ADVERTISEMENT

ನಿಲ್ಲದ ಪ್ರವಾಹ; 1,100 ಎಕರೆ ಜಮೀನು ಜಲಾವೃತ

ಆಲಮಟ್ಟಿ: ಹೊರಹರಿವು ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 13:42 IST
Last Updated 29 ಜುಲೈ 2021, 13:42 IST
ಆಲಮಟ್ಟಿ ಜಲಾಶಯದ ಮೂಲಕ 4 ಲಕ್ಷ ಕ್ಯುಸೆಕ್ ನೀರು ಬಿಟ್ಟ ಕಾರಣ ಕೃಷ್ಣಾ ನದಿ ನೀರು ನಾನಾ ಕಡೆ ನಿಂತಿರುವ ದೃಶ್ಯ
ಆಲಮಟ್ಟಿ ಜಲಾಶಯದ ಮೂಲಕ 4 ಲಕ್ಷ ಕ್ಯುಸೆಕ್ ನೀರು ಬಿಟ್ಟ ಕಾರಣ ಕೃಷ್ಣಾ ನದಿ ನೀರು ನಾನಾ ಕಡೆ ನಿಂತಿರುವ ದೃಶ್ಯ   

ಆಲಮಟ್ಟಿ(ವಿಜಯಪುರ): ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ ಮಟ್ಟಕ್ಕಿಂತಲೂ 2.6 ಮೀಟರ್ ಕಡಿಮೆ ನೀರು ಸಂಗ್ರಹವಿದ್ದರೂ ನಿತ್ಯ ನಾಲ್ಕು ಲಕ್ಷ ಕ್ಯುಸೆಕ್ ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ. ಇದರಿಂದ ಜಲಾಶಯದ ಹಿಂಭಾಗದ ಜಮಖಂಡಿ ಭಾಗದಲ್ಲಿ ಹಾಗೂ ಜಲಾಶಯದ ಮುಂಭಾಗದ ಕೃಷ್ಣಾ ತೀರದಲ್ಲಿ ಪ್ರವಾಹ ಸ್ಥಿತಿಗತಿ ಮುಂದುವರೆದಿದೆ.

ಆಲಮಟ್ಟಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಮಾತ್ರ ನಿತ್ಯ 4 ಲಕ್ಷ ಕ್ಯುಸೆಕ್ ದಾಟುತ್ತಿದೆ. ಗುರುವಾರ ಸಂಜೆ 4.3 ಲಕ್ಷ ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಆಲಮಟ್ಟಿ ಜಲಾಶಯದಿಂದ ನೀರು ಬಿಟ್ಟ ಕಾರಣ ಜಲಾಶಯದ ಮುಂಭಾಗದ ಅರಳದಿನ್ನಿ ಗ್ರಾಮದ 1,100 ಎಕರೆ ಜಮೀನು ಜಲಾವೃತಗೊಂಡಿವೆ.

‘ಕೂಡಲಸಂಗಮದ ಬಳಿ ಮಲಪ್ರಭಾ ನದಿ ಕೃಷ್ಣೆಗೆ ಕೂಡುವಾಗ ಉದ್ಭವವಾಗುವ ವಿಸ್ಕೋಸಿಟಿ ಆಫ್ ವಾಟರ್ (ನೀರಿನ ಸ್ನಿಗ್ಧತೆ) ಪ್ರಭಾವದಿಂದ ಕೆಲ ಕಾಲ ನೆರೆ ಉಂಟಾಗಿ, ಜತೆಗೆ ಕೂಡಲಸಂಗಮದ ಮುಂಭಾಗದ ತಂಗಡಗಿ ಸೇತುವೆ ಸಮೀಪ ಸಂಗ್ರಹವಾಗಿರುವ ಅಪಾರ ಪ್ರಮಾಣದ ಹೂಳಿನ ಕಾರಣ ನೀರು ಸರಾಗವಾಗಿ ಹರಿಯುತ್ತಿಲ್ಲ. ಅದು ಅಕ್ಕ ಪಕ್ಕದ ಜಮೀನಿಗೆ ನುಗ್ಗಿ ಈ ರೀತಿಯ ಹಾನಿ ಸಂಭವಿಸುತ್ತಿದೆ’ ಎಂದು ಕೆಬಿಜೆಎನ್ ಎಲ್ ಅಧಿಕಾರಿಗಳು ಹೇಳಿದರು.

ADVERTISEMENT

‘ಆಲಮಟ್ಟಿಯ ಸಂಗೀತ ಕಾರಂಜಿಗೆ ಡ್ರೈನೇಜ್ ಪೈಪ್ ಮೂಲಕ ನದಿಯ ನೀರು ಹೋಗಿ ಜಲಾವೃತಗೊಂಡು ಗುರುವಾರ ಸಂಗೀತ ಕಾರಂಜಿ ಸ್ಥಗಿತಗೊಂಡಿತ್ತು. ಸದ್ಯಕ್ಕೆ ಲೇಸರ್ ಪ್ರದರ್ಶನ, ಮೊಘಲ್ ಉದ್ಯಾನ ಆರಂಭಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು. ಇನ್ನೆರಡು ದಿನಗಳಲ್ಲಿ ಸಂಗೀತ ಕಾರಂಜಿ ಆರಂಭಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.