ADVERTISEMENT

ಆಲಮಟ್ಟಿ ಆಣೆಕಟ್ಟು ಎತ್ತರ 524ಮೀ ಏರಿಸಿ: ಶಾಸಕ ಯಶವಂತರಾಯಗೌಡ ಪಾಟೀಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಮೇ 2025, 14:53 IST
Last Updated 26 ಮೇ 2025, 14:53 IST
ಇಂಡಿ ಪಟ್ಟಣದ ಆಡಳಿತ ಸೌಧದ ಸಭಾಭವನದಲ್ಲಿ ಸೋಮವಾರ ನಡೆದ  ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು 
ಇಂಡಿ ಪಟ್ಟಣದ ಆಡಳಿತ ಸೌಧದ ಸಭಾಭವನದಲ್ಲಿ ಸೋಮವಾರ ನಡೆದ  ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು    

ಇಂಡಿ: ಮಹಾರಾಷ್ಟ್ರ ಸರ್ಕಾರ ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು 524 ಮೀಟರ್‌ಗೆ ಏರಿಸಲು ಕ್ಯಾತೆ ತೆಗೆಯುತ್ತಿರುವುದು ಸರಿಯಲ್ಲ. ಆಣೆಕಟ್ಟೆ ಎತ್ತರ ಏರಿಸಲು ಯಾವುದೇ ತ್ಯಾಗಕ್ಕೂ ಸಿದ್ದ, ಈ ಕುರಿತು ವಿಜಯಪುರದಲ್ಲಿ ರಾಜ್ಯ ಮಟ್ಟದ ಸಭೆ ನಡೆಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗಲಾಗುವುದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಆಡಳಿತಸೌಧ ಸಭಾ ಭವನದಲ್ಲಿ ಸೋಮವಾರ ನಡೆದ 2025-26 ನೇ ಸಾಲಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಆಲಮಟ್ಟಿ ಜಲಾಶಯ ಎತ್ತರಿಸಲು ಅಗತ್ಯ ಇರುವ ಅನುದಾನಕ್ಕಾಗಿ ಬಾಂಡ್‌ ಮೂಲಕ ಹಣ ಸಂಗ್ರಹಿಸಿ, ಇಲ್ಲವೇ ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ ಅನುದಾನ ಬಿಡುಗಡೆ ಮಾಡಿಸಲಿ ಎಂದರು.

ADVERTISEMENT

ಬಚಾವತ್‌ ಐ ತೀರ್ಪಿನ ಪ್ರಕಾರ ಆಣೆಕಟ್ಟೆ ಎತ್ತರ 524 ಮೀಟರ್‌ ಮಾಡಬೇಕು ಮತ್ತು ನಮ್ಮ ಪಾಲಿನ 130 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಬೇಕಾಗಿದೆ. ಬ್ರಿಜೇಶ್‌ ಕುಮಾರ್‌ ತೀರ್ಪಿನ ಪ್ರಕಾರ ಬಿ ಸ್ಕೀಮ್‌ನ ಯೋಜನೆಗಳಿಗೆ ಕಾನೂನು ಬದ್ದವಾಗಿ ನೀರು ಪಡೆಯಬೇಕಾದರೆ ಎತ್ತರ 524 ಮೀಟರ್ ಆಗಲೇಬೇಕು ಎಂದರು.

ಇಂಡಿ ತಾಲ್ಲೂಕಿನಲ್ಲಿ ಹಾದುಹೋಗಿರುವ ಗುತ್ತಿ ಬಸವಣ್ಣ, ಚಿಮ್ಮಲಗಿ, ಮುಳವಾಡ ಏತ ನೀರಾವರಿ, ಇಂಡಿ ಬ್ರಾಂಚ್ ಕಾಲುವೆ ಮತ್ತು ರೇವಣಸಿದ್ದೇಶ್ವರ ಕಾಲುವೆಯಲ್ಲಿ ನೀರು ಹರಿಯುತ್ತಿಲ್ಲ. ಹೀಗಾಗಿ ಆಲಮಟ್ಟಿ ಆಣೆಕಟ್ಟಿನ ಎತ್ತರ 524 ಆಗಬೇಕು ಎಂದರು.

ಫಲಿತಾಂಶ ಹೆಚ್ಚಳಕ್ಕೆ ಕ್ರಮ:

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಕಡಿಮೆ ಬಂದಿದ್ದು, ಕಳವಳಕಾರಿ ಸಂಗತಿಯಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಂಡು, ಫಲಿತಾಂಶ ಹೆಚ್ಚಳಕ್ಕೆ ಪ್ರಯತ್ನಿಸುವ ಕುರಿತು ಚರ್ಚೆ ಮಾಡಬೇಕು ಎಂದರು.

ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಬಿತ್ತನೆಯ ಬೀಜ ಮತ್ತು ಗೊಬ್ಬರವನ್ನು ರೈತರಿಗೆ ವಿತರಣೆ ಮಾಡುವ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಹೆಸ್ಕಾಂ ಎಇಇ ಎಸ್.ಆರ್. ಮೆಂಡೆಗಾರ ಮಾತನಾಡಿ, ತಾಲ್ಲೂಕಿನಲ್ಲಿ 15 ವಿದ್ಯುತ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಮತ್ತೆ ನಾಲ್ಕು ವಿದ್ಯುತ್ ಕೇಂದ್ರಕ್ಕೆ ಹೊಸ ಪ್ರಸ್ತಾವನೆ ಕಳುಹಿಸಿದ್ದು, ಅವುಗಳಿಗೂ ಕೂಡಾ ಮಂಜುರಾತಿ ದೊರೆತಿದೆ ಎಂದರು.

ಇಂಡಿ ರಸ್ತೆಗಳ ರಿಪೇರಿಗೆ ಶಾಸಕರ ಅನುದಾನದಲ್ಲಿ ₹5 ಕೋಟಿ ಮೀಸಲಿಟ್ಟಿರುವದಾಗಿ ಶಾಸಕರು ತಿಳಿಸಿದರು.

ಇಂಡಿಯಲ್ಲಿ ತಾಯಿ ಮಗು ಆಸ್ಪತ್ರೆ ಪ್ರಾರಂಭಿಸುವ ಕುರಿತು ಮತ್ತು ಕುಡಿಯುವ ನೀರಿನ ಪ್ರದೇಶಗಳಿಗೆ ನೀರು ಪೂರೈಸುವ ಕುರಿತು ಚರ್ಚೆ ನಡೆಯಿತು.

ಇಂಡಿಯಲ್ಲಿ ಇನ್ನೊಂದು ಬಸ್ ನಿಲ್ದಾಣ ಪ್ರಾರಂಭಿಸುವ ಕುರಿತು ಮತ್ತು ತಾಲ್ಲೂಕಿನಲ್ಲಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಮತ್ತು ಅದಕ್ಕೆ ಬೇಕಾಗುವ ಹಣ ನೀಡುವುದಾಗಿ ತಿಳಿಸಿದರು.

ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ತಹಶೀಲ್ದಾರ ಬಿ.ಎಸ್.ಕಡಕಬಾವಿ, ಇಒ ನಂದೀಪ ರಾಠೋಡ,, ಕೃಷಿ ಇಲಾಖೆಯ ಅಧಿಕಾರಿ ಚಂದ್ರಕಾಂತ ಪವಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಹೆಸ್ಕಾಂನ ಎಸ್.ಎಸ್. ಬಿರಾದಾರ, ಸಂಜಯ ಖಡಗೇಕರ,  ಡಿ.ಎಸ್.ಪಿ ಜಗದೀಶ ಎಚ್, ನಾಮ ನಿರ್ದೇಶಿತ ಸದಸ್ಯರಾದ ಬಿ.ಕೆ.ಪಾಟೀಲ, ಗುರನಗೌಡ ಪಾಟೀಲ, ದೀಪಾಲಿ ಕುಲಕರ್ಣಿ, ಜೆ.ಎಂ.ಕರಜಗಿ, ಇಲಿಯಾಸ್ ಬೋರಾಮಣಿ, ಪ್ರಶಾಂತ ಕಾಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.