ADVERTISEMENT

ಕೆಂಪೇಗೌಡರ ದೂರದೃಷ್ಟಿ ಆದರ್ಶನೀಯ: ಕಳಸದ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 15:22 IST
Last Updated 27 ಜೂನ್ 2022, 15:22 IST
ವಿಜಯಪುರ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ವಿಜಯಪುರ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು   

ವಿಜಯಪುರ: ಪ್ರತಿಯೊಬ್ಬರನ್ನು ಆಕರ್ಷಿಸುವ ರಾಜಧಾನಿ ಬೆಂಗಳೂರು ನಗರವು ಜಾಗತಿಕ ಮಟ್ಟದಲ್ಲಿ ಹೆಸರಾಗಿದೆ. ಅಂತಹದ್ದೊಂದು ವಿಶೇಷ ಹೆಗ್ಗಳಿಕೆ ಪಾತ್ರವಾಗಿರುವ ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರ ದೂರದೃಷ್ಟಿ ಮತ್ತು ವಿಚಾರಧಾರೆಯು ಇಂದಿಗೂ ಆದರ್ಶನೀಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ನಡೆದ ಕೆಂಪೇಗೌಡ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಕೆಂಪೇಗೌಡರು ಬೆಂಗಳೂರು ಸೇರಿದಂತೆ ವಿವಿಧೆಡೆ ಆಡಳಿತ ನಡೆಸಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಆಲೋಚನೆಗಳು ಇಂದಿಗೂ ಪ್ರಸ್ತುತವಾಗಿವೆ. ಕೆಂಪೇಗೌಡರು ಮಹೋನ್ನತ ದೂರದೃಷ್ಟಿ ಹೊಂದಿದ್ದರಿಂದ ಬೆಂಗಳೂರು ನಗರದಲ್ಲಿ ಇಂದಿಗೂ ಸಹ ಅನೇಕ ಕೆರೆಗಳ ಸಂರಕ್ಷಣೆ ಸಾಧ್ಯವಾಗಿದೆ. ಎಷ್ಟೇ ಜನಸಂದಣಿ ಇದ್ದರೂ ಎಲ್ಲರಿಗೂ ಅನುಕೂಲವಾಗುವ ಹಾಗೆ ನಗರವನ್ನು ನಿರ್ಮಿಸಿ ಇಡೀ ವಿಶ್ವಕ್ಕೆ ಮಾದರಿಯಾಗುವ ಹಾಗೆ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.

ADVERTISEMENT

ಸಿಂದಗಿಯ ಎಸ್‍ಜಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ಎ.ಆರ್.ಹೆಗ್ಗಣದೊಡ್ಡಿ ಮಾತನಾಡಿ, ಬೆಂಗಳೂರು ಶಾಂತಿಗೆ ಹೆಸರಾದ ನಗರವಾಗಿದೆ. ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರು ಸರ್ವ ಸಮುದಾಯದ ಜನರನ್ನು ಒಗ್ಗೂಡಿಸಿ ಮುನ್ನೆಡೆಸಿದರು. ಜಾತ್ಯತೀತ ಮನೋಭಾವ ಹೊಂದಿದ್ದರು. ಹೋರಾಟದ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ವೈಜ್ಞಾನಿಕ ಹಿನ್ನೆಲೆಯಲ್ಲಿ ಬೆಂಗಳೂರ ನಗರವನ್ನು ನಿರ್ಮಿಸಿದ್ದರಿಂದ ಬೆಂಗಳೂರು ನಗರ ಸುಂದರವಾಗಿ ನಿರ್ಮಾಣಗೊಂಡಿದೆ. ನಾಡಿನ ಹಿತಕ್ಕಾಗಿ ಶ್ರಮಿಸಿದ ಅವರ ಯೋಚನೆಗಳು, ಯೋಜನೆಗಳು ನಮಗೆಲ್ಲರಿಗೂ ಮಾದರಿಯಾಗಿವೆ ಎಂದರು.

ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ, ಕೆಂಪೇಗೌಡ ಸೇನೆಯ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ರತ್ನಾ ಸಂಗಟಿ, ಒಕ್ಕಲಿಗ ಸಮಾಜದ ಮುಖಂಡರಾದ ರವಿಗೌಡ ಬಿರಾದಾರ, ನೀಲೇಶಗೌಡ ಭೂಸನೂರ, ಕೆಂಪೇಗೌಡ ಸೇನೆಯ ಅಧ್ಯಕ್ಷರ ಕೃಷ್ಣಾ ಜಾಧವ್, ಕನ್ನಡ ಸೇನೆಯ ಜಿಲ್ಲಾ ಉಪಾಧ್ಯಕ್ಷ ಅಂಬಾಜಿರಾವ್ ಪವಾರ, ಕೆಂಪೇಗೌಡ ಸೇನೆಯ ತಾಲ್ಲೂಕು ಉಪಾಧ್ಯಕ್ಷ ಜಹೀರಸಾಬ್ ತೊಣಸ್ಯಾಳ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾ ಅಧ್ಯಕ್ಷ ಶರಣಗೌಡ ಹರವಾಳ ಇದ್ದರು.

ಮೆರವಣಿಗೆ: ಕೆಂಪೇಗೌಡರ ಭಾವಚಿತ್ರ ಮೆರವಣಿಗೆಗೆ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.