
ಸಿಂದಗಿ: ‘ಮತಕ್ಷೇತ್ರದ ಆಲಮೇಲ, ಸಿಂದಗಿ ಅವಳಿ ತಾಲ್ಲೂಕುಗಳಲ್ಲಿನ ಐದಾರು ಹಳ್ಳಿ ಹೊರತುಪಡಿಸಿದರೆ ಉಳಿದೆಡೆ ಜಲಜೀವನ ಯೋಜನೆಯ ಬಗ್ಗೆ ವ್ಯಾಪಕ ದೂರು ಕೇಳಿ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಯೋಜನೆಗೆ ಅಪಾರ ಪ್ರಮಾಣದಲ್ಲಿ ಹಣ ನೀಡಿದ್ದರೂ ಎಳ್ಳಷ್ಟೂ ಪ್ರಗತಿ ಕಂಡಿಲ್ಲ’ ಎಂದು ಶಾಸಕ ಅಶೋಕ ಮನಗೂಳಿ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಜರುಗಿದ 2025–26ನನೇ ಸಾಲಿನ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಇದು ನಮ್ಮ ಮತಕ್ಷೇತ್ರದ ಸಮಸ್ಯೆ ಮಾತ್ರವಲ್ಲದೆ, ಇಡೀ ರಾಜ್ಯದ ಸಮಸ್ಯೆಯಾಗಿದೆ. ಬೆಳಗಾವಿ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ. ಜೆಜೆಎಂ ಅತ್ಯುತ್ತಮ ಯೋಜನೆಯಾಗಿದೆ. ಕುಡಿಯುವ ನೀರಿನ ಪೂರೈಕೆಗಾಗಿ ಸರ್ಕಾರವು ಪ್ರತ್ಯೇಕವಾಗಿ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಇಲಾಖೆಯನ್ನೂ ರಚಿಸಿದೆ. ಈ ಇಲಾಖೆಯ ಅಧಿಕಾರಿಗಳ ಕೆಲಸವಾದರೂ ಏನು? ಜೆಜೆಎಂ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡದಿದ್ದರೆ ಹೇಗೆ’ ಎಂದು ಇಲಾಖೆಯ ಎಇಇ ತಾರಾನಾಥ ಅವರನ್ನು ಪ್ರಶ್ನಿಸಿದರು.
‘ಗ್ರಾಮ ಪಂಚಾಯಿತಿಯಿಂದ ಸರಿಯಾಗಿ ಸಹಕಾರ ಸಿಗುತ್ತಿಲ್ಲ. ಮನೆ ಮನೆಗೆ ನಳ ಕೊಡುವುದು ನಮ್ಮ ಕೆಲಸ. ಅದಕ್ಕೆ ನೀರಿನ ವ್ಯವಸ್ಥೆಯ ನಿರ್ವಹಣೆ ಗ್ರಾಮ ಪಂಚಾಯಿತಿಯಿಂದಲೇ ಆಗಬೇಕು’ ಎಂದು ತಾರಾನಾಥ ಪ್ರತಿಕ್ರಿಯಿಸಿದರು.
‘ಇಲಾಖೆಯ ಇಇ ಮತ್ತು ಎಇಇ ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಅಲ್ಲಿನ ಗ್ರಾಮಸ್ಥರಿಂದ ಜೆಜೆಎಂ ಕುರಿತು ಅಭಿಪ್ರಾಯ ಸಂಗ್ರಹಿಸಿ ವರದಿ ಸಲ್ಲಿಸಬೇಕು. ಜಿಲ್ಲಾಮಟ್ಟದ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತುವೆ. ಸದ್ಯ ಠರಾವು ಪಾಸು ಮಾಡಿ’ ಎಂದು ತಾಲ್ಲೂಕು ಪಂಚಾಯಿತಿ ಇಒಗೆ ಸೂಚಿಸಿದರು.
ಜಿಲ್ಲಾ ಕೆಡಿಪಿ ಸದಸ್ಯ ಶಿವಾನಂದ ಕೊಟಾರಗಸ್ತಿ, ಆಲಮೇಲ ತಾಲ್ಲೂಕು ಪಂಚಾಯಿತಿ ಇಒ ಫರೀದಾ ಪಠಾಣ, ಆಡಳಿತಾಧಿಕಾರಿ ಮಹೇಶ ಪೋತದಾರ, ತಹಶೀಲ್ದಾರ್ ಎಂ.ಎಸ್.ಅರಕೇರಿ, ಸಿಂದಗಿ ತಾಪಂ ಇಒ ರಾಮು ಅಗ್ನಿ, ಆಡಳಿತಾಧಿಕಾರಿ ಸಿ.ಬಿ.ಕುಂಬಾರ, ತಹಶೀಲ್ದಾರ್ ಕರೆಪ್ಪ ಬೆಳ್ಳಿ ಇದ್ದರು.
‘ಓವರ್ ಹೆಡ್ ಟ್ಯಾಂಕ್ ಸೋರಿಕೆ’
‘ಕುಮಸಗಿ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಹೊಸದಾಗಿ ನಿರ್ಮಾಣಗೊಂಡ 50 ಸಾವಿರ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಸೋರುತ್ತಿದೆ. ಒಂದು ಗಂಟೆಯಲ್ಲೇ ನೀರು ಖಾಲಿಯಾಗುವ ಕಾರಣ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ’ ಎಂದು ಕೆಡಿಪಿ ಸದಸ್ಯ ಅನೀಲ ಉಡಚಾಣ ತಿಳಿಸಿದರು.
‘ಶಾಸಕರ ನಿಧಿಯ ₹1 ಕೋಟಿ ವೆಚ್ಚದಲ್ಲಿ ಬಳಗಾನೂರ ಕೆರೆಯಿಂದ ಚಾಂದಕವಠೆ ಗ್ರಾಮಕ್ಕೆ ಕುಡಿಯುವ ನೀರಿನ ಪೈಪ್‌ಲೈನ್ ಮಾಡಿಸಿದ್ದರೂ ನೀರಿನ ತೊಂದರೆ ಉಂಟಾಗಲು ಕಾರಣವೇನು’ ಎಂದು ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಪ್ರಕಾಶ ಪ್ರಶ್ನಿಸಿದರು.
‘ಮಾರ್ಗ ಮಧ್ಯೆ ರೈತರು ಪೈಪ್‌ಗಳನ್ನು ಕತ್ತರಿಸಿ ಹೊಲಗಳಿಗೆ ನೀರು ಹರಿಸುತ್ತಿದ್ದಾರೆ’ ಎಂದು ಜಿಲ್ಲಾ ಕೆಡಿಪಿ ಸದಸ್ಯ ನೂರಅಹ್ಮದ ಅತ್ತಾರ ತಿಳಿಸಿದರು. ‘ಹೊಲಗಳಿಗೆ ಅಕ್ರಮವಾಗಿ ನೀರು ಹರಿಸುವುದನ್ನು ಪೊಲೀಸರ ಭದ್ರತೆಯಲ್ಲಿ ಕಡಿತಗೊಳಿಸಬೇಕು’ ಎಂದು ಶಾಸಕರು ಸೂಚಿಸಿದರು.
ಸರ್ಕಾರದ ಯೋಜನೆಗಳು ಸಮಪರ್ಕವಾಗಿ ಅನುಷ್ಠಾನಗೊಳ್ಳಲು ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನ ಅವಶ್ಯ. ಎಲ್ಲ ಇಲಾಖೆಗಳ ಅಧಿಕಾರಿಗಳು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಬೇಕು–ಅಶೋಕ ಮನಗೂಳಿ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.