ADVERTISEMENT

ಹಿಟ್ಟಿನಳ್ಳಿ, ಉತ್ನಾಳ ಕೆರೆಗೆ ‘ನರೇಗಾ’ ಜೀವಕಳೆ

ಕೃಷಿ ಹೊಂಡ, ಬದು ನಿರ್ಮಾಣ, ಘನತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಿದ ಪಂಚಾಯ್ತಿ

ಬಸವರಾಜ ಸಂಪಳ್ಳಿ
Published 28 ಜನವರಿ 2022, 19:30 IST
Last Updated 28 ಜನವರಿ 2022, 19:30 IST
ರಾಜಶೇಖರ ಆರ್‌.ಬಿರಾದಾರ
ರಾಜಶೇಖರ ಆರ್‌.ಬಿರಾದಾರ   

ವಿಜಯಪುರ: ವಿಜಯಪುರ ನಗರಸಮೀಪದ ಹಿಟ್ಟಿನಳ್ಳಿ ಮತ್ತು ಉತ್ನಾಳ ಗ್ರಾಮಗಳಲ್ಲಿ ಬಹುವರ್ಷಗಳಿಂದ ಪಾಳು ಬಿದ್ದಿದ್ದ ಎರಡು ಕೆರೆಗಳನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳು ತೆಗೆದು ಕಾಯಕಲ್ಪ ನೀಡಲಾಗಿದ್ದು, ಕೆರೆಗಳಿಗೆ ಜೀವಕಳೆ ಮರುಕಳಿಸಿದೆ.

ಕೆರೆ ಅಭಿವೃದ್ಧಿ ಯೋಜನೆಯಡಿ ತಲಾ ₹ 5 ಲಕ್ಷ ಖರ್ಚು ಮಾಡಿ ಎರಡೂ ಗ್ರಾಮಗಳ ಕೆರೆಯ ಹೂಳು ತೆಗೆಯಲಾಗಿದ್ದು, ಇದೀಗ ಅಂತರ್ಜಲ ಹೆಚ್ಚಳವಾಗಿ ನೀರು ಸಂಗ್ರಹವಾಗಿದೆ. ಊರಿನ ಜನ, ಜಾನುವಾರುಗಳ ಬಳಕೆಗೆ ಆಧಾರವಾಗಿದೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ ಆರ್‌.ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆರೆಗಳಲ್ಲಿ ವರ್ಷಪೂರ್ತಿ ನೀರು ಇರುವಂತೆ ಮಾಡಲು ನಾಲೆ ಮೂಲಕ ನೀರು ತುಂಬಿಸಲಾಗುತ್ತಿದೆ.ಈ ಮೊದಲು ಹಿಟ್ಟಿನಳ್ಳಿ ಮತ್ತು ಉತ್ನಾಳ ಗ್ರಾಮಗಳಿಗೆ ಬೇಸಿಗೆಯಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಈಗ ಕೆರೆಗಳಲ್ಲಿ ಅಂತರ್ಜಲ ಹೆಚ್ಚಳವಾಗಿರುವುದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ನೀಗಿದೆ ಎಂದರು.

ADVERTISEMENT

₹ 20 ಲಕ್ಷ ವೆಚ್ಚದಲ್ಲಿಹಿಟ್ಟಿನಳ್ಳಿ ಕೆರೆಗೆ ಹಾಗೂ ₹ 10 ಲಕ್ಷ ವೆಚ್ಚದಲ್ಲಿ ಉತ್ನಾಳ ಕೆರೆ ಏರಿಗೆ ಕಲ್ಲು ಅಳವಡಿಕೆ ಮಾಡಿ, ಫೆನ್ಸಿಂಗ್‌ ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ವರವಾದ ನರೇಗಾ:ಹಿಟ್ಟಿನಳ್ಳಿ, ಉತ್ನಾಳ ಗ್ರಾಮಗಳ ಕೂಲಿಕಾರ್ಮಿಕರಿಗೆ ನರೇಗಾ ವರದಾನವಾಗಿ ಪರಿಣಮಿಸಿದೆ. 2020–21ನೇ ಸಾಲಿನಲ್ಲಿ ಗುರಿ (28 ಸಾವಿರ ಮಾನವ ದಿನ) ಮೀರಿ 40,370 ಮಾನವ ದಿನಗಳನ್ನು ಸೃಜಿಸಲಾಗಿದೆ. ಈ ಮೂಲಕ ಗ್ರಾಮಗಳ ಜನರು ಕೆಲಸ ಅರಸಿ ಬೇರೆಡೆಗೆ ಗುಳೇ ಹೋಗುವುದನ್ನು ತಪ್ಪಿಸಲಾಗಿದೆ.

12 ಕೃಷಿ ಹೊಂಡಗಳನ್ನು ರೈತರ ಜಮೀನುಗಳಲ್ಲಿ ನಿರ್ಮಾಣ ಮಾಡಲಾಗಿದೆ. ಅಲ್ಲದೇ, 276 ರೈತರ ಜಮೀನುಗಳಲ್ಲಿ ಬದು ನಿರ್ಮಾಣ ಮಾಡಲಾಗಿದೆ. ವಿಶೇಷವೇನೆಂದರೆ ಸುಮಾರು ನಾಲ್ಕು ದಶಕದಿಂದ ಪಾಳು ಬಿದ್ದಿದ್ದ ಹಿಟ್ಟಿನಳ್ಳಿ ಗ್ರಾಮದ ಬಾವಿಯನ್ನು ಅಭಿವೃದ್ಧಿ ಪಡಿಸಿ, ಸುತ್ತಲೂ ಕಂಪೌಂಡ್‌ ನಿರ್ಮಾಣ ಮಾಡುವ ಮೂಲಕ ಚಂದಗೊಳಿಸಲಾಗಿದೆ.

ಘನತ್ಯಾಜ್ಯ ವಿಲೇವಾರಿ ಘಟಕ:ಹಿಟ್ಟಿನಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ನರೇಗಾದಡಿ ₹ 9.5 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿದೆ. ಗ್ರಾಮದಲ್ಲಿ ಮನೆ, ಮನೆಯಿಂದ ಕಸವನ್ನು ಸಂಗ್ರಹಿಸಿ ಒಂದೆಡೆ ವಿಲೇವಾರಿ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಾಂಪೋಸ್ಟ್‌ ಗೊಬ್ಬರ ತಯಾರಿಸುವ ಉದ್ದೇಶವಿದೆ ಎಂದು ಪಿಡಿಒ ಬಿರಾದಾರ ಹೇಳಿದರು.

ಶಾಲಾ ಕಂಪೌಂಡ್‌:ನರೇಗಾದಡಿಹಿಟ್ಟಿನಳ್ಳಿ ಉರ್ದು ಬಾಲಕರ ಶಾಲೆಯಲ್ಲಿ ₹ 8 ಲಕ್ಷ ಮೊತ್ತದಲ್ಲಿ ಬಿಸಿಯೂಟ ಕೊಠಡಿ ಮತ್ತು ಶಾಲಾ ಕಂಪೌಂಡ್‌ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಉತ್ನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಶಾಲಾ ಕಂಪೌಂಡ್‌, ಉತ್ನಾಳ ಎಲ್‌.ಟಿ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಕೊಣೆ ನಿರ್ಮಾಣ ಮಾಡುವ ಮೂಲಕ ಇತರೆ ಪಂಚಾಯ್ತಿಗಳಿಗೆ ಮಾದರಿ ಎನ್ನುವಂತ ಕಾರ್ಯಗಳನ್ನು ಮಾಡಲಾಗಿದೆ.

ಹಿಟ್ಟಿನಳ್ಳಿ ಗ್ರಾಮದಲ್ಲಿ ಗ್ರಾಮೀಣ ಗೋದಾಮು ಮತ್ತು ಎನ್‌ಆರ್‌ಎಲ್‌ಎಂ ಶೆಡ್‌ ನಿರ್ಮಿಸುವ ಮೂಲಕ ಗ್ರಾಮ ಪಂಚಾಯ್ತಿ ಮಾದರಿ ಕೆಲಸವನ್ನು ಮಾಡಿದೆ.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಐದು ಸರ್ಕಾರಿ ಶಾಲೆಗಳಲ್ಲಿ₹4.35 ಲಕ್ಷ ಮೊತ್ತದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ ಎಂದು ಪಿಡಿಒ ತಿಳಿಸಿದರು.

ಹಿಟ್ಟಿನಳ್ಳಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಮತ್ತು ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ತಲಾ ₹ 2 ಲಕ್ಷ ಖರ್ಚು ಮಾಡಿ ಮಳೆನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ತೊಂದರೆಗೆ ಒಳಗಾದವರಿಗೆ ಆಹಾರ ಕಿಟ್‌, ಔಷಧ ವಿತರಿಸಲಾಗಿದೆ. ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ ಬಟ್ಟೆಯನ್ನು ನೀಡುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ.

ಹಿಟ್ಟಿನಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ, ಉಪಾಧ್ಯಕ್ಷ ಮತ್ತು ಸದಸ್ಯರು, ಗ್ರಾಮಸ್ಥರು ಹಾಗೂ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆಜಿಲ್ಲೆಯಲ್ಲೇ ಮಾದರಿ ಗ್ರಾಮವನ್ನಾಗಿ ರೂಪಿಸಲು ಆದ್ಯತೆ ನೀಡಲಾಗಿದೆ

– ರಾಜಶೇಖರ ಆರ್‌.ಬಿರಾದಾರ, ಪಿಡಿಒ, ಹಿಟ್ಟಿನಳ್ಳಿ

ಹಿಟ್ಟಿನಳ್ಳಿ ಗ್ರಾ.ಪಂ.ವತಿಯಿಂದ ನರೇಗಾ ಯೋಜನೆಯಡಿ ಕೆರೆ ಹೂಳು, ಶಾಲಾ ಕಂಪೌಂಡ್‌, ಕೃಷಿ ಹೊಂಡ, ಬದು ನಿರ್ಮಾಣದಂತಹ ಅಭಿವೃದ್ಧಿ ಕಾರ್ಯ ಮಾಡಿರುವುದು ಶ್ಲಾಘನೀಯ

– ಗೋವಿಂದ ರೆಡ್ಡಿ,‌‌ಸಿಇಒ, ಜಿ.ಪಂ.ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.