ADVERTISEMENT

ಫೆಬ್ರುವರಿಗೆ ವಿಮಾನ ನಿಲ್ದಾಣ ಲೋಕಾರ್ಪಣೆ

ಸಚಿವ ಗೋವಿಂದ ಕಾರಜೋಳ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 15:33 IST
Last Updated 24 ಜನವರಿ 2023, 15:33 IST
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯನ್ನು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಂಗಳವಾರ ಪರಿಶೀಲಿಸಿದರು –ಪ್ರಜಾವಾಣಿ ಚಿತ್ರ
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯನ್ನು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಂಗಳವಾರ ಪರಿಶೀಲಿಸಿದರು –ಪ್ರಜಾವಾಣಿ ಚಿತ್ರ   

ವಿಜಯಪುರ: ನಗರದ ಹೊರ ವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಲೋಕಾರ್ಪಣೆ ಹಾಗೂ ರೇವಣ ಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಫೆಬ್ರುವರಿಯಲ್ಲಿ ಅಡಿಗಲ್ಲು ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಗೆ ನೀಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಲಬುರ್ಗಿಯಲ್ಲಿ ಲಂಬಾಣಿ ಸಮುದಾಯದ ಜನರಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿಗಳಿಗೆ ವಿಮಾನ ನಿಲ್ದಾಣ ಲೋಕಾರ್ಪಣೆ ಹಾಗೂ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗಳಿಗೆ ಅಡಿಗಲ್ಲು ನೆರವೇರಿಸಲು ಕೋರಲಾಯಿತು. ಅದರಂತೆ ಪ್ರಧಾನಮಂತ್ರಿಗಳು ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ADVERTISEMENT

ವಿಮಾನ ನಿಲ್ದಾಣ ಕಾಮಗಾರಿ ಈಗಾಗಲೇ ಶೇ 75 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಅಂತಿಮ ಹಂತದ ಕಾಮಗಾರಿ ಕೈಗೊಳ್ಳಬೇಕಿದೆ. ಕಾಮಗಾರಿಗೆ ವೇಗ ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದರು.

ವಿಜಯಪುರ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ಆರಂಭಿಸುವ ಸಂಬಂಧ ಏರ್ ಏಂಡಿಯಾ, ಸ್ಟಾರ್ ಏರ್‌ಲೈನ್, ವಿಸ್ತಾರ, ಇಂಡಿಗೊ ವಿಮಾನ ಯಾನ ಕಂಪನಿಗಳೊಂದಿಗೆ ಚರ್ಚೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು

ಕಾಮಗಾರಿ ಪೂರ್ಣ:

ಉದ್ದೇಶಿತ ವಿಮಾನ ನಿಲ್ದಾಣವನ್ನು ₹ 347.92 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕಾಮಗಾರಿಯನ್ನು ಎರಡು ಹಂತದಲ್ಲಿ ವಿಂಗಡನೆ ಮಾಡಲಾಗಿದ್ದು, ಮೊದಲನೇ ಹಂತದ ಕಾಮಗಾರಿಯಲ್ಲಿ ಶೇ 60.16 ಭೌತಿಕ ಪ್ರಗತಿ ಸಾಧಿಸಲಾಗಿದ್ದು, ₹130 ಕೋಟಿ ಮೊತ್ತದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮೊದಲನೇಯ ಹಂತದಲ್ಲಿ ರನ್ ವೇ, ಟ್ಯಾಕ್ಸಿ ವೇ, ಐಸೋಲೇಷನ್ ಬೇ, ಪೆರಿಪೆರಲ್ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕಾರಜೋಳ ವಿವರಿಸಿದರು.

ಎರಡನೇಯ ಹಂತದ ಕಾಮಗಾರಿಯಲ್ಲಿ ಶೇ 58.10 ರಷ್ಟು ಭೌತಿಕ ಪ್ರಗತಿ ಸಾಧಿಸಲಾಗಿದ್ದು, ₹ 50.10 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಿದರು.

₹19.40 ಕೋಟಿಯಲ್ಲಿ ವಿದ್ಯುತ್ ಮಾರ್ಗ ಸ್ಥಳಾಂತರ ಪೂರ್ಣಗೊಂಡಿದ್ದು, 24X7 ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಕಾಮಗಾರಿ ಕೈಗೊಳ್ಳಲಾಗುತ್ತಿದೆ. 2000 ಕಿಲೊ ವ್ಯಾಟ್ ನಿರಂತರ ವಿದ್ಯುತ್ ಸರಬರಾಜು ಮಾಡುವ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕಾರಜೋಳ ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜು ಮಜುಂದಾರ, ಗುತ್ತಿಗೆದಾರ ಆಳೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.