ವಿಜಯಪುರ: ಜಿಲ್ಲೆಯ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ (ಎನ್‌ಟಿಪಿಸಿ)ದಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದ ಆರೋಪದ ಮೇರೆಗೆ ಮಧ್ಯವರ್ತಿಯನ್ನು ಹೊಡೆದು ಕೊಲೆ ಮಾಡಿದ ಐವರನ್ನು ಮನಗೂಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಪಟ್ಟಣದ ರಾಮಗೊಂಡಪ್ಪ ಲೇಸಪ್ಪಗೋಳ(58) ಕೊಲೆಯಾದ ವ್ಯಕ್ತಿ.
ಪ್ರಕರಣದ ಸಂಬಂಧ ತಾಳಿಕೊಟೆ ತಾಲ್ಲೂಕಿನ ಪಡೆಕನೂರ ಗ್ರಾಮದ ಚಂದ್ರಕಾಂತ ಹಿರೇಗೌಡ, ಮುದ್ದೇಬಿಹಾಳ ತಾಲ್ಲೂಕಿನ ಮಡಿಕೇಶ್ವರ ಗ್ರಾಮದ ನೀಲಕಂಠರಾಯಗೌಡ ಟಕ್ಕಳಕಿ, ಗುಡದಿನ್ನಿ ಗ್ರಾಮದ ಅಮರೇಶ ನಾಡಗೌಡ, ವಿಜಯಪುರ ಸಾಯಿಪಾರ್ಕ್ ಮಹಿಬೂಬ ನಗರದ ನಿರ್ಮಲಾ ಹೊಸಮನಿ, ಪ್ರಮೀಳಾ ಚಲವಾದಿ, ವಿಜಯಪುರ ಜೈಲ್ ದರ್ಗಾ ನಿವಾಸಿ ಮಲ್ಲಮ್ಮ ಹಾದಿಮನಿ ಮತ್ತು ವಿಜಯಪುರ ಮಂಜುನಾಥ ನಗರದ ಮುತ್ತಪ್ಪ ಭೋವಿ ವಿರುದ್ಧ ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದರಲ್ಲಿ ಐವರನ್ನು ಬಂಧಿಸಲಾಗಿದೆ.
ಕೊಲೆಯಾದ ರಾಮಗೊಂಡಪ್ಪ ನಾಲ್ಕು ವರ್ಷಗಳ ಹಿಂದೆ ಆರೋಪಿಗಳಾದ ಚಂದ್ರಕಾಂತ ಹಿರೇಗೌಡ, ನೀಲಕಂಠರಾಯಗೌಡ ಟಕ್ಕಳಕಿ ಮತ್ತು ಅಮರೇಶ ನಾಡಗೌಡ ಅವರ ಮಕ್ಕಳಿಗೆ ನೌಕರಿ ಕೊಡಿಸುವುದಾಗಿ ಹೇಳಿ ತನಗೆ ಪರಿಚಯವಿದ್ದ ಕೊಲ್ಹಾರ ತಾಲ್ಲೂಕಿನ ತಳೆವಾಡದ ಧರ್ಮಣ್ಣ ಮಾದರ ಎಂಬಾತನಿಗೆ ತನ್ನ ಮಧ್ಯಸ್ಥಿಕೆಯಲ್ಲಿ ತಲಾ ₹6 ಲಕ್ಷ ಹಣ ಕೊಡಿಸಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಣ ಪಡೆದುಕೊಂಡಿದ್ದ ಧರ್ಮಣ್ಣ ಮಾದರ ನೌಕರಿ ಕೊಡಿಸದೇ ಮೋಸ ಮಾಡಿದ್ದುದ್ದರಿಂದ ಆರೋಪಿಗಳು ಮಧ್ಯಸ್ಥಿಕೆ ವಹಿಸಿದ್ದ ರಾಮಗೊಂಡಪ್ಪಗೆ ಹಣ ಕೊಡಿಸುವಂತೆ ಮನೆಗೆ ಬಂದು ಆಗಾಗ ಒತ್ತಾಯಿಸುತ್ತಿದ್ದು, ಜೀವ ಬೆದಿಕೆ ಹಾಕಿದ್ದರು ಎಂದು ದೂರಲಾಗಿದೆ.
ಇದೇ ವಿಷಯವಾಗಿ ಬುಧವಾರ ಆರೋಪಿಗಳು ರಾಮಗೊಂಡಪ್ಪನ ಮನೆಗೆ ಬಂದು ಹಣ ಕೊಡಿಸುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆದಿದೆ. ಆರೋಪಿಗಳು ಕೈಯಿಂದ ಎದೆಗೆ, ಕುತ್ತಿಗೆಗೆ ಹೊಡೆದ ಪರಿಣಾಮ ರಾಮಗೊಂಡಪ್ಪ ಸಾವಿಗೀಡಾಗಿದ್ದಾರೆ ಎಂದು ಅವರ ಪತ್ನಿ ಮೀನಾಕ್ಷಿ ದೂರಿನಲ್ಲಿ ತಿಳಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.