ADVERTISEMENT

ಕೋವಿಡ್‌ ನಿರ್ವಹಣೆ | ರಾಜ್ಯ ಸರ್ಕಾರ ವಿಫಲ; ಶಾಸಕ ಎಚ್.ಕೆ.ಪಾಟೀಲ ಆರೋಪ

‘ಸ್ಪೀಕ್‌ ಆಫ್‌ ಕರ್ನಾಟಕ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 11:59 IST
Last Updated 31 ಜುಲೈ 2020, 11:59 IST
ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಚ್.ಕೆ.ಪಾಟೀಲ ಅವರು ‘ಕೊರೊನಾದಲ್ಲೂ ಭ್ರಷ್ಟಾಚಾರ; ಬಿಜೆಪಿ ಸರ್ಕಾರದ ಸಂಸ್ಕಾರ’ ಪುಸ್ತಕವನ್ನು ಬಿಡುಗಡೆಗೊಳಿಸಿದರು 
ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಚ್.ಕೆ.ಪಾಟೀಲ ಅವರು ‘ಕೊರೊನಾದಲ್ಲೂ ಭ್ರಷ್ಟಾಚಾರ; ಬಿಜೆಪಿ ಸರ್ಕಾರದ ಸಂಸ್ಕಾರ’ ಪುಸ್ತಕವನ್ನು ಬಿಡುಗಡೆಗೊಳಿಸಿದರು    

ವಿಜಯಪುರ: ರಾಜ್ಯ ಬಿಜೆಪಿ ಸರ್ಕಾರ ಕೋವಿಡ್‌ ತಡೆಗಟ್ಟುವಲ್ಲಿ ಹಾಗೂ ರೋಗದಿಂದ ಬಳಲುತ್ತಿರುವ ಜನರಿಗೆ ಉಪಚಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಉಸ್ತುವಾರಿ, ಶಾಸಕಎಚ್.ಕೆ.ಪಾಟೀಲ ಆರೋಪಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ಸ್ಪೀಕ್‌ ಆಫ್‌ ಕರ್ನಾಟಕ’ ಈ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋವಿಡ್‌ನಿಂದ ರಾಜ್ಯದಲ್ಲಿ ಸಂಕಷ್ಟದ ಸನ್ನಿವೇಶ ಎದುರಾಗಿದೆ. ಈ ಸಂದರ್ಭದಲ್ಲಿ ಮಾನವೀಯತೆ, ಅನುಕಂಪದಿಂದ ಜನರ ಸೇವೆ ಮಾಡಬೇಕಾಗಿದ್ದ ರಾಜ್ಯ ಸರ್ಕಾರವೇ ಆರೋಗ್ಯ ಮತ್ತು ಸುರಕ್ಷ ಉಪಕರಣಗಳ ಖರೀದಿಯಲ್ಲಿ ₹ 2 ಸಾವಿರ ಕೋಟಿಗೂ ಅಧಿಕ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿದರು.

ADVERTISEMENT

ಆರೇಳು ವರ್ಷಗಳಷ್ಟು ಹಳೆಯದಾದ ನೂರಾರು ವೆಂಟಿಲೇಟರ್‌ಗಳನ್ನು ಖರೀದಿಸಲಾಗಿದ್ದು, ಈ ಬಗ್ಗೆ ಅಧಿಕಾರಿಗಳೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದರು.

₹50 ಮೊತ್ತದ ಮಾಸ್ಕ್‌ಗಳನ್ನು ₹ 100, ₹ 200, ₹ 250 ಕೊಟ್ಟು ಖರೀದಿ ಮಾಡಲಾಗಿದೆ. 500 ಎಂಎಲ್‌ ಸ್ಯಾನಿಟೈಸರ್‌ ಬಾಟಲ್‌ಗಳಿಗೆ ₹ 250, ₹ 750 ನೀಡಲಾಗಿದೆ ಎಂದು ಆರೋಪಿಸಿದರು.

ಆರೋಗ್ಯ ಇಲಾಖೆಯಿಂದ ₹ 700 ಕೋಟಿ, ಬಿಬಿಎಂಸಿ ಮತ್ತು ನಗರ ಸ್ಥಳೀಯ ಸಂಸ್ಥೆಗಳು ₹ 200 ಕೋಟಿ, ವೈದ್ಯಕೀಯ ಶಿಕ್ಷಣ ಇಲಾಖೆ ₹ 815 ಕೋಟಿ, ಜಿಲ್ಲಾಡಳಿತಗಳಿಗೆ ನೀಡಿರುವ ಎಸ್‌ಡಿಆರ್‌ಎಫ್‌ ಹಣ ₹ 742 ಕೋಟಿ, ಕಾರ್ಮಿಕ ಇಲಾಖೆ ₹ 1 ಸಾವಿರ ಕೋಟಿ, ಸಮಾಜ ಕಲ್ಯಾಣ, ಆಹಾರ, ಶಿಕ್ಷಣ, ಪೊಲೀಸ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಒಳಗೊಂಡಂತೆ ಇತರೆ ಇಲಾಖೆಗಳು ₹ 500 ಕೋಟಿ, ಕೋವಿಡ್‌ ಆರೈಕೆ ಕೇಂದ್ರಕ್ಕೆ ಹಾಸಿಗೆ, ದಿಂಬು ಖರೀದಿಗೆ ₹ 160 ಕೋಟಿ ಹಾಗೂ ಕೇಂದ್ರ ಸರ್ಕಾರ ಖರೀದಿಸಿ ಪೂರೈಕೆ ಮಾಡಿರುವ ಉಪಕರಣ ಮೌಲ್ಯ ₹ 50 ಕೋಟಿ ಸೇರಿದಂತೆ ಒಟ್ಟು ₹ 4,167 ಕೋಟಿ ವೆಚ್ಚ ಮಾಡಲಾಗಿದೆ. ಇದರಲ್ಲಿ ಅರ್ಧದಷ್ಟು ಹಣವನ್ನು ಸಚಿವರು, ಅಧಿಕಾರಿಗಳು ಲೂಟಿ ಮಾಡಿದ್ದಾರೆ. ಆದರೆ, ಸಚಿವರು ಕೇವಲ ₹324 ಕೋಟಿ ಮಾತ್ರ ಇದುವರೆಗೆ ಖರ್ಚು ಮಾಡಿದ್ದೇವೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಅವರು ದೂರಿದರು.

ಬೆಂಗಳೂರಿನಲ್ಲಿ ಸುಮಾರು 10 ಸಾವಿರ ಕೋವಿಡ್‌ ಸೋಂಕಿತರ ಸರಿಯಾದ ಮಾಹಿತಿಯೇ ಇಲ್ಲ. ಸೋಂಕಿತರು ಎಲ್ಲಿಗೆ ಹೋಗಿದ್ದಾರೆ ಎಂಬುದು ಸರ್ಕಾರದ ಗಮನದಲ್ಲಿ ಇಲ್ಲ. ಅಷ್ಟೊಂದು ನಿರ್ಲಕ್ಷ್ಯ ತಾಳಿದೆ ಎಂದು ದೂರಿದರು.

ಆರೋಗ್ಯ ಕಿಟ್‌ಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಬೃಹತ್‌ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದು. ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ಮನೆ-ಮನೆಗಳಿಗೆ ತೆರಳಿ ಸರ್ಕಾರದವಿಫಲತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಜನರ ಆರೋಗ್ಯದ ಬಗ್ಗೆ ವಿಚಾರಿಸಿ, ಅವರ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಉಪಚಾರದಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು.

ಶಾಸಕರಾದ ಎಂ.ಬಿ.ಪಾಟೀಲ,ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಭೋಸ್‌ರಾಜು, ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪ್ರೋ.ರಾಜು ಆಲಗೂರ, ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.