
ವಿಜಯಪುರ: ‘ಕಂದಗಲ್ ಹನುಮಂತರಾಯ ಕರ್ನಾಟಕದ ಷೇಕ್ಸ್‌ಪಿಯರ್ ಎನಿಸಿಕೊಂಡಿದ್ದರು. ಅವರು ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳನ್ನು ಬರೆದು ಅಭಿನಯಿಸಿದ್ದಾರೆ. ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಧಾರವಾಡ ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಜರುಗಿದ ‘ಕಂದಗಲ್ಲರಿಗೆ ನಮಸ್ಕಾರ’ ಅರ್ಥಾತ್ ‘ಕಂದಗಲ್ ಭಾರತ’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
‘ಕುಟುಂಬ ಸಮೇತ ನೋಡುವ ನಾಟಕಗಳ ಅವಶ್ಯಕತೆಯಿದೆ. ಅಶ್ಲೀಲ ಮಾತುಗಳ ನಾಟಕಗಳು ಸಾಮಾಜಿಕ ವ್ಯವಸ್ಥೆಗೆ ಕಂಟಕವಾಗಿವೆ’ ಎಂದರು.
ಕಾಂಗ್ರೆಸ್ ಮುಖಂಡ ಶ್ರೀದೇವಿ ಉತ್ಲಾಸರ ಮಾತನಾಡಿ, ‘ಕಂದಗಲ್ ಹನುಮಂತರಾಯರ ರಕ್ತರಾತ್ರಿ ಐತಿಹಾಸಿಕ ನಾಟಕಗಳ ಮೂಲಕ ಕನ್ನಡ ರಂಗಭೂಮಿಗೆ ಅಪಾರವಾದ ಕೊಡುಗೆ ನೀಡಿದರು. ಇಂದಿನ ಸಮಾಜದ ವಾಸ್ತವಿಕ ಪ್ರಜ್ಞೆಯನ್ನು ಮೂಡಿಸುವ ನಾಟಕಗಳು ಅತ್ಯವಶ್ಯಕ’ ಎಂದರು.
ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ತರ ಮಾತನಾಡಿ, ‘ಕಿತ್ತೂರ ರಾಣಿ ಚನ್ನಮ್ಮ ನಾಟಕ ಬರೆದು ಪ್ರದರ್ಶಿಸಿದ ಕೀರ್ತಿ ಕಂದಗಲ್ ಹನುಮಂತರಾಯ ಅವರಿಗೆ ಸಲ್ಲುತ್ತದೆ. ಅದ್ಭುತ ಕಲಾವಿದರಾಗಿ ಕನ್ನಡ ನಾಡಿನ ರಂಗಭೂಮಿಗೆ ಗೌರವ ತಂದವರು. ಐತಿಹಾಸಿಕ ಪಾತ್ರ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು’ ಎಂದರು.
ರಂಗಾಯಣ ನಿರ್ದೇಶಕಿ ಶಶಿಕಲಾ ಹುಡೇದ, ಶರಣ ಚಿಂತಕಿ ಶಶಿಕಲಾ ಇಜೇರಿ, ಲಲಿತಕಲಾ ಅಕಾಡೆಮಿ ಸದಸ್ಯೆ ರಾಜಶ್ರೀ ಮೋಪಗಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದಾಕ್ಷಾಯಿಣಿ ಹುಡೇದ, ವಿಶ್ರಾಂತ ಅಧಿಕಾರಿ ಭಾಗೀರಥಿ ಸಿಂಧೆ, ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಶಶಿಕಲಾ ನಾಯ್ಕೊಡಿ, ಮಮತಾ ಮುಳಸಾವಳಗಿ, ಎಂ.ಬಿ.ಕಟ್ಟಿಮನಿ, ಡಾ ಶೈಲಾ ಬಳಗಾನೂರ, ರಶ್ಮೀ ಬದ್ನೂರ ಹಾಗೂ ಮಂಜೂಳಾ ಕಾಳಗಿ ಇದ್ದರು.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.