ADVERTISEMENT

ಬಿಳಿಜೋಳಕ್ಕೆ ಕೀಟ ಕಂಟಕ

ಇಳುವರಿ ಕುಸಿತದ ಭೀತಿ: ಸಂಕಷ್ಟದಲ್ಲಿ ಅನ್ನದಾತ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 6:07 IST
Last Updated 12 ಜನವರಿ 2024, 6:07 IST
ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿಯಲ್ಲಿ ರೈತ ಬಸವರಾಜ ಕುಂಟೋಜಿ ಅವರ ಹೊಲದಲ್ಲಿ ಕಂಡು ಬಂದ ಜೋಳದ ಬೆಳೆಯಲ್ಲಿನ ಕೀಟ
ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿಯಲ್ಲಿ ರೈತ ಬಸವರಾಜ ಕುಂಟೋಜಿ ಅವರ ಹೊಲದಲ್ಲಿ ಕಂಡು ಬಂದ ಜೋಳದ ಬೆಳೆಯಲ್ಲಿನ ಕೀಟ   

ಮುದ್ದೇಬಿಹಾಳ:ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆಯಾಗಿರುವ ಬಿಳಿಜೋಳದ ಬೆಳೆಗೆ ಕೀಟಬಾಧೆ ಕಂಡು ಬಂದಿದ್ದು, ಅನ್ನದಾತರು ತೀವ್ರ ಆತಂಕಗೊಂಡಿದ್ದಾರೆ.

ಸಾಮಾನ್ಯವಾಗಿ ಬಿಳಿಜೋಳಕ್ಕೆ ಕೀಟಬಾಧೆ ಕಂಡು ಬರುವುದು ವಿರಳವಾದರೂ ಈ ಬಾರಿ ಎಲ್ಲಕಡೆಯೂ ಎಲೆಯನ್ನು ತಿಂದು ಹಾಕುವ ಬಿಳಿಶೀರು ಕೀಟಬಾಧೆಯಿಂದ ಕಾಳುಗಳೇ ತೆನೆಗಟ್ಟದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಅನ್ನದಾತರಲ್ಲಿ ಕಂಡು ಬಂದಿದೆ.

ತಾಲ್ಲೂಕಿನ ಇಂಗಳಗೇರಿ ಸೇರಿದಂತೆ ಬಹುತೇಕ ಕಡೆ ಬೆಳೆದಿರುವ ಜೋಳದ ತೆನೆಗಳ ಒಳಗಡೆ ಬಿಳಿ ಶೀರು ಕೀಟ ಕಂಡು ಬಂದಿದೆ. ಇದರಿಂದ ಬೆಳೆಯಲ್ಲಿ ಕಾಳು ಮೂಡದಂತಾಗಿ ತೆನೆಯೇ ಕಾಣುವುದಿಲ್ಲ. ಹೀಗಾದಾಗ ಇಳುವರಿ ಕುಸಿತ ಕಂಡು ರೈತರು ಬೆಳೆದಿರುವ ಖರ್ಚು ಹೊಂದಿಸಲು ಕಷ್ಟ ಪಡುವ ದುಸ್ಥಿತಿ ಎದುರಾಗಿದೆ.

ADVERTISEMENT

ಜೋಳದ ದರ ಗಗನಕ್ಕೆ:

ಈಗಾಗಲೇ ಬಯಲುಸೀಮೆಯ ಭಾಗದ ಜನರ ಆಹಾರ ಬೆಳೆಯಾಗಿ ಪ್ರಮುಖ ಸ್ಥಾನ ಪಡೆದುಕೊಂಡಿರುವ ಜೋಳದ ದರ ಗಗನಕ್ಕೆ ಏರಿಕೆಯಾಗಿದೆ. ₹ 8000 ಕ್ವಿಂಟಲ್‌ಗೆ ಬಿಳಿ ಜೋಳ ಮಾರಾಟವಾದ ಉದಾಹರಣೆಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಇದೆ. ಕೆಜಿ ಜೋಳಕ್ಕೆ ₹70 ರಿಂದ ₹ 80 ಇದೆ. ಹೀಗಾಗಿ ಜೋಳದ ರೊಟ್ಟಿ ಉಣ್ಣುವವರು ಬೆಲೆಯ ಬಗ್ಗೆ ಯೋಚಿಸುವಂತೆ ಮಾಡಿದೆ.

ಒಳ್ಳೆಯ ಫಸಲು:

ನೀರಾವರಿ ಹಾಗೂ ಅಲ್ಪಸ್ವಲ್ಪ ಕಾಲುವೆ ಇದ್ದಕಡೆಗಳಲ್ಲಿ ಜೋಳದ ಬೆಳೆ ಒಳ್ಳೆಯ ರೀತಿಯಲ್ಲಿ ಬೆಳೆದಿದೆ. ಇನ್ನೊಂದೆರಡು ತಿಂಗಳಲ್ಲಿ ಕೈಗೆ ಫಸಲು ಬರುತ್ತದೆ. ರೈತರು ಒಳ್ಳೆಯ ದರ ದೊರೆಯಲಿದೆ ಎಂದು ಇಟ್ಟುಕೊಂಡಿದ್ದ ಆಶಾಗೋಪುರವನ್ನು ಈಗ ಬಂದಿರುವ ಕೀಟಬಾಧೆ ನಿರಾಸೆಯನ್ನುಂಟು ಮಾಡಿದೆ.

ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿಯಲ್ಲಿ ಬೆಳೆದಿರುವ ಜೋಳದ ಬೆಳೆಗೆ ಕೀಟಬಾಧೆಯಿಂದ ಎಲೆಗಳನ್ನು ತಿಂದು ಹಾಕಿರುವುದು.
ಅಯ್ಯನಗೌಡ ಪಾಟೀಲ್ರೈತರು
ಬಸವರಾಜ ಕುಂಟೋಜಿರೈತರು
ಎಸ್.ಡಿ.ಭಾವಿಕಟ್ಟಿಸಹಾಯಕ ಕೃಷಿ ನಿರ್ದೇಶಕ

ಕೀಟ ಬಾಧೆ ನಿಯಂತ್ರಣಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ಮಾಡುವ ಕೀಟನಾಶಕದಿಂದ ಕೀಟಗಳು ಹೋಗುವುದೇ ಇಲ್ಲ. ಬೆಳೆಯನ್ನೆಲ್ಲ ಕೀಟಗಳು ತಿಂದು ಹಾಕಿದರೆ ಮನುಷ್ಯರು ತಿನ್ನುವುದು ಏನನ್ನು ಎಂಬ ಪ್ರಶ್ನೆ ಕಾಡುತ್ತಿದೆ

-ಬಸವರಾಜ ಎಸ್.ಕುಂಟೋಜಿಇಂಗಳಗೇರಿ ರೈತ

ಇಂಗಳಗೇರಿ ಗ್ರಾಮದಲ್ಲಿರುವ ಕೆರೆಗೆ ನೀರು ತುಂಬಿಸಲು ಅಧಿಕಾರಿಗಳು ತ್ವರಿತವಾಗಿ ನಿರ್ಧಾರ ಮಾಡಬೇಕು. ಇಲ್ಲದಿದ್ದಲ್ಲಿ  ಜೋಳದ ಇಳುವರಿಯೂ ಕಡಿಮೆಯಾಗಿ ಆಹಾರದ ಸಮಸ್ಯೆ ಸೃಷ್ಟಿಯಾಗುತ್ತದೆ --ಅಯ್ಯನಗೌಡ ಪಾಟೀಲ್ ರೈತ 

ಜೋಳಕ್ಕೆ ಕಂಡು ಬಂದಿರುವ ಕೀಟಬಾಧೆ ನಿಯಂತ್ರಣಕ್ಕೆ ಒಂದು ಲೀಟರ್ ನೀರಿಗೆ ಲ್ಯಾನ್ಸರ್ ಗೋಲ್ಡ್ ಅಥವಾ ಎಸ್ಫೇಟ್ ಒಂದು ಗ್ರಾಮ ಕೀಟನಾಶಕ ಬೆರೆಸಿ ಬೆಳೆಗಳಿಗೆ ಸಿಂಪಡಣೆ ಮಾಡಿದರೆ ಕೀಟಬಾಧೆ ಹತೋಟಿಗೆ ಬರುತ್ತದೆ

-ಎಸ್.ಡಿ.ಭಾವಿಕಟ್ಟಿಕೃಷಿ ಇಲಾಖೆ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.