆ ಮಾಡಿ ಈ ವಿಷಯದ ಬಗ್ಗೆ ಮನವರಿಕೆ ಮಾಡಿಕೊಟ್ಟು ಕ್ಷಮೆ ಕೇಳುವಂತೆ ಹೇಳಿದ್ದರೆ ಈ ವಿಷಯ ದೊಡ್ಡದಾಗುತ್ತಿರಲಿಲ್ಲ. ಆದರೆ, ಹಿಂಬಾಲಕರಿಂದ ಈ ವಿಷಯವನ್ನು ದೊಡ್ಡದು ಮಾಡಿದ್ದು ಯಾರು? ಜಿಲ್ಲೆಯಲ್ಲಿ ಎಗ್ಗಿಲ್ಲದೇ ಗಾಂಜಾ ದೊರಕುತ್ತಿದೆ. ಈ ಎಲ್ಲವುಗಳನ್ನು ಕಡಿವಾಣ ಹಾಕುವ ಬದಲು ಈ ವಿಷಯವನ್ನು ದೊಡ್ಡದು ಮಾಡುವುದು ಅಗತ್ಯವಿರಲಿಲ್ಲ’ ಎಂದರು.
‘ಈ ವಿವಾದವನ್ನು ಕನೇರಿ ಶ್ರೀಗಳು ತಿಳಿಗೊಳಿಸಬೇಕು. ಆ ರೀತಿ ಶಬ್ದ ಬಳಕೆಯನ್ನೂ ನಾನು ಸಹ ಒಪ್ಪುವುದಿಲ್ಲ, ನುಡಿದರೆ ಮುತ್ತಿನ ಹಾರದಂತಿರಬೇಕು ಎನ್ನುವುದು ನನ್ನ ಭಾವನೆ ಕೂಡಾ ಹೌದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.