ADVERTISEMENT

ವಿಜಯಪುರದಲ್ಲಿ ಜನತಾ ಸಮಾವೇಶ 27ಕ್ಕೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 2:24 IST
Last Updated 17 ಫೆಬ್ರುವರಿ 2026, 2:24 IST
ವಿಜಯಪುರ ನಗರದಲ್ಲಿ ನಡೆಯಲಿರುವ ಜೆಡಿಎಸ್ ಬೆಳ್ಳಿಹಬ್ಬದ ಪೂರ್ವ ಸಿದ್ಧತಾ ಸಭೆಯಲ್ಲಿ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು
ವಿಜಯಪುರ ನಗರದಲ್ಲಿ ನಡೆಯಲಿರುವ ಜೆಡಿಎಸ್ ಬೆಳ್ಳಿಹಬ್ಬದ ಪೂರ್ವ ಸಿದ್ಧತಾ ಸಭೆಯಲ್ಲಿ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು   

ವಿಜಯಪುರ: ‘ಜೆಡಿಎಸ್‌ ಸ್ಥಾಪನೆಯಾಗಿ 25 ವರ್ಷವಾಗಿರುವುದರಿಂದ ನಾಡಿನಾದ್ಯಂತ ಬೆಳ್ಳಿಹಬ್ಬ ಆಚರಿಸಲಾಗುತ್ತಿದೆ. ಫೆ.27ರಂದು ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಏಳು ಜಿಲ್ಲೆಗಳ ಕಿತ್ತೂರು ಕರ್ನಾಟಕದ ಜನತಾ ಸಮಾವೇಶವನ್ನು ವಿಜಯಪುರದಲ್ಲಿ ಆಯೋಜಿಸಲಾಗುತ್ತಿದೆ’ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸೇರಿದಂತೆ ಪ್ರಮುಖ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಸುಮಾರು ಒಂದು ಲಕ್ಷ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ದೇವೇಗೌಡರು ಕಟ್ಟಿ ಬೆಳೆಸಿದ ಪ್ರಾದೇಶಿಕ ಪಕ್ಷ ಜೆಡಿಎಸ್‌ ನಾಯಕರನ್ನು ತಯಾರು ಮಾಡುವ ಕಾರ್ಖಾನೆ. ಪಕ್ಷ ಸದೃಢವಾಗಿದೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಜೆಡಿಎಸ್‌ ತನ್ನ ಜಾತ್ಯತೀತ ಧೋರಣೆಯಿಂದ ಹಿಂದೆ ಸರಿದಿಲ್ಲ’ ಎಂದು ಹೇಳಿದರು.

ADVERTISEMENT

‘ಜನತಾದಳ ಪಕ್ಷ ಸರ್ವ ಜನಾಂಗಕ್ಕೂ, ಸರ್ವ ಸಮಾಜಕ್ಕೂ ನ್ಯಾಯ ಒದಗಿಸಿದೆ. ಪಕ್ಷ ತನ್ನ ಶಕ್ತಿ, ವರ್ಚಸ್ಸನ್ನು ಉಳಿಸಿಕೊಂಡಿದೆ. ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ಹೊಡೆದೋಡಿಸಲು ಬಿಜೆಪಿಯ ಜೊತೆಗೆ ಸೇರಿದ್ದೇವೆ’ ಎಂದು ಹೇಳಿದರು.

ಕೊಡುಗೆ ಅಪಾರ: ‘ವಿಜಯಪುರ ಜಿಲ್ಲೆಗೂ ದೇವೇಗೌಡರಿಗೂ ಅವಿನಾಭಾವ ಸಂಬಂಧವಿದೆ. ಆಲಮಟ್ಟಿ ಎತ್ತರರಿಸಲು ದೇವೇಗೌಡರು ಕೊಡುಗೆ ಕೊಟ್ಟಿದ್ದಾರೆ. ಜಿಲ್ಲೆಯ ಜನತೆ ಮುಂದಿನ ಚುನಾವಣೆಯಲ್ಲಿ ನಮಗೆ ಆಶೀರ್ವದಿಸಲಿದ್ದಾರೆ’ ಎಂದರು.

‘ಚುನಾವಣೆಯ ಗೆಲುವು ಸೋಲು ನಾಯಕತ್ವವನ್ನು ನಿರ್ಣಯಿಸುವುದಿಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಈಗಾಗಲೇ ಮೊದಲ ಹಂತದಲ್ಲಿ ರಾಜ್ಯದಾದ್ಯಂತ ಸಂಚರಿಸಿ ಕೆಲಸ ಮಾಡಿದ್ದೇನೆ’ ಎಂದು ಹೇಳಿದರು.

ಸ್ಥಳ ಪರಿಶೀಲನೆ: ಜನತಾ ಸಮಾವೇಶ ನಡೆಯುವ ಸ್ಥಳಕ್ಕೆ  ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಪೂರ್ವಸಿದ್ಧತೆಗಳನ್ನು ಪರಿಶೀಲನೆ ನಡೆಸಿ, ಸ್ಥಳೀಯ ಮುಖಂಡರ ಜತೆ ಚರ್ಚೆ ನಡೆಸಿದರು.

ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ದೇವಾನಂದ ಚಹ್ವಾಣ, ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಮಾಡಗಿ, ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮುಖಂಡರಾದ ವೆಂಕಟರಾವ್ ನಾಡಗೌಡ, ಬಿ.ಡಿ.ಪಾಟೀಲ, ಅಪ್ಪುಗೌಡ ಪಾಟೀಲ, ಮಲ್ಲಿಕಾರ್ಜುನ ಯಂಡಿಗೇರಿ, ಸುನೀತಾ ಚವ್ಹಾಣ, ಹಣಮಂತ ಮಾವಿನಮರದ, ಅಪ್ಸರಾಬೇಗಂ ಛಪ್ಪರಬಂದ ಇದ್ದರು.

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಚೊಂಬು ಕೊಡಲಾಗಿದೆ ಎಂದು ಮುಖ್ಯಮಂತ್ರಿ ಟೀಕಿಸಿದ್ದಾರೆ. ಮುಂಬರುವ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ರಾಜ್ಯಕ್ಕೆ ಚೊಂಬು ಕೊಡ್ತಾರೋ ಅಕ್ಷಯ ಪಾತ್ರೆ ಕೊಡ್ತಾರೋ ನೊಡೋಣ?
ನಿಖಿಲ್ ಕುಮಾರಸ್ವಾಮಿ ಅಧ್ಯಕ್ಷ ಜೆಡಿಎಸ್‌ ಯುವ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.