ADVERTISEMENT

ಜೆಡಿಎಸ್ ಬೆಳ್ಳಿಹಬ್ಬ: ಜನತಾ ಸಮಾವೇಶ ಇಂದು

ಎಚ್.ಡಿ.ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ದಳಪತಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:58 IST
Last Updated 27 ಫೆಬ್ರುವರಿ 2026, 7:58 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ವಿಜಯಪುರ: ಜೆಡಿಎಸ್ ಸ್ಥಾಪನೆಯಾಗಿ 25 ವರ್ಷ ಪೂರ್ಣಗೊಂಡಿರುವ ನಿಮಿತ್ತ ಕಿತ್ತೂರು ಕರ್ನಾಟಕ ಭಾಗದಲ್ಲಿ ‘ಬೆಳ್ಳಿಹಬ್ಬ’ ಆಚರಿಸುವ ಸಲುವಾಗಿ ವಿಜಯಪುರ ನಗರದಲ್ಲಿ ಫೆ. 27ರಂದು ಬೆಳಿಗ್ಗೆ 11.30 ಬೃಹತ್ ಜನತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ನಗರದ ಹೊರವಲಯದಲ್ಲಿರುವ ಸಿಂದಗಿ ಬೈಪಾಸ್‌ನಲ್ಲಿ ಜೆಡಿಎಸ್‌ ಜನತಾ ಸಮಾವೇಶ ಆಯೋಜನೆ ಮಾಡಲಾಗಿದೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ ಸೇರಿದಂತೆ ಕಿತ್ತೂರು ಕರ್ನಾಟಕ ಭಾಗದ ಜಿಲ್ಲೆಗಳಿಂದ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಅಂದಾಜು ಸುಮಾರು ಒಂದು ಲಕ್ಷ ಜನ ಸೇರಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ರಜತ ಮಹೋತ್ಸವ, ಜನತಾ ಸಮಾವೇಶ ಹೆಸರಿನಲ್ಲಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಲು ಸಜ್ಜಾಗಿದೆ. 

ADVERTISEMENT

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ, ಯುವ ಜನತಾದಳ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ದೇವಾನಂದ ಚಹ್ವಾಣ, ಪಕ್ಷದ ಸಂಸದರು, ಮಾಜಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಜಿಲ್ಲಾ ಘಟಕದ ಅಧ್ಯಕ್ಷರು ಸೇರಿದಂತೆ ಕಿತ್ತೂರು ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಅಸಂಖ್ಯಾತ ಕಾರ್ಯಕರ್ತರು, ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು ಪಕ್ಷವನ್ನು ತಳಮಟ್ಟದಿಂದ ಬಲಿಷ್ಠಗೊಳಿಸುವುದು ಜನತಾ ಸಮಾವೇಶದ ಉದ್ದೇಶ
– ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಹಾಸನದಲ್ಲಿ ಯಶಸ್ವಿ ಜನತಾ ಸಮಾವೇಶದ ನಂತರ ಅದೇ ರೀತಿಯ ಬೃಹತ್ ಸಮಾವೇಶ ಶುಕ್ರವಾರ ವಿಜಯಪುರದಲ್ಲಿ ನಡೆಯುತ್ತಿದ್ದು ಜಿಲ್ಲೆಯ ಎಲ್ಲ ಮುಖಂಡರು ಕಾರ್ಯಕರ್ತರು ಭಾಗವಹಿಸಬೇಕು
– ದೇವಾನಂದ ಚವ್ಹಾಣ, ಮಾಜಿ ಶಾಸಕ ನಾಗಠಾಣ

ನಾಲ್ಕು ಕ್ಷೇತ್ರಗಳಿಗೆ ಜೆಡಿಎಸ್‌ ಆದ್ಯತೆ

‘ವಿಜಯಪುರ ಜಿಲ್ಲೆಯಲ್ಲಿ ಜೆಡಿಎಸ್‌ ಹೆಚ್ಚು ಪ್ರಬಲವಾಗಿದೆ. ಅದರಲ್ಲೂ ಪ್ರಮುಖವಾಗಿ ನಾಗಠಾಣ ದೇವರಹಿಪ್ಪರಗಿ ಬಸವನ ಬಾಗೇವಾಡಿ ಮತ್ತು ಇಂಡಿ ಕ್ಷೇತ್ರಗಳಲ್ಲಿ ನಮ್ಮ ಪಕ್ಷಕ್ಕೆ ಉತ್ತಮ ಅವಕಾಶವಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳ ಮೇಲೆ ಹೆಚ್ಚಿನ ಆದ್ಯತೆ ನೀಡಿ ನಮ್ಮ ಪಕ್ಷದ ಶಾಸಕರ ಆಯ್ಕೆಗೆ ಆದ್ಯತೆ ನೀಡಲಾಗುವುದು’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಜಯಪುರ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕೊಡುಗೆ ಅಪಾರವಾಗಿದೆ. ಜಿಲ್ಲೆಯ ಜನ ಮಾನಸದಲ್ಲೂ ದೇವೇಗೌಡರ ಬಗ್ಗೆ ಅಪಾರ ಅಭಿಮಾನವಿದೆ. ಈ ಹಿನ್ನೆಲೆಯಲ್ಲಿ ಅವರ ನಿರ್ದೇಶನದಂತೆ ವಿಜಯಪುರದಲ್ಲಿ ಜನತಾ ಸಮಾವೇಶ ಆಯೋಜಿಸಲಾಗಿದೆ’ ಎಂದು ನಿಖಿಲ್‌ ಹೇಳಿದರು.

‘ಹಾಸನದಲ್ಲಿ ಆಯೋಜಿಸಿದ್ದ ಜನತಾ ಸಮಾವೇಶ ಯಶಸ್ವಿಯಾದ ಬಳಿಕ ರಾಜ್ಯದ ಏಳೆಂಟು ಕಡೆ ಇದೇ ರೀತಿ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.

‘ರಾಜ್ಯ ಕಾಂಗ್ರೆಸ್‌ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸಿ 2028ಕ್ಕೆ ರಾಜ್ಯದಿಂದ ಕಾಂಗ್ರೆಸ್‌ ಅನ್ನು ಬುಡಸಮೇತ ಕಿತ್ತು ಹಾಕಿ ಬಿಜೆಪಿ–ಜೆಡಿಎಸ್‌ ಎನ್‌ಡಿಎ ಸರ್ಕಾರ ಸ್ಥಾಪಿಸಲು ಅಗತ್ಯ ತಯಾರಿ ನಡೆಸುವ ಸಂಬಂಧ ಸಮಾವೇಶ ಸಂಘಟಿಸಲಾಸಲಾಗುತ್ತಿದೆ’ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.