
ಆಲಮಟ್ಟಿ: ಸಮೀಪದ ಗೊಳಸಂಗಿ ಗ್ರಾಮದ ರೈತರೊಬ್ಬರು ಎಕರೆಗೆ 100 ರಿಂದ 120 ಟನ್ ಕಬ್ಬು ಬೆಳೆದು ಕರ್ನಾಟಕ, ಮಹಾರಾಷ್ಟ್ರ, ಛತ್ತಿಸಗಡ ರೈತರಿಗೂ ಮಾದರಿಯಾಗಿದ್ದಾರೆ.
ಗೊಳಸಂಗಿ ಗ್ರಾಮದ ನಾರಾಯಣ ಅರ್ಜುನ ಸಾಳುಂಕೆ ಸೇನೆಯಿಂದ 2020ರಲ್ಲಿ ನಿವೃತ್ತರಾದ ಬಳಿಕ ಪಿತ್ರಾರ್ಜಿತವಾಗಿ ಬಂದ ಒಕ್ಕಲುತನವನ್ನೇ ಒಪ್ಪಿಕೊಂಡು ದುಡಿಯುತ್ತ ಬಂದು ಇತರ ರೈತರಿಗೆ ಮಾದರಿಯಾಗಿದ್ದಾರೆ.
ಆರಂಭದಲ್ಲಿ ಈರುಳ್ಳಿ, ಮೆಕ್ಕೆಜೋಳ, ಬಾಳೆಹಣ್ಣಿನ ಇಳುವರಿ ಮಾಡುತ್ತ ಬಂದಿದ್ದ ಇವರು, ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಗದ ಕಾರಣದಿಂದಾಗಿ ಕಬ್ಬು ಬೆಳೆಯಲು ಆರಂಭಿಸಿದರು.
ಹತ್ತಿರದ ಸಂಬಂಧಿಯೊಬ್ಬರಿಂದ ಸೂಕ್ತ ಮಾಹಿತಿ ಪಡೆದು ಇಸ್ರೇಲ್ ಮಾದರಿ ಕಬ್ಬು ಕೃಷಿಗೆ ಮುಂದಾದರು. ಕಡಿಮೆ ಪ್ರಮಾಣದ ನೀರು, ಗೊಬ್ಬರದಿಂದ ಅಧಿಕ ಲಾಭ ಗಳಿಸುವ ತಂತ್ರಜ್ಞಾನವೇ ಇಸ್ರೇಲ್ ಮಾದರಿಯ ಗುಟ್ಟು. ತಮಗಿರುವ 7 ಎಕರೆ ಜಮೀನಿನಲ್ಲಿ ಹನಿ ನೀರಾವರಿ (ಡ್ರಿಪ್) ಪದ್ಧತಿ ಅಳವಡಿಸಿಕೊಂಡು ಆ ಮೂಲಕ ಹೆಚ್ಚಿನ ಫಸಲನ್ನು ಬೆಳೆದು ಕೃಷಿಯಲ್ಲಿ ಖುಷಿಯನ್ನು ಕಳೆದುಕೊಂಡ ರೈತರ ಹುಬ್ಬೇರುವಂತೆ ಮಾಡಿರುವುದು ಇವರ ಜಾಣ್ಮೆ.
2022 ರಿಂದ ಪ್ರತಿ ಎಕರೆಗೆ 100 ರಿಂದ 120 ಟನ್ ಕಬ್ಬು ಬೆಳೆ ತೆಗೆಯುವ ಮೂಲಕ ಇತರ ರೈತರ ಹುಬ್ಬೇರುವಂತೆ ಮಾಡಿದ್ದಾರೆ. ಈಗ ಇದು ಮೂರನೇ ಕೂಳೆ ಕಬ್ಬು. ಟ್ರಾಕ್ಟರ್ ಮೂಲಕ ಕಾರ್ಖಾನೆಗೆ ಸಾಗಿಸಿ, ಅಲ್ಲಿ ತೂಕ ಮಾಡಿಸಿದಾಗಲೂ ಎಕರೆಗೆ 107 ಟನ್ ವರೆಗೆ ಬಂದಿದೆ. ಹೊಲದಲ್ಲಿಯೇ ತೂಕ ಮಾಡಿದ್ರೆ ತೂಕ ಇನ್ನೂ ಹೆಚ್ಚಾಗುತ್ತದೆ. ಹೆಚ್ಚಿನ ಬೆಳೆ ತೆಗೆಯಲು ಭೂಮಿ, ಬೀಜ, ನೀರು ಮತ್ತು ತಂತ್ರಜ್ಞಾನವೇ ಮುಖ್ಯ ಎನ್ನುತ್ತಾರೆ ಸಾಧಕ ರೈತ ನಾರಾಯಣ.
28 ರಿಂದ 35 ಗಣಿಕೆ
ಇವರು ಬೆಳೆದ ಎಚ್.ಎನ್.ಕೆ. 13374 ತಳಿಯ ಒಂದು ಕಬ್ಬು 28 ರಿಂದ 35 ಗಣಿಕೆವರೆಗೂ ಬೆಳೆದಿದೆ. ಸಾಮಾನ್ಯವಾಗಿ ಕಬ್ಬು 18 ರಿಂದ 20 ಗಣಿಕೆ ಇರುತ್ತವೆ. ಸುತ್ತಮುತ್ತಲಿನ ರೈತರು ಇವರ ಜಮೀನಿಗೆ ಆಗಾಗ ಭೇಟಿ ನೀಡುತ್ತಿರುವುದು ಸಾಮಾನ್ಯವಾಗಿದೆ. ದೂರದ ಮಹಾರಾಷ್ಟ್ರ, ಉತ್ತರ ಪ್ರದೇಶದ ರೈತರು ಇವರ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದ್ದಾರೆ. ಬುಧವಾರವಷ್ಟೇ ಛತ್ತೀಸಗಡದ ಬೆಮೇತ್ರಾ ಜಿಲ್ಲೆಯ ಮುಲ್ಮುಲಾ ಗ್ರಾಮದ ರೈತ ಸುಮಿತ್ ರಾಣಾ ಭೇಟಿ ನೀಡಿ ಮಾಹಿತಿ ಪಡೆದಿರುವುದು ವಿಶೇಷವಾಗಿದೆ.
ಬುಧವಾರದ ಭೇಟಿಯ ವೇಳೆ ಛತ್ತೀಸಗಡದ ರೈತರೊಂದಿಗೆ ಮಾದನ್ ಅಗ್ರಿಟೆಕ್ ಕಂಪನಿಯ ಕರ್ನಾಟಕ ಮತ್ತು ತಮಿಳುನಾಡಿನ ಟೆಕ್ನಿಕಲ್ ಸೇಲ್ಸ್ ಮ್ಯಾನೇಜರ್ ಅಕ್ಕಿ ನಾಗರಾಜ್, ಉತ್ತರ ಕರ್ನಾಟಕದ ವಲಯ ವ್ಯವಸ್ಥಾಪಕ ಗುರುರಾಜ್ ಜಂಗಮಶೆಟ್ಟಿ, ಹಾಲು ಉತ್ಪಾದಕ ಸಂಘದ ಅಧ್ಯಕ್ಷ ವಿಶ್ವನಾಥ ಕಾರಜೋಳ, ಪ್ರಗತಿಪರ ರೈತರಾದ ಸಹದೇವ ಪವಾರ, ಗಂಗಾರಾಮ ಪವಾರ, ಕೇಶವ ಪವಾರ, ಸದಾಶಿವ ಚಿಮ್ಮಲಗಿ, ಸಿದ್ದು ಸಾಳುಂಕೆ, ಸಂತೋಷ ಕಿರಗತ ಮತ್ತಿತರರು ಇದ್ದರು.
ನಾರಾಯಣ ಸಾಳುಂಕೆ ಅವರ ಸಂಪರ್ಕಕ್ಕೆ ಮೊ.ನಂ: 7698573507
ಛತ್ತೀಸಗಡದಲ್ಲಿ ನಾನೂ 315 ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದೇನೆ. ಆದರೆ ಪ್ರತಿ ಎಕರೆಗೆ ಕೇವಲ 30 ರಿಂದ 35 ಟನ್ ಕಬ್ಬು ಮಾತ್ರ ಇಳುವರಿಯಾಗುತ್ತಿದೆ. ಸಾಳುಂಕೆ ಅವರ ಇಸ್ರೇಲ್ ಮಾದರಿ ಅನುಸರಿಸಿ ಕಬ್ಬು ಬೆಳೆಯುವ ಕನಸು ಕಾಣುತ್ತಿದ್ದೇನೆ.– ಸುಮಿತ್ ರಾಣಾ, ಛತ್ತೀಸಗಡದ ರೈತ
ರೈತರು ಬರೀ ಬೆವರು ಹರಿಸಿ ದುಡಿದರೆ ತಕ್ಕ ಪ್ರತಿಫಲ ಸಿಗದು. ಅದಕ್ಕೂ ಮುನ್ನ ತಮ್ಮ ಭೂಮಿ ನೀರು ಬೀಜದ ಜತೆಗೆ ಸೂಕ್ತ ತಂತ್ರಜ್ಞಾನವನ್ನೂ ಓರೆಗೆ ಹಚ್ಚಿ ಕೆಲಸ ಮಾಡಬೇಕು. ರೈತರಿಗೆ ಉಚಿತವಾಗಿ ಮಾರ್ಗದರ್ಶನವನ್ನೂ ನೀಡುತ್ತೇನೆ.– ನಾರಾಯಣ ಅರ್ಜುನ ಸಾಳುಂಕೆ, ರೈತ ಗೊಳಸಂಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.