ADVERTISEMENT

ಸರ್ಕಾರ ಜಮೀನು ಖರೀದಿಸಿ ನಿರಾಶ್ರಿತರಿಗೆ ಮನೆ ಕಟ್ಟಿಸಲಿ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:41 IST
Last Updated 17 ಸೆಪ್ಟೆಂಬರ್ 2025, 5:41 IST
ಸಿಂದಗಿ ಪಟ್ಟಣದ 842/2*2 ರಲ್ಲಿನ 84 ಕುಟುಂಬಗಳ ಮನೆಗಳು ತೆರುವುಗೊಂಡ ಸ್ಥಳಕ್ಕೆ ಮಂಗಳವಾರ ವಿಧಾನಪರಿಷತ್ ವಿರೋದಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿ ನಿರಾಶ್ರಿತರಿಗೆ ಸಾಂತ್ವನ ಹೇಳಿದರು.
ಸಿಂದಗಿ ಪಟ್ಟಣದ 842/2*2 ರಲ್ಲಿನ 84 ಕುಟುಂಬಗಳ ಮನೆಗಳು ತೆರುವುಗೊಂಡ ಸ್ಥಳಕ್ಕೆ ಮಂಗಳವಾರ ವಿಧಾನಪರಿಷತ್ ವಿರೋದಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿ ನಿರಾಶ್ರಿತರಿಗೆ ಸಾಂತ್ವನ ಹೇಳಿದರು.   

ಸಿಂದಗಿ: ಪಟ್ಟಣದ 842/2*2 ರಲ್ಲಿನ 84 ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಮಾಡಿದ ತಪ್ಪಿಗಾಗಿ ನಿರಾಶ್ರಿತರಿಗೆ ಸರ್ಕಾರ ಜಮೀನು ಖರೀದಿಸಿ ಅವರಿಗೆ ಮನೆಗಳನ್ನು ಕಟ್ಟಿಸಿಕೊಡಬೇಕು. ಈ ಕುರಿತು ಕೂಡಲೇ ನಾನು ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಭೇಟಿಯಾಗುವೆ ಎಂದು ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ನಿರಾಶ್ರಿತರು ಧರಣಿ ನಡೆಸಿದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

ಕೋರ್ಟ್‌ಗೆ ಸುಳ್ಳು ದಾಖಲೆ ಕೊಟ್ಟ ವ್ಯಕ್ತಿ ಜೈಲಿಗೆ ಹೋಗಬೇಕು. ಬಡವರು ನಿರಾಶ್ರಿತರಾಗಲು ತಪ್ಪು ಮಾಡಿದ ಸರ್ಕಾರ ಸುಳ್ಳು ದಾಖಲೆ ಸೃಷ್ಟಿಸಿರುವ ಕುರಿತು ಕೋರ್ಟ್‌ಗೆ ಹೋಗಬೇಕು. ನಾವು ಕೂಡ ಆ ವ್ಯಕ್ತಿಯ ವಿರುದ್ದ ಕೋರ್ಟ್‌ಗೆ ಹೋಗಲಾಗುತ್ತದೆ ಎಂದರು.

ADVERTISEMENT

ಈ ಪ್ರಕರಣದಲ್ಲಿ ಸ್ಥಳೀಯ ಶಾಸಕರ ಕುಮ್ಮಕ್ಕು ಇದೆ. ಹಣ ಕೊಡಿ ಸರಿ ಮಾಡುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದರಿಂದ ಬಡ ಕುಟುಂಬಗಳು ₹75 ಲಕ್ಷ ರೂಪಾಯಿ ಜಾಗದ ಮಾಲೀಕನಿಗೆ ಕೊಡಲು ಸಂಗ್ರಹಿಸಿದ್ದರು. ಆದರೂ ಕೊನೆಯ ಗಳಿಗೆಯಲ್ಲಿ ಬಡಕುಟುಂಬದ ಕೈ ಬಿಟ್ಟಿದ್ದಾರೆ. ‘ನೀ ಸತ್ತಂಗ ಮಾಡು ನಾ ಅತ್ತಂಗ ಮಾಡುತ್ತೇನೆ’ ಎಂಬ ಧೋರಣೆ ಅವರು ಅನುಸರಿಸಿದ್ದಾರೆ ಎಂದು ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು.

ಪುರಸಭೆ ಅಧಿಕಾರಿಗಳು ಕೇವಲ 13 ದಿನಗಳಲ್ಲಿ ಮೂರು ನೋಟೀಸ್‌ ಕೊಟ್ಟಿದ್ದಾರೆ. ಇಷ್ಟೊಂದು ತರಾತುರಿಗೆ ಹಿನ್ನೆಲೆ ರಾಜಕೀಯ ಒತ್ತಡ ಎಂಬುದು ಗೊತ್ತಾಗುತ್ತದೆ. ಜನಪ್ರತಿನಿಧಿಗಳು ಮಾಡುವ ಕೆಲಸಾನಾ... ಇದು ನಂಬಿಕೆ ಇಟ್ಟ ಬಡ ಕುಟುಂಬಕ್ಕೆ ಕೈ ಕೊಡುವುದು ಸರಿಯಲ್ಲ. ಮನಗೂಳಿ ಸಂಸ್ಕೃತಿ ಭೂಕಬಳಿಕೆಯಾಗಿದೆ ಎಂದು ಗಂಭೀರ ಆರೋಪ ಮಾಡಿ ಬಡಜನತೆಯ ಮೇಲೆ ರಾಜಕೀಯ ಅಟ್ಟಹಾಸ ಮೆರೆದಿದ್ದಾರೆ. ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಸಿದುಕೊಳ್ಳುವುದು ಕಾಂಗ್ರೆಸ್ ನೀತಿಯಾಗಿದೆ ಎಂದು ಟೀಕಿಸಿದರು.

ಶಾಸಕರ ಪತ್ರಿಕಾಗೋಷ್ಠಿಯಲ್ಲಿ ಇಂಡಿ ಉಪವಿಭಾಗಾಧಿಕಾರಿ ಹಾಜರಿರುವುದು ಗಮನಿಸಿದರೆ ಇವರು ಕಾಂಗ್ರೆಸ್ ಪಕ್ಷ ಸೇರಿದ್ದಾರಾ...? ಎಂದು ಪ್ರಶ್ನಿಸಿ ಅಧಿಕಾರಿ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವುದು ಕಾನೂನುಬಾಹಿರ ಕೂಡಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ನಾರಾಯಣಸ್ವಾಮಿ ಆಗ್ರಹಿಸಿದರು.

ಶಾಸಕ ಅಶೋಕ ಮನಗೂಳಿ ನನಗೆ ಹಾಕಿದ ಸವಾಲಿನಂತೆ ಒಂದು ತಿಂಗಳೊಳಗಾಗಿ ತಮ್ಮ ವಿರುದ್ದ ಮಾಡಿದ ಭೂವಿವಾದ ದಾಖಲೆಗಳನ್ನು ಪ್ರದರ್ಶಿಸುತ್ತೇನೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಸ್ಪಷ್ಟನೆ ನೀಡಿದರು.

ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ, ಬಿಜೆಪಿ ಪ್ರಮುಖ ಉಮೇಶ ಕಾರಜೋಳ ಇದ್ದರು.

‘ಸುಳ್ಳು ದಾಖಲೆ ಸೃಷ್ಟಿ’

ಖರಾಬ ಜಮೀನು ಪೂರ್ಣ ಜಮೀನು ಖರೀದಿಸಿದವರಿಗೆ ಸೇರುತ್ತದೆ ಎಂಬುದು ಕಾನೂನು. ಪುರಸಭೆ ಜಮೀನಿನ ಖರಾಬ ಜಾಗೆ ಅದು. ಆದರೆ ಸೈಫನ್ ಸಾಬ ಕರ್ಜಗಿ ಅವರು ಅಧಿಕಾರಿಗಳ ಸಹಕಾರದಿಂದ ಸುಳ್ಳು ದಾಖಲೆ ಸೃಷ್ಟಿಸಿ ಕೋರ್ಟ್ ಗೆ ದಾಖಲೆ ನೀಡಲಾಗಿದೆ. ಅಲ್ಲದೇ ಈ ಪ್ರಕರಣ ಕೋರ್ಟ್ ನಲ್ಲಿ ಎಕ್ಸ್ ಪಾರ್ಟಿ ಆಗುತ್ತಲೇ ಬಂದಿದೆ. ಇದಕ್ಕೆ ಪುರಸಭೆ ಸಂಪೂರ್ಣ ಹೊಣೆ. ತೆರುವುಗೊಂಡ ಜಮೀನನ್ನೆ ಖರಾಬ ಜಮೀನು ಅಂತಾ ಹೇಗೆ ಹೇಳಲಾಗುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ಗೋಬ್ಯಾಕ್ ನಾರಾಯಣಸ್ವಾಮಿ ಘೋಷಣೆ

ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಅವರು ಗೋಬ್ಯಾಕ್ ನಾರಾಯಣಸ್ವಾಮಿ ಎಂದು ಘೋಷಣೆ ಕೂಗಿದರು. ಅವರ ಬೆಂಬಲಿಗರು ನಾರಾಯಣಸ್ವಾಮಿ ಚಿತ್ರದ ಮೇಲೆ ಕೆಂಪುಬಣ್ಣದ ಗೆರೆಗಳನ್ನು ಹಾಕಿದ ಚಿತ್ರವುಳ್ಳ ಫಲಕಗಳನ್ನು ಹಿಡಿದು ಪ್ರತಿಭಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.