ADVERTISEMENT

ಇಂಡಿ: ಕೊಟ್ಟ ಮಾತು ಈಡೇರಿಸುತ್ತೇನೆ: ಯಶವಂತರಾಯಗೌಡ

​ಪ್ರಜಾವಾಣಿ ವಾರ್ತೆ
Published 31 ಮೇ 2023, 13:47 IST
Last Updated 31 ಮೇ 2023, 13:47 IST
ಇಂಡಿಯ ಅಮರ ಇಂಟರ್ ನ್ಯಾಶನಲ್ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಪಾಟೀಲ ಮಾತನಾಡಿದರು
ಇಂಡಿಯ ಅಮರ ಇಂಟರ್ ನ್ಯಾಶನಲ್ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಪಾಟೀಲ ಮಾತನಾಡಿದರು   

ಇಂಡಿ: 2023ರ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿ ಮುಂದಿನ 2028ರ ಚುನಾವಣೆಗೆ ನಿಮ್ಮ ಬಳಿ ಬರುತ್ತೇನೆ. ಮಾತು ಕೊಟ್ಟಂತೆ ಕೆಲಸ ಮಾಡದಿದ್ದರೆ ಚುನಾವಣೆಗೆ ಬರುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಘೋಷಿಸಿದರು.

ಪಟ್ಟಣದ ಅಮರ ಇಂಟರ್ ನ್ಯಾಶನಲ್ ಸಭಾ ಭವನದಲ್ಲಿ ಇಂಡಿ ಮತ್ತು ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಮಂಗಳವಾರ ಆಯೋಜಿಸಿದ್ದ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೇ 2023ರ ಚುನಾವಣೆಯಲ್ಲಿ ಇಂಡಿ ತಾಲ್ಲೂಕಿನ ರೇವಣಿಸಿದ್ಧೇಶ್ವರ ಏತ ನೀರಾವರಿ (28000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ), ತಾಲ್ಲೂಕಿನ 19 ಕೆರೆಗಳಿಗೆ 20 ತಿಂಗಳಲ್ಲಿ ನೀರು ತುಂಬಿಸುವುದು ಮತ್ತು ಇಂಡಿ ತಾಲ್ಲೂಕನ್ನು ಜಿಲ್ಲೆಯನ್ನಾಗಿಸುತ್ತೇನೆ ಎಂದು ಮೂರು ಪ್ರಮುಖ ಕೆಲಸಗಳನ್ನು ಮಾಡುವುದಾಗಿ ಭರವಸೆ ನೀಡಿದ್ದೇನೆ. ಇವುಗಳನ್ನು ಮಾಡಿಯೇ 2028 ರ ಚುನಾವಣೆಗೆ ಬರುತ್ತೇನೆ ಎಂದು ಭರವಸೆ ನೀಡಿದರು.

ADVERTISEMENT

ಈ ಭಾಗ ಶೈಕ್ಷಣಿಕ ಪ್ರಗತಿಯಾಗಬೇಕೆಂದು ತಾಲ್ಲೂಕಿನ ಹಿರಿಯರು ಸಲಹೆ ನೀಡಿದ್ದಾರೆ. ಇಲ್ಲಿಯ ಬಡ ಮಕ್ಕಳು ಬೇರೆ ಕಡೆಗೆ ಶಿಕ್ಷಣ ಅರಸುತ್ತ ಹೋಗುವುದನ್ನು ನಿಲ್ಲಿಸುತ್ತೇನೆ. ಇಲ್ಲಿಯೇ ಶೈಕ್ಷಣಿಕ ಪ್ರಗತಿ ಮಾಡುತ್ತೇನೆ ಎಂದರು.

ಕಾಂಗ್ರೆಸ್ ಪಕ್ಷ ನೀಡಿರುವ 5 ಗ್ಯಾರಂಟಿ ಯೋಜನೆಗಳನ್ನು ಶೀಘ್ರದಲ್ಲಿಯೇ ಅನುಷ್ಠಾನಗೊಳಿಸಲಾಗುತ್ತಿದೆ. ಪಕ್ಷ ಮಾತಿಗೆ ತಪ್ಪುವುದಿಲ್ಲ. ನನಗೆ ಮಂತ್ರಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ಸಿಕ್ಕಿಲ್ಲ. ನಾನು ನಿರಾಶೆ ಆಗುವುದಿಲ್ಲ. ಆಶಾವಾದಿಯಾಗಿದ್ದು, ಕೆಲಸ ಮಾಡುತ್ತೇನೆ. ಬರುವ 5 ವರ್ಷಗಳಲ್ಲಿ ತಾಲ್ಲೂಕಿನ ಕೃಷಿ ಕ್ಷೇತ್ರವನ್ನು ಶೇ 80ರಷ್ಟು ನೀರಾವರಿಯನ್ನಾಗಿ ಮಾಡುತ್ತೇನೆ ಎಂದರು.

ಇಲಿಯಾಸ್ ಬೋರಾಮಣಿ, ಪ್ರಶಾಂತ ಕಾಳೆ, ಜೆಟ್ಟೆಪ್ಪ ರವಳಿ, ಜಾವೀದ ಮೋಮಿನ್ ಮಾತನಾಡಿದರು. ಮಲ್ಲಿಕಾರ್ಜುನ ಲೋಣಿ, ಬಿ.ಎಂ. ಕೋರೆ, ಎಂ.ಆರ್. ಪಾಟೀಲ, ಬಾಬುಸಾಹುಕಾರ ಮೇತ್ರಿ, ಭೀಮನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.