ADVERTISEMENT

ಮುದ್ದೇಬಿಹಾಳ: ₹ 30.14 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 3:54 IST
Last Updated 27 ಆಗಸ್ಟ್ 2025, 3:54 IST
ಫೋಟೋ:26-ಎಂ.ಬಿ.ಎಲ್‌01 ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ ಸಿಪಿಐ ಮೊಹ್ಮದ ಫಸಿಯುದ್ದೀನ,ಪಿಎಸ್‌ಐ ಸಂಜಯ ತಿಪರೆಡ್ಡಿ ಅವರಿಂದ ಜಿಲ್ಲಾ ನ್ಯಾಯಾಧೀಶರ ಮನೆ ಕಳ್ಳತನದ ಮಾಹಿತಿ ಪಡೆದುಕೊಂಡರು.
ಫೋಟೋ:26-ಎಂ.ಬಿ.ಎಲ್‌01 ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ ಸಿಪಿಐ ಮೊಹ್ಮದ ಫಸಿಯುದ್ದೀನ,ಪಿಎಸ್‌ಐ ಸಂಜಯ ತಿಪರೆಡ್ಡಿ ಅವರಿಂದ ಜಿಲ್ಲಾ ನ್ಯಾಯಾಧೀಶರ ಮನೆ ಕಳ್ಳತನದ ಮಾಹಿತಿ ಪಡೆದುಕೊಂಡರು.   

ಮುದ್ದೇಬಿಹಾಳ : ಪಟ್ಟಣದ ಹುಡ್ಕೋದ 14 ನೇ ಕ್ರಾಸ್ ನಲ್ಲಿರುವ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಚಿನ ಕೌಶಿಕ್ ಅವರ ಬಾಡಿಗೆ ಇದ್ದ ಮನೆಯಲ್ಲಿ ಕಳ್ಳರು ಭಾನುವಾರ ಹಾಗೂ ಸೋಮವಾರದ ಮಧ್ಯೆ ಕಳ್ಳತನ ಮಾಡಿದ್ದು ಒಟ್ಟು ₹ 30.14 ಲಕ್ಷ ಮೊತ್ತದ ಚಿನ್ನ, ಬೆಳ್ಳಿ ಆಭರಣ ಹಾಗೂ ಡೈಮಂಡ್ ಮತ್ತು ನಗದು ಕಳವು ಮಾಡಿದ್ದಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.

ಪಟ್ಟಣದ ಹುಡ್ಕೋದಲ್ಲಿರುವ ಜಿಲ್ಲಾ ನ್ಯಾಯಾಧೀಶರ ಮನೆಗೆ ಸೋಮವಾರ ಭೇಟಿ ನೀಡಿದ್ದ ಅವರು ಘಟನೆಯ ಕುರಿತು ನ್ಯಾಯಾಧೀಶರಿಂದ ಮಾಹಿತಿ ಪಡೆದುಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮನೆಯ ಬಾಗಿಲು ಮುರಿಯದೇ ಕೀ ಬಳಸಿ ಬಾಗಿಲು ತೆರೆದಿದ್ದು ಅಂದಾಜು ₹ 29.60 ಲಕ್ಷ ಮೌಲ್ಯದ ಚಿನ್ನಾಭರಣ, ಡೈಮಂಡ್‌ ಆಭರಣ, ₹4 500 ಮೊತ್ತದ  ಬೆಳ್ಳಿ ಗೆಜ್ಜೆ, ₹ 50 ಸಾವಿರ ನಗದು ಹಣ ಕಳ್ಳತನ ಮಾಡಿದ್ದಾರೆ ಎಂದು ನ್ಯಾಯಾಧೀಶರು ದೂರು ನೀಡಿದ್ದಾರೆ ಎಂದು ತಿಳಿಸಿದರು.

ಘಟನೆಯ ಕುರಿತು ಸಿಪಿಐ ಮೊಹ್ಮದ ಫಸಿಯುದ್ದೀನ ನೇತೃತ್ವದಲ್ಲಿ ಪಿಎಸ್‌ಐ ಸಂಜಯ ತಿಪರೆಡ್ಡಿ ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಪರಿಚಿತರಿಂದಲೇ ಕಳವು ಆಗಿರುವ ಶಂಕೆ ಇದ್ದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಮುದ್ದೇಬಿಹಾಳ ಪಟ್ಟಣದ ಆಯಕಟ್ಟಿನ ಜಾಗೆಯಲ್ಲಿ ಟ್ರಾಫಿಕ್ ಸಿಗ್ನಲ್ ಆರಂಭಿಸಲು ಹಾಗೂ ಅತ್ಯಾಧುನಿಕ ಕ್ಯಾಮೆರಾ ಅಳವಡಿಕೆಗೆ ಸರ್ಕಾರಕ್ಕೆ ಒಂದು ಕೋಟಿ ರೂಪಾಯಿ ಪ್ರಸ್ತಾವನೆಯನ್ನು ಪೊಲೀಸ್ ಇಲಾಖೆಯಿಂದ ಸಲ್ಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಈಗಿರುವ ಕ್ಯಾಮೆರಾಗಳಲ್ಲಿ ಹಗಲು ಹೊತ್ತಿನಲ್ಲಿ ವಾಹನಗಳ ನಂಬರ್ ಗುರುತು ಸಿಗುವುದಿಲ್ಲ. ಆದ್ದರಿಂದ ಟ್ರಾಫಿಕ್ ಸಿಗ್ನಲ್, ಜನರ ಮುಖಚರ್ಯೆ ಗುರುತಿಸುವ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲು ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಇಲ್ಲಿನ ಶಾಸಕರು ಶಾಸಕರ ವಿಶೇಷ ನಿಧಿಯಡಿ ಅನುದಾನ ಒದಗಿಸುವುದಾಗಿ ತಿಳಿಸಿದ್ದಾರೆ ಎಂದರು.

ಇಲ್ಲಿನ ಹುಡ್ಕೋದಲ್ಲಿ ಮನೆ ನಿರ್ಮಾಣಕ್ಕೆ ₹50 ಲಕ್ಷ  ವೆಚ್ಚ ಮಾಡಿದ್ದಾರೆ. ಆದರೆ ₹ 10 ಸಾವಿರ ಖರ್ಚು ಮಾಡಿ ಸಿಸಿಟಿವಿ ಹಾಕಿಸಿಕೊಳ್ಳಲು  ಸಾರ್ವಜನಿಕರು ಹಿಂದೇಟು ಹಾಕುತ್ತಾರೆ. ನಾಗರಿಕರು ಪೊಲೀಸರಿಗೆ ಸಹಕಾರ ಮಾಡಬೇಕು. ಇಂತಹ ಘಟನೆಗಳು ನಡೆದಾಗ ಕಳ್ಳರ ಗುರುತು ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮೆರಾ ಸಹಕಾರಿಯಾಗುತ್ತದೆ. ಒಬ್ಬರಿಗೆ ಕಷ್ಟವಾದರೆ 10-20 ಮನೆಗಳ ಮಾಲೀಕರು ಸೇರಿಕೊಂಡು ಸಿಸಿಟಿವಿ ಅಳವಡಿಸುವ ಕುರಿತು ಚಿಂತನೆ ನಡೆಸಬೇಕು ಎಂದು ಎಸ್ಪಿ ತಿಳಿಸಿದರು. ಸಿಪಿಐ ಮೊಹ್ಮದ ಫಸಿಯುದ್ದೀನ, ಪಿಎಸ್‌ಐ ಸಂಜಯ ತಿಪರೆಡ್ಡಿ , ಅಪರಾಧ ವಿಭಾಗದ ಪಿಎಸೈ ಆರ್.ಎಲ್.ಮನ್ನಾಭಾಯ ಇದ್ದರು.

ಕ್ಯಾಮೆರಾ ಅಳವಡಿಕೆಗೆ ಅನುದಾನ- ಭರವಸೆ

ಅಪರಾಧ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲು ಸಿಸಿಟಿವಿ ಕ್ಯಾಮೆರಾ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಶಾಸಕರ ವಿಶೇಷ ಅನುದಾನದಡಿ ಪೊಲೀಸ್ ಇಲಾಖೆಗೆ ಒಂದು ಕೋಟಿ ರೂ.ಅನುದಾನ ನೀಡುವುದಾಗಿ ಶಾಸಕ ಸಿ.ಎಸ್.ನಾಡಗೌಡ ಭರವಸೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲಾ ನ್ಯಾಯಾಧೀಶರ ಮನೆ ಕಳ್ಳತನ ಮಾಡಿದ  ಅಪರಾಧಿಗಳನ್ನು ತ್ವರಿತವಾಗಿ ಬಂಧಿಸುವಂತೆ ತಿಳಿಸಿದ್ದಾಗಿ ಶಾಸಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.