ADVERTISEMENT

ಜ. 8, 9 ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 13:23 IST
Last Updated 5 ಜನವರಿ 2019, 13:23 IST

ವಿಜಯಪುರ: ‘ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಇದೇ 8, 9ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ. ಇದಕ್ಕೆ ಬೆಂಬಲ ನೀಡುವಂತೆ ವಿವಿಧ ಸಂಘಟನೆಗಳನ್ನು ಈಗಾಗಲೇ ಕೋರಿದ್ದೇವೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರ ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ದೇಶದ ರೈತರಿಗೆ, ಕಾರ್ಮಿಕರಿಗೆ ಇನ್ನೂ ಅಚ್ಛೇದಿನ್‌ ಬಂದಿಲ್ಲ. ಈ ಹಿಂದಿಗಿಂತ ಶರವೇಗದಲ್ಲಿ ಖಾಸಗೀಕರಣ. ಉದಾರೀಕರಣ, ಜಾಗತೀಕರಣ ಪ್ರಕ್ರಿಯೆ ನಡೆದಿದ್ದು, ಇದರಿಂದ ದೇಶದ ಬೆನ್ನೆಲುಬಿನಂತಿರುವ ಈ ಎರಡೂ ಸಮುದಾಯ ತತ್ತರಿಸಿವೆ’ ಎಂದು ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕೇಂದ್ರ ಸರ್ಕಾರ ಕಾರ್ಪೊರೇಟ್‌ ವಲಯದ ಪರ ನಿಂತಿದೆ. ಬಡವರು, ರೈತರು, ಕಾರ್ಮಿಕರನ್ನು ಮರೆತಿದೆ. ನಾಲ್ಕುವರೆ ವರ್ಷದ ತನ್ನ ಆಡಳಿತಾವಧಿಯಲ್ಲಿ ಕಾರ್ಮಿಕ ವಿರೋಧಿ, ರೈತ ವಿರೋಧಿ ಕಾನೂನು ಜಾರಿಗೆ ಮುಂದಾಗಿದೆ. ಇದನ್ನು ಖಂಡಿಸಿ ಎರಡು ದಿನ ಮುಷ್ಕರ ನಡೆಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಬ್ಯಾಂಕ್‌ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಜಿ.ಗಾಂಧಿ ಮಾತನಾಡಿ ‘ಕೇಂದ್ರದ ಆರ್ಥಿಕ, ಕಾರ್ಮಿಕ ನೀತಿಗೆ ನಮ್ಮ ವಿರೋಧವಿದೆ. ಬ್ಯಾಂಕ್‌ ನೌಕರರು ಈ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಈಚೆಗಿನ ದಿನಗಳಲ್ಲಿ ಬ್ಯಾಂಕ್‌ಗಳ ವಿಲೀನದಿಂದ ನಿರುದ್ಯೋಗ ಹೆಚ್ಚುತ್ತಿದೆ’ ಎಂದರು.

‘ಜನ, ರೈತ ವಿರೋಧಿ ನೀತಿಯ ವಿರುದ್ಧ ಧ್ವನಿ ಎತ್ತುತ್ತೇವೆ. ಕಾರ್ಮಿಕ ಕಾನೂನುಗಳನ್ನು ಕಾರ್ಪೊರೇಟ್‌ ವಲಯದ ಅನುಕೂಲಕ್ಕೆ ತಿದ್ದುಪಡಿ ಮಾಡುವುದನ್ನು ಖಂಡಿಸುತ್ತೇವೆ. ಕೇಂದ್ರದ ನೀತಿಗೆ ನಮ್ಮ ವಿರೋಧವಿದೆ’ ಎಂದು ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

‘ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ 75 ಲಕ್ಷ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ. ಬಡವರ ಖಾತೆಗೆ ನಯಾಪೈಸೆ ಜಮೆಯಾಗಿಲ್ಲ. ನೋಟ್‌ ಬ್ಯಾನ್‌ನಿಂದಲೂ ಜನರಿಗೆ ಅಚ್ಛೇದಿನ್‌ ಬರಲಿಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಎಐಟಿಯುಸಿಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಹಿಟ್ನಳ್ಳಿ, ಸಂಚಾಲಕ ಮಲ್ಲಿಕಾರ್ಜುನ ಎಚ್‌.ಟಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಸುರೇಖಾ ರಜಪೂತ, ಬಿಸಿಯೂಟ ನೌಕರರ ಜಿಲ್ಲಾ ಘಟಕದ ಅಧ್ಯಕ್ಷೆ ಕಾಳಮ್ಮ ಬಡಿಗೇರ, ಸಾರಿಗೆ ನೌಕರರ ಸಂಘಟನೆಯ ಐ.ಐ.ಮುಶ್ರೀಫ್‌, ಎಂ.ಎಲ್.ಅವಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.