ADVERTISEMENT

ಇಸ್ರೋದಿಂದ ಪ್ರಾತ್ಯಕ್ಷಿಕೆ ಪ್ರದರ್ಶನ: 2 ಸಾವಿರ ವಿದ್ಯಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 12:49 IST
Last Updated 13 ಫೆಬ್ರುವರಿ 2020, 12:49 IST
ಡಾ.ಅಲೋಕ್‌ ಕುಮಾರ್ ಶ್ರೀವಾಸ್ತವ
ಡಾ.ಅಲೋಕ್‌ ಕುಮಾರ್ ಶ್ರೀವಾಸ್ತವ   

ವಿಜಯಪುರ: ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ.ವಿಕ್ರಮ್ ಸಾರಾಭಾಯಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಗ್ರಂಥಾಲಯ ಕಟ್ಟಡದಲ್ಲಿ ಫೆ.14ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 8.30 ಗಂಟೆಗೆ ‘ಸ್ಪೇಸ್ ಆನ್ ವೀಲ್ಸ್‌’ ಪ್ರದರ್ಶನದ ಉದ್ಘಾಟನೆ, ಬೆಳಿಗ್ಗೆ 10.30 ಗಂಟೆಗೆ ಡಾ.ಆರ್.ಆರ್.ನವಲಗುಂದ ಮುಖ್ಯ ಭಾಷಣ ಮಾಡುವರು. ಬೆಳಿಗ್ಗೆ 11.30 ರಿಂದ 12.30ರ ವರೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ, 12.30 ರಿಂದ 2 ಗಂಟೆವರೆಗೆ ಶಿಕ್ಷಕರ ಜೊತೆ ಸಂವಾದ, 2 ರಿಂದ 3.30ರ ವರೆಗೆ ರಸಪ್ರಶ್ನೆ ಸ್ಪರ್ಧೆಗಳು ಜರುಗಲಿದ್ದು, ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

ಶತಮಾನೋತ್ಸವ ಅಂಗವಾಗಿ ವಿಜ್ಞಾನಿಗಳೊಂದಿಗೆ ಸಂವಾದ, ವಸ್ತು ಪ್ರದರ್ಶನ, ವಿಡಿಯೊ ಪ್ರದರ್ಶನ, ಸೆಲ್ಫಿ ಕಾರ್ನರ್, 5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, 8 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆ, 8 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಗುತ್ತದೆ.

ADVERTISEMENT

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಯು.ಆರ್.ರಾವ್ ಉಪಗ್ರಹ ಕೇಂದ್ರದ ಉಪನಿರ್ದೇಶಕ ಡಾ.ಅಲೋಕ್‌ ಕುಮಾರ್ ಶ್ರೀವಾಸ್ತವ, ‘ವಿಕ್ರಮ್ ಸಾರಾಭಾಯಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ದೇಶದಾದ್ಯಂತ ಎಲ್ಲಾ ರಾಜ್ಯ, ಜಿಲ್ಲೆಗಳಲ್ಲಿ ಇಸ್ರೋ ಪ್ರಾತ್ಯಕ್ಷಿಕೆ, ಸಾಧನೆಗಳನ್ನು ಶಾಲಾ ಮಕ್ಕಳಿಗೆ ತಿಳಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದು ವರ್ಷವಿಡೀ ಜಾರಿಯಲ್ಲಿರುತ್ತದೆ. ಈ ಕಾರ್ಯಕ್ರಮದಲ್ಲಿ 5–6 ಸಾವಿರ ವಿಜ್ಞಾನಿಗಳು ಪಾಲ್ಗೊಂಡಿದ್ದಾರೆ’ ಎಂದು ಹೇಳಿದರು.

ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಅತುಲ್ ಆಯರೆ ಮಾತನಾಡಿ, ‘ಸುಮಾರು ಎರಡೂವರೆ ಸಾವಿರ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಇಸ್ರೋದಿಂದ ವಸ್ತು ಸಂಗ್ರಹಾಲಯವನ್ನು ಆರಂಭಿಸಿದರೆ ಅದರ ನಿರ್ಹವಣೆ ವಹಿಸಿಕೊಳ್ಳಲು ಸಿದ್ಧರಿದ್ದೇವೆ’ ಎಂದು ಹೇಳಿದರು.

ಇಸ್ರೋ ವಿಜ್ಞಾನಿಗಳಾದ ಶ್ರೀದೇವಿ, ವಿಲಾಸ ರಾಠೋಡ, ಡಾ.ನಾಗೇಂದ್ರ, ಶ್ರೀಧರ, ರಮಣರೆಡ್ಡಿ, ಶ್ರೀನಿವಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.