ADVERTISEMENT

ಕನ್ನಡಕ್ಕೆ 2 ಸಾವಿರ ವರ್ಷಗಳ ಇತಿಹಾಸ: ಶಂಕರಗೌಡ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 5:26 IST
Last Updated 22 ನವೆಂಬರ್ 2025, 5:26 IST
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿದರು 
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿದರು    

ವಿಜಯಪುರ: ‘ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ದೀರ್ಘ ಮತ್ತು ಶ್ರೀಮಂತ ಇತಿಹಾಸವಿದ್ದು, ಪಂಪನಿಂದ ಬಾನು ಮುಷ್ತಾಕ್‌ವರೆಗೆ ಅನೇಕ ಸಾಹಿತಿಗಳು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಮಹಿಳಾ ವಿ.ವಿ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಲಸಚಿವರು ವಿದ್ಯಾರ್ಥಿನಿಯರಿಗಾಗಿ ‘ಕನ್ನಡ ಮತ್ತು ಕರ್ನಾಟಕ’ ಕುರಿತ ರಸಪ್ರಶ್ನೆ ಸ್ಪರ್ಧೆ ನಡೆಸಿದರು.

ADVERTISEMENT

ಮೌಲ್ಯಮಾಪನ ಕುಲಸಚಿವ ಪ್ರೊ.ಬಸವರಾಜ ಎಲ್. ಲಕ್ಕಣ್ಣವರ ಮಾತನಾಡಿ, ‘ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗರೂ ಕನ್ನಡದಲ್ಲಿ ಮಾತನಾಡುವುದು, ಕನ್ನಡದಲ್ಲಿ ಬರೆಯುವುದು ಮತ್ತು ಕನ್ನಡ ಗ್ರಂಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಓದುವ ಅಭ್ಯಾಸ ರೂಢಿಸಿಕೊಂಡಾಗ ಮಾತ್ರ ನಾಡು–ನುಡಿ–ಭಾಷೆ ನಿಜವಾಗಿಯೂ ಬೆಳೆಯಲು ಸಾಧ್ಯ’ ಎಂದು ಹೇಳಿದರು.

ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ನಾರಾಯಣ ಬಿ. ಪವಾರ ಮಾತನಾಡಿ, ಹಳೆಗನ್ನಡದ ಹಲವು ಪದ್ಯಗಳನ್ನು ಉದಾಹರಣೆಯಾಗಿ ವಾಚಿಸಿ, ವಿವಿಧ ಕಾಲಘಟ್ಟಗಳ ಕವಿಗಳು ಮತ್ತು ಕೃತಿಗಳನ್ನು ಪರಿಚಯಿಸುವ ಮೂಲಕ ಸಂಪೂರ್ಣ ಕನ್ನಡ ಸಾಹಿತ್ಯದ ಅವಲೋಕನದ ಬಗ್ಗೆ ಹೇಳಿದರು.

ಸ್ನಾತಕ ವಿಭಾಗದ ವಿಶೇಷಾಧಿಕಾರಿ ಪ್ರೊ.ಸಕ್ಪಾಲ ಹೂವಣ್ಣ ಮಾತನಾಡಿ, ಕನ್ನಡವನ್ನು ಕೇವಲ ವಿಷಯವಷ್ಟೆ ಎಂದುಕೊಳ್ಳದೆ ಉಸಿರಿನಂತೆ ಬದುಕಿನಲ್ಲಿ ಬಳಸಿದಾಗ ಮಾತ್ರ ನಮ್ಮ ಕನ್ನಡ ಭಾಷೆ ಉಳಿದು ಬೆಳೆಯುತ್ತದೆ ಎಂದು ಹೇಳಿದರು.

ರಾಜ್ಯೋತ್ಸವದ ಅಂಗವಾಗಿ ವಿಭಾಗದ ವಿದ್ಯಾರ್ಥಿನಿಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಾದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನಗಳನ್ನು ವಿತರಿಸಲಾಯಿತು. ಜೊತೆಗೆ 19ನೇ ಅಂತರ್ ಮಹಿಳಾ ಮಹಾವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ವಿಭಾಗದ ಉಪನ್ಯಾಸಕ ಡಾ. ಚಲುವರಾಜು, ಡಾ.ವಿದ್ಯಾ ಪಾಟನಕರ, ಡಾ.ರೂಪಾ ಇಂಗಳೆ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.