
ಸೊಲ್ಲಾಪುರ: ಕಾವೇರಿಯಿಂದ ಗೋದಾವರಿವರೆಗೆ ವಿಸ್ತರಿಸಿದ್ದ ಕನ್ನಡನಾಡು ಭಾಷಾವಾರು ಪ್ರಾಂತಗಳ ರಚನೆಯೊಂದಿಗೆ ವಿಭಜನೆಯಾದರೂ, ಇಂದಿಗೂ ಮಹಾರಾಷ್ಟ್ರದ ಸೊಲ್ಲಾಪುರ ಭಾಗದಲ್ಲಿ ಕನ್ನಡ ಸಂಸ್ಕೃತಿ ಜೀವಂತವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಮಂಡಳಿ ಸದಸ್ಯ ಚೆನ್ನಪ್ಪ ಅಂಗಡಿ ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ‘ಸೋಲಾಪುರ ಪ್ರದೇಶದ ಕನ್ನಡ ಸಾಹಿತ್ಯ’ ವಿಷಯ ಕುರಿತು ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಹಿತ್ಯ ಬರವಣಿಗೆ ಉತ್ತೇಜಿಸಲು ಹಾಗೂ ಪ್ರೋತ್ಸಾಹಿಸಲು ಅಕಾಡೆಮಿ ವಿಚಾರ ಸಂಕಿರಣಗಳ ಆಯೋಜನೆ, ಪ್ರಶಸ್ತಿ ಪ್ರದಾನ, ಪುಸ್ತಕ ಪ್ರಕಟಣೆ ಸೇರಿದಂತೆ ಹಲವು ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದರು.
ಸ್ಥಳೀಯವಾಗಿ ಕನ್ನಡ ಪುಸ್ತಕ ಪ್ರಕಟಣೆ, ಸಾಹಿತ್ಯ ಸಂವಾದಗಳು ಹಾಗೂ ಕನ್ನಡ ಪತ್ರಿಕೆಗಳ ಚಟುವಟಿಕೆಗಳು ಹೆಚ್ಚಾಗಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಿದ್ಧರಾಮೇಶ್ವರ ವಚನಗಳಲ್ಲಿ ಪ್ರಾದೇಶಿಕತೆ ಕುರಿತು ಭೀಮಾಶಂಕರ ಬಿರಾಜದಾರ, ಬಹುಭಾಷಾ ಬರಹಗಾರನ ಒಳನೋಟ ಕುರಿತು ಸುಮಿತ ಮೇತ್ರಿ ಹಾಗೂ ಸೋಲಾಪುರ ಪ್ರದೇಶದ ಆಧುನಿಕ ಕನ್ನಡ ಬರಹಗಾರರ ಸಾಧನೆಗಳ ಕುರಿತು ಗೀತಾ ಡಿಗ್ಗೆ ಅವರು ಪ್ರಬಂಧ ಮಂಡಿಸಿದರು.
ಹಿರಿಯ ಸಾಹಿತಿ ಬಿ.ಬಿ. ಪೂಜಾರಿ, ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಕಾವೇರಿಸ್ವಾಮಿ, ರಾಜೇಶ್ವರಿ ಲೋಕಪುರ, ಸಾಗರ್ ಕಾಟಗಾವ, ಖಂಡಾಳ, ಯಾದವಾಡ, ಜವಳಿಗಿ, ಮಲ್ಲಿಕಾರ್ಜುನ ಪಾಟೀಲ, ಶಿವಾನಂದ ಬಳ್ಳೊಳ್ಳಿ, ಶಿವಾನಂದ ಸೋಲಾಪುರ, ಮೀನಾಕ್ಷಿ ಕೊಳ್ಳಿ, ನಿಕಿತಾ ಬಾಸ್ಕೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.