ವಿಜಯಪುರ: ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ವರದಿ ನೀಡಿದ ತಕ್ಷಣವೇ ಸರ್ಕಾರ ಸ್ವೀಕರಿಸಬೇಕು ಹಾಗೂ ಜೂನ್‌ನಲ್ಲೇ ಒಳ ಮೀಸಲಾತಿ ಜಾರಿ ಮಾಡಲೇಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಬಳಿಕ ಪರಿಶಿಷ್ಟ ಜಾತಿಯಲ್ಲಿರುವ ಎಲ್ಲ ಸಮಾಜಗಳು ಒಳ ಮೀಸಲಾತಿಗೆ ಒಪ್ಪಿವೆ. ಮುಖ್ಯಮಂತ್ರಿ ಅವರೂ ಈಗಾಗಲೇ ಒಳ ಮೀಸಲಾತಿ ಜಾರಿಗೆ ಒಪ್ಪಿದ್ದಾರೆ ಎಂದರು.
ಒಳ ಮೀಸಲಾತಿ ಜಾರಿ ಆಗುವವರೆಗೂ ಯಾವುದೇ ಹೊಸ ಹುದ್ದೆಗಳಿಗೆ ಭರ್ತಿ ಮಾಡುವಂತಿಲ್ಲ ಎಂದು ಸರ್ಕಾರದ ಮೇಲೆ ಒತ್ತಡ ತರಲಾಗಿದೆ ಎಂದು ಹೇಳಿದರು.
ಸಮೀಕ್ಷೆಯಲ್ಲಿ ಮೊಬೈಲ್ ಆ್ಯಪ್ ಬಳಸಲಾಗುತ್ತಿದ್ದು, ಒಂದಷ್ಟು ತಾಂತ್ರಿಕ ಸಮಸ್ಯೆ ಎದುರಾಗಿದೆ. ಅದನ್ನು ಈಗಾಗಲೇ ಸರಿಪಡಿಸಿ, ಸಮೀಕ್ಷೆ ಸುವ್ಯವಸ್ಥಿತವಾಗಿ ಸಾಗಿದೆ ಎಂದರು.
ಕ್ರಮಕ್ಕೆ ಆಗ್ರಹ:
ವೀರಶೈವ ಲಿಂಗಾಯತ ಜಂಗಮರಿಗೂ ಬೇಡ ಜಂಗಮರಿಗೂ ವ್ಯತ್ಯಾಸ ಇದೆ. ಸದ್ಯ ಬೇಡ ಜಂಗಮರು ನಶಿಸಿ ಹೋಗಿದೆ. ಬೇಡ ಜಂಗಮ ಹೆಸರನ್ನು ಎಸ್.ಸಿ ಪಟ್ಟಿಯಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಲಿಂಗಾಯತ ಜಂಗಮರು ಬೇಡ ಜಂಗಮ ಹೆಸರಲ್ಲಿ ಮೀಸಲಾತಿ ಪಡೆದಿದ್ದರೆ ತೆಗೆದು ಹಾಕಬೇಕು, ವೀರಶೈವ ಲಿಂಗಾಯತ ಜಂಗಮರು ಮೀಸಲಾತಿ ಪಡೆಯುವುದು ಅನ್ಯಾಯ. ಲಿಂಗಾಯತ ಜಂಗಮರಿಗೆ ಬೇಡ ಜಂಗಮ ಸರ್ಟಿಫಿಕೇಟ್ ನೀಡಿದ ಅಧಿಕಾರಿಗಳನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು.
ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂಬ ಹೆಸರುಗಳು ಮಾದಿಗ ಸಮಾಜಕ್ಕೆ ಅಪಾಯಕಾರಿ ಆಗಿ ಮಾರ್ಪಟ್ಟಿದೆ. ಹೀಗಾಗಿ ಇದನ್ನು ತೆಗೆದುಹಾಕಬೇಕು ಎಂದರು.
ಮುಖಂಡರಾದ ರಮೇಶ ಆಸಂಗಿ, ಸುಭಾಶ ಕಾಲೇಬಾಗ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
‘ಮೇ 25ರ ಒಳಗಾಗಿ ಪೂರ್ಣಗೊಳಿಸಿ’
ಒಳ ಮೀಸಲಾತಿ ಸಮೀಕ್ಷೆಯನ್ನು ಮೇ 25 ರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಬಲಗೈ ಸಂಬಂಧಿತ ಒಳಮೀಸಲಾತಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿಎಚ್.ಶಂಕರ್ ಒತ್ತಾಯಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರು ಹಂತದಲ್ಲಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ಎಲ್ಲರೂ ತಮ್ಮ ಮೂಲ ಜಾತಿಯನ್ನು ನಿರ್ಭಯವಾಗಿ ಬರೆಯಿಸಬೇಕು ಎಂದರು. ಹೊಲೆಯ ಸಂಬಂಧಿಸಿದ ಜಾತಿಗಳು ಹಿಂಜರಿಕೆ ಇಲ್ಲದೇ ಜಾತಿ ಹೆಸರನ್ನು ಸ್ವ ಇಚ್ಛೆಯಿಂದ ದಾಖಲಿಸಬೇಕು ಎಂದು ಮನವಿ ಮಾಡಿದರು. ಸಮೀಕ್ಷೆಯನ್ನು ಸರ್ಕಾರ ಪಾರದರ್ಶಕವಾಗಿ ನಡೆಸುತ್ತಿದ್ದು ಎಲ್ಲ ರೀತಿಯ ಸಹಕಾರ ನೀಡಬೇಕು ಅಗತ್ಯ ದಾಖಲೆಗಳನ್ನು ಒದಗಿಸಬೇಕು ಎಂದರು. ಉಪಾಧ್ಯಕ್ಷ ಎಸ್. ಬಿ ಸುಳ್ಳದ ಮಾತನಾಡಿ ಬೇಡ ಜಂಗಮ ಎಂದು ಲಿಂಗಾಯತ ಜಂಗಮರು ಸುಳ್ಳು ನಮೂದಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬೇಡ ಜಂಗಮರು ಇಲ್ಲವೇ ಇಲ್ಲ. 500 ಜನ ಇರುವವರು 5 ಲಕ್ಷ ಆಗಿರುವುದು ಕಳವಳಕಾರಿ ಸಂಗತಿ. ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಅವರನ್ನು ಕೈಬಿಡಬೇಕು ಯಾವುದೇ ಕಾರಣಕ್ಕೂ ಅವರನ್ನು ಎಸ್.ಸಿ ಪಟ್ಟಿಗೆ ಸೇರ್ಪಡೆ ಮಾಡಬಾರದು ಎಂದು ಆಗ್ರಹಿಸಿದರು. ಜಂಗಮರು ಲಿಂಗಾಯತ ಸಮಾಜದಲ್ಲಿ ಪೂಜಾರಿಗಳು. ಸ್ಪೃಶ್ಯ ಸಮಾಜದವರು. ಎಸ್.ಸಿ.ಮೀಸಲಾತಿ ಪಡೆಯಲು ಮುಂದಾಗಿರುವ ಅವರ ಕುತುಂತ್ರ ಖಂಡನೀಯ. ಸುಳ್ಳು ಜಾತಿ ಬರೆಸುತ್ತಿರುವುದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸುತ್ತೇವೆ ಎಂದರು. ಪ್ರಮುಖರಾದ ಬಿ.ಸಿ.ವಾಲಿ ಎಸ್.ಬಿ.ಸುಳ್ಳದ ಸಿದ್ದು ರಾಯಣ್ಣವರ ವೈ.ಸಿ. ಮಯೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.