ವಿಜಯಪುರ: ಕನೇರಿ ಸ್ವಾಮೀಜಿಗಳು ಕಾರ್ಯಕ್ರಮವೊಂದರಲ್ಲಿ ಅನೌಪಚಾರಿಕವಾಗಿ ತಮ್ಮ ಗ್ರಾಮೀಣ ಸೊಗಡಿನ ಭಾಷೆಯಲ್ಲಿ ಮಾತನಾಡಿದ್ದನ್ನು ವಿರೋಧಿಸಿ ಅವರನ್ನು ವಿಜಯಪುರ ಜಿಲ್ಲೆಯೊಳಗೆ ಬರದಂತೆ ನಿಷೇಧ ಹೇರುವ ಮೂಲಕ ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗೃತ ವೇದಿಕೆಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಹಿಂದೂ ಜಾಗೃತ ವೇದಿಕೆ ಸಂಚಾಲಕ ವಿಜಯಕುಮಾರ ಕುಡಿಗನೂರ, ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತೆ, ಹಿಂದೂ ಧರ್ಮ ಆಚರಣೆ, ಸಾಂಪ್ರದಾಯ, ಈ ನಾಡಿನ ಹಿರಿಮೆ, ಗರಿಮೆಗಳನ್ನು ವಾಚಾಮಗೋಚರವಾಗಿ ಬೈಯುವವರಿಗೆ ಸರ್ಕಾರವೇ ರಕ್ಷಣೆ ನೀಡುವುದು ಸಮಾಜಘಾತಕ ದೇಶದ್ರೋಹಿ ವ್ಯಕ್ತಿ ಮತ್ತು ಸಂಘಟನೆಗಳ ಮೇಲೆ ಏನು ಕ್ರಮ ಕೈಗೊಳ್ಳದೆ ಅವರಿಗೆ ಎಲ್ಲ ರೀತಿಯಿಂದ ರಕ್ಷಣೆ ನೀಡುವ ಮೂಲಕ ಆಳುವ ಸರ್ಕಾರ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಅಂಜಿ ನಡೆಯುತ್ತಿದೆ ಎಂದು ಆರೋಪಿಸಿದರು.
ಕನೇರಿ ಶ್ರೀಗಳು ಮಹಾನ್ ರಾಷ್ಟ್ರಸಂತರು, ಅವರು ಕಾಯಕಯೋಗಿಗಳು, ರಾಷ್ಟ್ರಹಿತ, ಧರ್ಮ ಬದ್ಧತೆ ಮತ್ತು ಸಮಾಜದ ಕುರಿತಾಗಿ ಸದಾ ಕ್ರಿಯಾಶೀಲರಾಗಿ ಕಾರ್ಯಮಗ್ನರಾದವರು, ಅಂತಹ ಪೂಜ್ಯರನ್ನು ವಿಜಯಪುರ ಜಿಲ್ಲೆಯಲ್ಲಿ ಬರದಂತೆ ತಡೆಯಲು ಯಾವುದೇ ಸೂಕ್ತ ಕಾರಣವಿಲ್ಲದೆ ಅವರ ಬಗ್ಗೆ ದ್ವೇಷದ ಭಾವನೆಯಿಂದ ಪೂರ್ವಗ್ರಹ ಪೀಡಿತರಾಗಿ ವಿವೇಚನಾರಹಿತವಾಗಿ ಹೊರಡಿಸಿದ ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು, ಇಲ್ಲವಾದಲ್ಲಿ ಮುಂದೆ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹೋರಾಟದಲ್ಲಿ ಶಿವಲಿಂಗ ಸ್ವಾಮೀಜಿ, ಯೋಗೇಶ್ವರಿ ಮಾತಾಜಿ, ಸೋಮಲಿಂಗ ಸ್ವಾಮೀಜಿ, ಮಾಜಿ ಸಚಿವ ಅಪ್ಪಸಾಹೇಬ ಪಟ್ಟಣಶೆಟ್ಟಿ, ಸೋಮನಗೌಡ ಪಾಟೀಲ್, ಎ. ಎಸ್. ಪಾಟೀಲ ನಡಹಳ್ಳಿ, ಎಸ್. ಕೆ. ಬೆಳ್ಳುಬ್ಬಿ, ವಿಜುಗೌಡ ಪಾಟೀಲ, ಚಂದ್ರಶೇಖರ ಕೌಟಗಿ, ರಮೇಶ್ ಬಿದನೂರ, ಶ್ರೀಹರ್ಷಗೌಡ ಪಾಟೀಲ್, ಚಿದಾನಂದ ಚಲವಾದಿ, ವಿಶ್ವ ಹಿಂದೂ ಪರಿಷತ್ತಿನ ಉತ್ತರ ಪ್ರಾಂತ ಪ್ರಮುಖ ಸುನೀಲ್ ಭೈರವಾಡಗಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.