ADVERTISEMENT

ಕೊಲ್ಹಾರ | 'ಇಂಚಗೇರಿ ಮಠದ ಅಧ್ಯಾತ್ಮಿಕ ಪರಂಪರೆ ಶ್ರೇಷ್ಠ'

ಚನ್ನಬಸವೇಶ್ವರ ಮಹಾರಾಜರ 39ನೇ ಪುಣ್ಯಸ್ಮರಣೋತ್ಸವ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 4:28 IST
Last Updated 8 ಸೆಪ್ಟೆಂಬರ್ 2025, 4:28 IST
ಕೊಲ್ಹಾರ ತಾಲ್ಲೂಕಿನ ಕೂಡಗಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಇಂಚಗೇರಿ ಆಧ್ಯಾತ್ಮ ಸಂಪ್ರದಾಯದ ಚನ್ನಬಸವೇಶ್ವರ ಮಹಾರಾಜರ 39ನೇ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಸಚಿವ ಶಿವಾನಂದ ಎಸ್.ಪಾಟೀಲ ಮಾತನಾಡಿದರು
ಕೊಲ್ಹಾರ ತಾಲ್ಲೂಕಿನ ಕೂಡಗಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಇಂಚಗೇರಿ ಆಧ್ಯಾತ್ಮ ಸಂಪ್ರದಾಯದ ಚನ್ನಬಸವೇಶ್ವರ ಮಹಾರಾಜರ 39ನೇ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಸಚಿವ ಶಿವಾನಂದ ಎಸ್.ಪಾಟೀಲ ಮಾತನಾಡಿದರು   

ಕೊಲ್ಹಾರ: ಜಾಗತಿಕ ಅಧ್ಯಾತ್ಮಿಕ ಪರಂಪರೆಗೆ ಭಾರತೀಯ ಧಾರ್ಮಿಕ ಪರಂಪರೆ ವಿಶಿಷ್ಠವಾಗಿದೆ. ಇಂಚಗೇರಿ ಮಠದ ವಿಶಿಷ್ಟ ಪರಂಪರೆ ಭಾರತೀಯ ಆಧ್ಯಾತ್ಮಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲ್ಲೂಕಿನ ಕೂಡಗಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಇಂಚಗೇರಿ ಆಧ್ಯಾತ್ಮ ಸಂಪ್ರದಾಯದ ಚನ್ನಬಸವೇಶ್ವರ ಮಹಾರಾಜರ 39ನೇ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ದೇವರ ದರ್ಶನ ಪಡೆದು ಮಾತನಾಡಿದರು.

ಕೆಲವರನ್ನು ಮಾತ್ರ ಪದೇ ಪದೇ ನೆನೆಯುತ್ತೇವೆ ಎಂದರೆ ಸಮಾಜಕ್ಕೆ ಅಂಥವರು ಸ್ಮರಣೀಯ ಕೊಡುಗೆ ನೀಡಿದ್ದಾರೆ ಎಂದರ್ಥ ಎಂದು ವಿಶ್ಲೇಷಿಸಿದರು.

ADVERTISEMENT

ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ರಾಜ್ಯದಲ್ಲೂ ಇಂಚಗೇರಿ ಆಧ್ಯಾತ್ಮಿಕ ಪರಂಪರೆಯ ಅನುಸರಿಸುವ ಲಕ್ಷಾಂತರ ಭಕ್ತರಿದ್ದಾರೆ. ಜಾತ್ಯತೀತ ಸಮಾಜ ಕಟ್ಟುವ ಜೊತೆಗೆ ಹೆಣ್ಣು-ಗಂಡು, ಬಡವ- ಶ್ರೀಮಂತ ಎಂಬ ತಾರತಮ್ಯಕ್ಕೆ ಇಲ್ಲದ ಸುಭಿಕ್ಷ ಸಮಾಜ ನಿರ್ಮಿಸುವುದಕ್ಕಾಗಿ ಸಾಮರಸ್ಯದ ಸಂದೇಶ ಸಾರಿದ ಇಂಚಗೇರಿ ಆಧ್ಯಾತ್ಮಿಕ ಸಂಪ್ರದಾಯ ವಿಶಿಷ್ಠವಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.

ಸಾಮರಸ್ಯದ ಸಮಾಜ ಕಟ್ಟುವುದಕ್ಕಾಗಿ ಅಣ್ಣ ಬಸವಣ್ಣ, ಶಿರಡಿ ಸಾಯಿಬಾಬಾ, ಸಿದ್ಧೇಶ್ವರ ಶ್ರೀಗಳಂಥ ದೈವಿ ಪುರುಷರು ಕಾಲ ಕಾಲಕ್ಕೆ ಸಮಾಜೊದ್ದಾರಕ್ಕೆ ಜನ್ಮ ತಳೆಯುತ್ತಾರೆ. ಅಂಥ ವಿಶಿಷ್ಟ ಸಾಧನೆಯ ಸಂತ, ಮಹಾತ್ಮರಲ್ಲಿ ಚನ್ನಬಸವೇಶ್ವರ ಮಹಾರಾಜರು ಕೂಡ ಪ್ರಮುಖರು ಎಂದರು.

ವಿಜಯಪುರ ಜಿಲ್ಲೆ ಶರಣರು, ಸಂತರು, ಮಹಾತ್ಮರಿಗೆ ಜನ್ಮ ನೀಡಿದ್ದು, ಕೂಡಗಿ ಕೂಡ ಸೂಫಿಗಳ ನೆಲೆಯಾಗಿತ್ತು. ಇಂಥ ಶ್ರೀಮಂತ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿರುವುದು ಅನುಕರಣೀಯ ಎಂದು ಶ್ಲಾಘಿಸಿದರು.

ಸೀತಾಗಿರಿಯ ಪೀಠಾಧ್ಯಕ್ಷ .ಎ.ಸಿ.ವಾಲಿ ಮಹಾರಾಜರು, ತೊರವಿ ಹಿರೇಮಠದ ಚಿದಾನಂದ ಶ್ರೀಗಳು, ದಯಾನಂದ ಹಿರೇಮಠ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಚನ್ನಬಸವೇಶ್ವರ ಮಠದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಿಣಜಗಿ ಅಧ್ಯಕ್ಷತೆ ವಹಿಸಿದ್ದರು. ಈರಣ್ಣ ಶಿರೂರು, ಸಿ.ಎಸ್.ಜುಗತಿ, ಎಸ್.ಜಿ.ಜುಗತಿ, ಖಾಸೀಂಸಾಬ ಮಾಶ್ಯಾಳ, ಸಿ.ಎಸ್. ಮಮದಾಪೂರ, ರೇವಣಸಿದ್ಧಪ್ಪ ಕುಂಬಾರ, ರಾಜು ರಾಠೋಡ, ಎಂ.ಎಸ್. ಪಾಟೀಲ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.