ADVERTISEMENT

ಇಂಗಳೇಶ್ವರಕ್ಕೆ ಪಿಎಚ್‌ಸಿ ಮಂಜೂರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 11:33 IST
Last Updated 25 ಜನವರಿ 2022, 11:33 IST
ಇಂಗಳೇಶ್ವರ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದಗೆ ಮನವಿ ಸಲ್ಲಿಸಿದರು
ಇಂಗಳೇಶ್ವರ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದಗೆ ಮನವಿ ಸಲ್ಲಿಸಿದರು   

ವಿಜಯಪುರ: ಬಸವಣ್ಣನವರ ಜನ್ಮಸ್ಥಳವಾದ ಇಂಗಳೇಶ್ವರ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಇಂಗಳೇಶ್ವರ ಗ್ರಾಮ 15 ಸಾವಿರ ಜನಸಂಖ್ಯೆ ಹೊಂದಿದೆ. ಹಲವಾರು ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ಹೋರಾಟ ಮಾಡಿದರು ಪ್ರಯೋಜನವಾಗಿಲ್ಲ. ಈಗ ಸರ್ಕಾರ ರಾಜ್ಯದಾದ್ಯಂತ 100 ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಪ್ರಥಮ ಆದ್ಯತೆಯಾಗಿ ಇಂಗಳೇಶ್ವರಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಇಂಗಳೇಶ್ವರ ಸುತ್ತಮುತ್ತಲಿನ ಹಳ್ಳಿಗಳಾದ ಮಸಬಿನಾಳ, ಡೋಣೂರ, ಯಂಬತ್ನಾಳ, ದೇಗಿನಾಳ, ಮುಲ್ಲಾಳ, ನೇಗಿನಾಳ, ಬಳ್ಳಾವೂರ, ಅರಳಿಚಂಡಿ, ಬಿಸನಾಳ, ಬಮ್ಮನಳ್ಳಿ, ಮಾರ್ಕಪ್ಪನಳ್ಳಿ, ಸಾತಿಹಾಳ, ರೆಬಿನಾಳ, ಉತ್ನಾಳ ಹಾಗೂ ದಿಂಡವಾರ, ತಾಂಡಾಗಳು ಗ್ರಾಮದ ವ್ಯಾಪ್ತಿಯಲ್ಲಿ ಬರುತ್ತವೆ. ಈ ಹಳ್ಳಿಗಳ ಜನರಿಗೆ ಆರೋಗ್ಯದಲ್ಲಿ ಏರುಪೇರಾದರೆ ದೂರದ ಬಸವನ ಬಾಗೇವಾಡಿ ಅಥವಾ ಕುದುರಿ ಸಾಲವಾಡಗಿಗೆ ಹೋಗಬೇಕು ಎಂದು ಹೇಳಿದರು.

ADVERTISEMENT

ಇಂಗಳೇಶ್ವರವು ಈ ಎಲ್ಲ ಗ್ರಾಮಗಳಿಗೆ ಅನುಕೂಲವಾಗುವಂತೆ ಕೇಂದ್ರಸ್ಥಾನದಲ್ಲಿದ್ದು, ಇಲ್ಲಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವುದು ಸೂಕ್ತವಿದೆ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇಂಗಳೇಶ್ವರ ಅಭಿವೃದ್ಧಿಗೆ ₹5 ಕೋಟಿ ಘೋಷಣೆ ಮಾಡಿದ್ದರು. ಆದರೆ, ಇಲ್ಲಿಯವರೆಗೆ ಆ ಹಣ ಬಿಡುಗಡೆಯಾಗಿಲ್ಲ. ಶೀಘ್ರದಲ್ಲಿ ಹಣ ಬಿಡುಗಡೆ ಮಾಡಿ, ಜಿಲ್ಲಾಧಿಕಾರಿ ಖಾತೆಗೆ ಜಮೆ ಮಾಡಿ ಗ್ರಾಮದ ಅಭಿವೃದ್ಧಿಗೆ ಚಾಲನೆ ನೀಡಬೇಕುಎಂದು ಒತ್ತಾಯಿಸಿದರು.

ಮುಖಂಡ ಸಿದ್ದಪ್ಪ ನಡಕಟ್ಟಿ, ಸಂಗೊಂಡಪ್ಪ ನಡಕಟ್ಟಿ, ಅಪ್ಪು ಪತಂಗೆ, ರೇವಣಸಿದ್ದ ದಳವಾಯಿ , ಶ್ರೀಶೈಲ ತಾಳಿಕೋಟಿ, ಪಾಂಡು ರಾಠೋಡ, ಮಲ್ಲಪ್ಪ ತಕ್ಕೋಡ, ಮಲ್ಲಪ್ಪ ಪಟ್ಟಣಶೆಟ್ಟಿ, ದತ್ತಾತ್ರೇಯ ಕುಲಕರ್ಣಿ, ಮಾದೇವ ಕುಲಕರ್ಣಿ, ಶರಣು ಉಕ್ಕಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.