ADVERTISEMENT

‘ಕಾಯಕ ಮಾಡದ ಕೈಲಾಸವೂ ಶೂನ್ಯ’

​ಪ್ರಜಾವಾಣಿ ವಾರ್ತೆ
Published 2 ಮೇ 2019, 15:44 IST
Last Updated 2 ಮೇ 2019, 15:44 IST
ವಿಜಯಪುರದ ಕೆಇಬಿ ಸಮುದಾಯ ಭವನದಲ್ಲಿ ಈಚೆಗೆ ಸಮಾನ ಮನಸ್ಕರ ಸೇವಾ ಸಂಸ್ಥೆಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು
ವಿಜಯಪುರದ ಕೆಇಬಿ ಸಮುದಾಯ ಭವನದಲ್ಲಿ ಈಚೆಗೆ ಸಮಾನ ಮನಸ್ಕರ ಸೇವಾ ಸಂಸ್ಥೆಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು   

ವಿಜಯಪುರ: ‘ಸಮಾಜಕ್ಕಾಗಿ ಬೆಳಕು ನೀಡುವವರು ಸದಾ ಎಚ್ಚರವಾಗಿರಬೇಕು. ಕಂದಕ ನಿರ್ಮಾಣ ಮಾಡುವವರು ಮಲಗಬೇಕು’ ಎಂದು ಅಥಣಿ–ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.

ನಗರದ ಕೆಇಬಿ ಸಮುದಾಯ ಭವನದಲ್ಲಿ ಸಮಾನ ಮನಸ್ಕರ ಸೇವಾ ಸಂಸ್ಥೆಯ ಸಂಚಾರಿ ಶಿವಾನುಭವದ11ನೇ ವಾರ್ಷಿಕೋತ್ಸವ ಹಾಗೂ ಕಾಯಕ ಯೋಗಿಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

‘ಕಾಯಕವಿಲ್ಲದ ಕೈಲಾಸವೂ ಶೂನ್ಯ, ಶಾಂತಿ, ಸಹನೆ, ಮೌಢ್ಯ ವಿರೋಧಿ ಡಂಬಾಚಾರ ಅಳಿದು, ಕಲ್ಯಾಣ ಮಯಸಮಾಜ ನಿರ್ಮಿಸಲು ಶ್ರಮಿಸಿದ ಬಸವಾದಿ ಶರಣರ ಚಿಂತನೆಯಿಂದ ನಾಡಿಗೆ ಅಭ್ಯುದಯವಾಗುತ್ತದೆ’ ಎಂದರು.

ADVERTISEMENT

‘ಸಾಮಾಜಿಕ ಜಾಲತಾಣದಲ್ಲಿಸಾವಿರಾರು ಗೆಳೆಯರಿರುತ್ತಾರೆ. ಕಷ್ಟ ಬಂದಾಗ ಅವರಾರೂ ಸಹಾಯಕ್ಕೆ ಬರಲಾರರು. ಆಧುನಿಕ ಜಗತ್ತಿನ ಕೆಲವು ಸೌಲಭ್ಯಗಳು ನಮ್ಮಲ್ಲಿ ಕೃತಕ ವ್ಯಕ್ತಿತ್ವವನ್ನು ಬೆಳೆಸುತ್ತಿವೆ. ಕೆಳವರ್ಗದವರನ್ನು ಅಪ್ಪಿಕೊಂಡು ಸಂತೈಸುವ ಮಾತೃ ಹೃದಯದವರು ನಾವಾಗಬೇಕು. ಆದರೆ, ಕಷ್ಟಕ್ಕೆ ಸ್ಪಂದಿಸುವ ನೈಜ ಕಳಕಳಿಯ ಜೀವಿಗಳ ಕೊರತೆಯಿದೆ’ ಎಂದು ಹೇಳಿದರು.

ಉದ್ಯಮಿ ಡಿ.ಎಸ್.ಗುಡ್ಡೋಡಗಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಫ.ಗು.ಸಿದ್ದಾಪುರ, ಡಾ.ಮಲ್ಲಿಕಾರ್ಜುನ ಮೇತ್ರಿ ಮಾತನಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಮಹಾದೇವ ರೆಬಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ ನಿವೃತ್ತ ಅಂಚೆ ಇಲಾಖೆಯ ಮೋಹನ ನಾಗಣಸೂರ, ಕೃಷಿಕ ರಮೇಶ ಗುಗ್ಗರಿ, ಬೀರಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ನಾಟಿವೈದ್ಯ ವಿಶ್ವನಾಥ ಹೊನಕಟ್ಟಿ. ನಿವೃತ್ತ ಲೈನ್‌ಮನ್ ರಾಮಣ್ಣ ಭಾವಿಕಟ್ಟಿ ಅವರಿಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆ ಅಧ್ಯಕ್ಷ ಎಸ್.ಡಿ.ಮಾದನಶೆಟ್ಟಿಯವರಿಗೆ 75ನೇ ಸಂವತ್ಸರ ತುಂಬಿದ ಹಿನ್ನೆಲೆ ದಂಪತಿಗಳಿಗೆ ಸತ್ಕರಿಸಲಾಯಿತು. ಏಕದಂತ ಮತ್ತು ಮಯೂರೇಶ ಸೂರ್ಯವಂಶಿ ಸ್ವಾಗತಗೀತೆ ಹಾಡಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ಮನು ಪತ್ತಾರ ನಿರೂಪಿಸಿದರು. ರಂಗನಾಥ ಅಕ್ಕಲಕೋಟ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.