
ವಿಜಯಪುರ: ವೀರಮಾತೆ ಕಿತ್ತೂರ ಚನ್ನಮ್ಮಳ ಜನ್ಮಸ್ಥಳ ಮೂಲತಃ ತಾಲ್ಲೂಕಿನ ಜಂಬಗಿ (ಆ) ಗ್ರಾಮ ಎಂದು ಅನೇಕ ಗ್ರಂಥಗಳು ಹಾಗೂ ಜಂಬಗಿ ದೇಶಮುಖ ಮನೆತನದ ವಂಶಾವಳಿಯಲ್ಲಿ ಉಲ್ಲೇಖಿತವಾಗಿದೆ. ಗ್ರಾಮವನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಬೇಕು ಎಂದು ಸಮಾಜ ಸೇವಕ ಬಸವಂತರಾಯ ದೇಶಮುಖ ಒತ್ತಾಯಿಸಿದರು.
ತಾಲ್ಲೂಕಿನ ಜಂಬಗಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1858ರಲ್ಲಿ ಜಂಬಗಿ ದೇಶಮುಖರು ಹಾಗೂ ಇಂಡಿ ತಾಲ್ಲೂಕಿನ ಕೊಟ್ನಾಳ ದೇಶಮುಖ ವಾಡೆಗಳಲ್ಲಿ ಮದ್ದುಗುಂಡು ತಯಾರಿಸಿ ಕುದುರೆ ಮೂಲಕ ಅವುಗಳನ್ನು ಸುರಪುರದ ವೆಂಕಟಪ್ಪ ನಾಯಕನಿಗೆ ಸರಬರಾಜು ಮಾಡುತ್ತಿದ್ದರು. ಇದನ್ನು ಕಂಡು ಬ್ರಿಟಿಷರು ಜಂಬಗಿ ಗ್ರಾಮದಲ್ಲಿ ಬಸಲಿಂಗಪ್ಪ ವೀರಸಂಗಪ್ಪ ದೇಶಮುಖ ಅವರನ್ನು ಬಂಧಿಸಿ 1858 ರಲ್ಲಿ ಸೋಲಾಪುರದಲ್ಲಿ ಗಲ್ಲಿಗೆ ಏರಿಸುತ್ತಾರೆ. ಬಸಲಿಂಗಪ್ಪ ವೀರಸಂಗಪ್ಪ ದೇಶಮುಖರ ಮಗಳಾದ ಪದ್ಮಾವತಿ ಅವರ ಮಗಳೇ ವೀರಮಾತೆ ಕಿತ್ತೂರ ಚನ್ನಮ್ಮ ಎಂದರು.
ವಾಡಿಕೆಯಂತೆ ಪ್ರಥಮ ಹೆರಿಗೆಯು ತಾಯಿಯ ಮನೆಯಲ್ಲಿ ಆಗುವದು ಸಹಜ. ಕಾರಣ ಚನ್ನಮ್ಮಳು ಜಂಬಗಿ ಗ್ರಾಮದಲ್ಲಿ ಜನಿಸಿದ್ದಾರೆ. ಸರ್ಕಾರ ವೀರಮಾತೆ ಚನ್ನಮ್ಮಳ ಹುಟ್ಟೂರಾದ ಜಂಬಗಿ ಗ್ರಾಮದಲ್ಲಿ ಚನ್ನಮ್ಮಳ ಮೂರ್ತಿ ಸ್ಥಾಪಿಸಬೇಕು. ಜಂಬಗಿ ಗ್ರಾಮವನ್ನು ಐತಿಹಾಸಿಕ ಗ್ರಾಮವನ್ನಾಗಿ ಘೋಷಿಸಬೇಕು. ಚನ್ನಮ್ಮ ಹಾಗೂ ಬಸಲಿಂಗಪ್ಪ ದೇಶಮುಖ ಅವರ ಪ್ರಾಧಿಕಾರ ಸ್ಥಾಪಿಸಬೇಕು. ಬಸಲಿಂಗಪ್ಪ ದೇಶಮುಖ ಮೂರ್ತಿ ಸ್ಥಾಪನೆ ಹಾಗೂ ದ್ವಾರಬಾಗಿಲು ನಿರ್ಮಿಸಬೇಕು ಎಂಬ ಬೇಡಿಕೆ ಮಂಡಿಸಿದರು.
ಶ್ರೀಮಂತರಾವ ದೇಶಮುಖ ಸಮಾರಂಭ ಉದ್ಘಾಟಿಸಿದರು. ಪ್ರಭುಲಿಂಗ ಶರಣರು, ಲಿಂಗಾಯತ ಮಹಾಮಠ ಹಿಂಗನಗುತ್ತಿ ಸಾನ್ನಿಧ್ಯ ವಹಿಸಿದ್ದರು. ಎಸ್.ಡಿ.ಪಾಟೀಲ, ಚಂದ್ರಶೇಖರ ಅರಕೇರಿ, ನೀಲಕಂಠ ಪಾಟೀಲ, ಬಾಪುರಾಯಗೌಡ ಬಿರಾದಾರ, ಅಮೃತ ಕುಲಕರ್ಣಿ, ಮಲ್ಲನಗೌಡ ಪಾಟೀಲ ಮನಗೂಳಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.