ಬಸವನಬಾಗೇವಾಡಿ: ‘ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಹೆಸರಿಗಷ್ಟೇ ಮುಖ್ಯಮಂತ್ರಿ. ಆದರೆ ರಾಜ್ಯಾಡಳಿತ ನಡೆಸಲು ಕೇಂದ್ರದ ನಾಯಕ ಸುರ್ಜೆವಾಲಾ ಅವರಿಗೆ ರಾಜ್ಯ ನಾಯಕರು ಎಸ್.ಪಿ.ಎ (ಸ್ಪೇಶಲ್ ಪವರ್ ಆಫ್ ಅಟಾರ್ನಿ) ಕೊಟ್ಟಿದ್ದಾರೆ. ಶಾಸಕರು ಅನುದಾನ ಕೇಳಲು ಸುರ್ಜೆವಾಲಾ ಅವರ ಬಳಿ ಹೋಗಬೇಕು ಎನುತ್ತಿದ್ದಾರೆ. ಇದು ಮುಖ್ಯಮಂತ್ರಿ ಹುದ್ದೆಗೆ ಮಾಡುತ್ತಿರುವ ಅಪಮಾನ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
ಪಟ್ಟಣದ ಬಸವನಭವನದಲ್ಲಿ ಬುಧವಾರ ಜರುಗಿದ ಜನರೊಂದಿಗೆ ಜನತಾದಳ, ಡಿಜಿಟಲ್ ಸದಸ್ಯತ್ವ ನೋಂದಣಿ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘2004ರಲ್ಲಿ ಜೆಡಿಎಸ್ ಪಕ್ಷದಲ್ಲಿದ್ದುಕೊಂಡು ಉಂಡು, ಬೆಳೆದು ಸ್ವಾರ್ಥಕ್ಕಾಗಿ ಬೇರೆ ರಾಜಕೀಯ ಪಕ್ಷಗಳಿಗೆ ಹೋಗಿ ಮಂತ್ರಿ, ಮುಖ್ಯಮಂತ್ರಿಗಳಾಗಿದ್ದಾರೆ. ಕುಮಾರಸ್ವಾಮಿ ಅವರ ಬಗ್ಗೆ ಕಾಂಗ್ರೇಸ್ ನಾಯಕರಿಗೆ ಒಳಗೊಳಗೆ ಭಯ ಇದೆ. ವಿಧಾನಸಭೆಯಲ್ಲಿ ಸಿಎಂ, ಡಿಸಿಎಂ ಆದಿಯಾಗಿ ಎಷ್ಟೇ ಶಾಸಕರಿದ್ದರೂ ಜನರ ಪರವಾಗಿ ತೊಡೆ ತಟ್ಟಿ ಪ್ರಶ್ನಿಸುವ ಎದೆಗಾರಿಕೆ, ನೈತಿಕತೆ ಇರುವ ಏಕೈಕ ನಾಯಕ ಕುಮಾರಸ್ವಾಮಿ ಅವರು. ದುರಾಡಳಿತ, ಪಂಚಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸಲು ಜನ ಕಾಯುತ್ತಿದ್ದಾರೆ’ ಎಂದರು.
‘2028ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದ ನಿಶ್ಚಿತ. ಬಸವನಬಾಗೇವಾಡಿಯಲ್ಲಿ ರಾಜಕಾರಣ, ಜನಸೇವೆ ಅಪ್ಪುಗೌಡರಿಗೆ ಮನೆತನದಿಂದಲೇ ಬಂದಿದೆ. ನಾಲ್ಕು ಬಾರಿ ಸೋತರು ಇಂದಿಗೂ ಸದಾ ಜನರೊಂದಿಗೆ ಬೆರೆತು ಜನಸೇವೆ ಮಾಡುತ್ತಿದ್ದಾರೆ. ಇಂತಹ ನಾಯಕರಿಗೆ ಜನ ಆಶೀರ್ವದಿಸಬೇಕು. ಕೇಂದ್ರಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ ಹಾಗೂ ಬಸವನಬಾಗೇವಾಡಿಗೆ ಅಪ್ಪುಗೌಡರು ಅಧಿಕಾರಕ್ಕೆ ಬರುವ ಕಾಲ ಸನ್ನಿಹಿತವಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ ಮನಗೂಳಿ ಮಾತನಾಡಿ, ‘ನಾನು ಚುನಾವಣೆಯಲ್ಲಿ ಗೆದ್ದರೆ ತಂದೆ ಬಿ.ಎಸ್.ಪಾಟೀಲರಂತೆ ಶಾಶ್ವತವಾಗಿ ನೆಲೆಯೂರುತ್ತೇನೆ ಎಂಬ ಭಯದಲ್ಲಿ ಮೋಸದಿಂದ ನನ್ನನ್ನು ಸೋಲಿಸಲಾಗಿದೆ. ಎಲ್ಲರೂ ಒಗ್ಗೂಡಿ ಬಸವ ಭೂಮಿಯಲ್ಲಿ ಜೆಡಿಎಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ’ ಎಂದು ಕರೆ ನೀಡಿದರು.
ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಹನಮಂತಪ್ಪ ಆಲ್ಕೋಡ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ್, ಜಿ.ಪಂ ಮಾಜಿ ಸದಸ್ಯೆ ಅಪ್ಸರಾಬೇಗಂ ಚಪ್ಪರಬಂದ್ ಮಾತನಾಡಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾವೇಶಕ್ಕೂ ಮೊದಲು ಯುವ ನಾಯಕ ನಿಖಿಲ ಕುಮಾರಸ್ವಾಮಿ ಅವರನ್ನು ಬೈಕ್ ರ‍್ಯಾಲಿ ಮೂಲಕ ವೇದಿಕೆಗೆ ಕರೆ ತರಲಾಯಿತು. ಐತಿಹಾಸಿಕ ಮೂಲ ನಂದೀಶ್ಚರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಜೆಡಿಎಸ್ ಮಹಿಳಾ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಮಾಡಗಿ, ಬಾಲರಾಜ್ ಗುತ್ತೇದಾರ, ಮುಖಂಡರಾದ ಸಿ.ವಿ. ಚಂದ್ರಶೇಖರ್, ಅಂಬೋಜಿ ಪವಾರ್, ಗುರುರಾಜ ಹುಣಸಿಮರದ, ಸುನೀತಾ ಚವ್ಹಾಣ, ಶಾಂತಾಬಾಯಿ ಲಮಾಣಿ, ಬಸಯ್ಯ ಸಾಲಿಮಠ, ಬಾಬು ಬೆಲ್ಲದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.