
ಇಂಡಿ : ಮಹಾರಾಷ್ಟ್ರ ರಾಜ್ಯದ ಪಂಡರಾಪುರ, ಕರ್ನಾಟಕದ ಗಾಣಗಾಪುರ ರಾಜ್ಯ ಹೆದ್ದಾರಿ ಮಧ್ಯದ ಇಂಡಿ-ಆಲಮೇಲ 30 ಕಿಲೋ ಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಅತೀವ ತೊಂದರೆಯಾಗಿದೆ. ದ್ವಿಚಕ್ರ ವಾಹನಗಳ ಓಡಾಟಕ್ಕೂ ಕೂಡಾ ಬಾರದಂತಾಗಿದೆ.
ಶಾಸಕ ಯಶವಂತರಾಯಗೌಡ ಪಾಟೀಲರ ಶ್ರಮದಿಂದ 30 ಕಿಲೋ ಮೀಟರ್ ರಸ್ತೆಯಲ್ಲಿ 8 ಕಿಲೋ ಮೀಟರ್ ರಸ್ತೆ ಅಗಲೀಕರಣದ ಜೊತೆಗೆ ಒಳ್ಳೆ ರಸ್ತೆಯನ್ನಾಗಿ ಮಾಡಲಾಗಿದೆ. ಇನ್ನುಳಿದ 22 ಕಿಲೋ ಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕಳೆದ ಎರಡು ತಿಂಗಳಿಂದ ಈ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಗಳು, ಲಾರಿಗಳ ಓಡಾಟದಿಂದ ಅಲ್ಪ ಸ್ವಲ್ಪ ಇದ್ದ ರಸ್ತೆಯೂ ಕೂಡಾ ಸಂಪೂರ್ಣ ಹಾಳಾಗಿದೆ.
ಸಾರ್ವಜನಿಕರ ಅಹವಾಲು ಕೇಳಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮೊಣಕಾಲುದ್ದ ತಗ್ಗು ಬಿದ್ದಿರುವ ಗುಂಡಿಗಳಲ್ಲಿ ಗರಸು ಸುರಿದು ತಾತ್ಕಾಲಿಕವಾಗಿ ರಿಪೇರಿ ಮಾಡುತ್ತಾರೆ. ಆ ಗರಸು ಕೇವಲ ಒಂದು ವಾರದಲ್ಲಿ ಹಾರಿಹೋಗಿ ಮತ್ತೆ ಮೊದಲಿನ ಸ್ಥಿತಿಯೇ ಆಗುತ್ತಿದೆ. ರಸ್ತೆಯ ಗುಂಡಿಗಳಲ್ಲಿ ಹಾಕಿದ ಗರಸಿನಿಂದ ಹಾರುತ್ತಿರುವ ಧೂಳು ರಸ್ತೆಯ ಪಕ್ಕದ ಜಮೀನಿಗೆ ನುಗ್ಗಿ ಪಕ್ಕದ ಜಮೀನಿನಲ್ಲಿದ್ದ ತೊಗರಿ, ಹತ್ತಿ, ಗೋಧಿ, ಜವೆ, ಮೆಕ್ಕೆಜೋಳ ಮುಂತಾದ ಬೆಳೆಗಳು ಹಾಳಾಗುತ್ತಿವೆ. ಈ ಬಗ್ಗೆ ರೈತರು ದೂರು ನೀಡುತ್ತಿದ್ದಾರೆ.
ಈ ರಸ್ತೆಯಲ್ಲಿರುವ ಕೆಲವು ಸೇತುವೆಗಳ ಮೇಲೆ ರಸ್ತೆ ಸಂಪೂರ್ಣ ಹಾಳಾಗಿ ಸೇತುವೆಯ ಸ್ಲ್ಯಾಬಿಗೆ ಅಳವಡಿಸಿದ ಕಬ್ಬಿಣದ ರಾಡುಗಳು ತೆರೆದುಕೊಂಡಿವೆ. ವಾಹನಗಳು ಸಂಚರಿಸುವಾಗ ತೆರೆದು ಸೆಟೆದು ನಿಂತಿರುವ ರಾಡುಗಳು ಟೈರ್ ಗೆ ಚುಚ್ಚಿ ವಾಹನಗಳು ಪಂಚರ್ ಆಗುತ್ತಿವೆ. ಈ ಸೇತುವೆಗಳ ಮೇಲೆ ವಾಹನಗಳು ಸಂಚರಿಸಬೇಕಾದರೆ ಚಾಲಕನಿಗೆ ಮೈ ತುಂಬಾ ಕಣ್ಣುಗಳು ಬೇಕೇ ಬೇಕು. ಇಲ್ಲವಾದರೆ ವಾಹನ ಪಂಚರ್ ಮಾಡಿಕೊಳ್ಳಬೇಕಾಗುತ್ತದೆ. ದ್ವಿಚಕ್ರ ವಾಹನಗಳ ಮೇಲೆ ಅಡ್ಡಾಡುವ ಪ್ರವಾಸಿಗರಿಗೆ ಟೊಂಕ ಗಟ್ಟಿಯಾಗಿರಬೇಕು, ಇಲ್ಲದಿದ್ದರೆ ಅವರ ಟೊಂಕದ ಕೀಲುಗಳು ಬೇರ್ಪಡೆಯಾಗುತ್ತವೆ.
ಇನ್ನು ದ್ವಿಚಕ್ರ ವಾಹನದ ಮೇಲೆ ಸಂಚರಿಸುವ ಮಹಿಳೆಯರು ಈ ರಸ್ತೆಯಲ್ಲಿ ಸಾಕಷ್ಟು ಸಲ ಬಿದ್ದ ಉದಾಹರಣೆಗಳಿವೆ. ಈ ರಸ್ತೆಯಲ್ಲಿ ಬಹುತೇಕ ಮಹಿಳೆಯರು ದ್ವಿಚಕ್ರವಾಹನದ ಮೇಲೆ ಕುಳಿತುಕೊಳ್ಳಲು ನಿರಾಕರಿಸುತ್ತಿದ್ದಾರೆ.
ಕಬ್ಬು ತುಂಬಿದ ಎರಡು ಟ್ರ್ಯಾಲಿ ಟ್ರ್ಯಾಕ್ಟರ್ ಗಳು ತೂಕದ ಮೇಲೆ ಚಲಾಯಿಸಬೇಕು. ಸ್ವಲ್ವ ಆಯ ತಪ್ಪಿದರೂ ಕೂಡಾ ಪಲ್ಟಿಯಾಗುತ್ತವೆ. ಕಾರಣ ಈ ರಸ್ತೆಯನ್ನು ಸಂಬಂಧಪಟ್ಟವರು ಕೂಡಲೇ ರಿಪೇರಿ ಮಾಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇಂಡಿ-ಆಲಮೇಲ 30 ಕಿಲೋ ಮೀಟರ್ ರಸ್ತೆಯಲ್ಲಿ 24 ಕಿಲೋ ಮೀಟರ್ ರಸ್ತೆ ಮಾತ್ರ ಇಂಡಿ ಮತಕ್ಷೇತ್ರಕ್ಕೆ ಬರುತ್ತದೆ. ಇದರಲ್ಲಿ 8 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಇನ್ನುಳಿದ 18 ಕಿಲೋ ಮೀಟರ್ ರಸ್ತೆ ಶೀಘ್ರದಲ್ಲಿಯೇ ಮಾಡಲಾಗುವದು.- ದಯಾನಂದ ಮಠ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಲೋಕೋಪಯೋಗಿ ಇಲಾಖೆ ಇಂಡಿ
ದ್ವಿಚಕ್ರ ವಾಹನ ಸವಾರರ ಟೊಂಕ ಮುರಿಯುವದರೊಳಗಾಗಿ ಸಂಬಂಧಪಟ್ಟವರು ಇಂಡಿ_ ಆಲಮೇಲ ರಸ್ತೆ ಅಭಿವೃದ್ಧಿಪಡಿಸಿ ಪುಣ್ಯ ಕಟ್ಟಿಕೊಳ್ಳಿ.- ಮಂಜುನಾಥ ಬಿರಾದಾರ, ದ್ವಿಚಕ್ರ ವಾಹನ ಸವಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.