ADVERTISEMENT

ಖರ್ಗೆ ಬಾಯಿ ಮುಚ್ಚಿಕೊಂಡಿದ್ದರೇ ಒಳಿತು: ಈಶ್ವರಪ್ಪ ಎಚ್ಚರಿಕೆ

ಮಹಾಕುಂಭಮೇಳದ ಬಗ್ಗೆ ಅವಹೇಳನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 16:19 IST
Last Updated 2 ಫೆಬ್ರುವರಿ 2025, 16:19 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ವಿಜಯಪುರ: ‘ಮಹಾಕುಂಭಮೇಳದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಲಿಗೆ ಹರಿಬಿಡದೇ, ಬಾಯಿ‌‌ ಮುಚ್ಚಿಕೊಂಡಿದ್ದರೇ ಒಳಿತು, ಹಿಂದೂ ಧರ್ಮೀಯರನ್ನು ಕೆಣಕಿದರೆ ಸುಮ್ಮನಿರುವುದಿಲ್ಲ’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಎಚ್ಚರಿಕೆ ನೀಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಂಭಮೇಳದಲ್ಲಿ ಕುಟುಂಬ ಸಮೇತ ಭಾಗವಹಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಈಗಾಗಲೇ ಭೇಟಿ ನೀಡಿ ಬಂದಿದ್ದಾರೆ. ನಿಮಗೆ ತಾಕತ್ತಿದ್ದರೇ ಅವರನ್ನು ಪಕ್ಷದಿಂದ ತೆಗೆದುಹಾಕಿ, ಕುಂಭಮೇಳಕ್ಕೆ ಕಾಂಗ್ರೆಸ್‌ನವರು ಯಾರೂ ಹೋಗಬೇಡಿ ಎಂದು ಹೇಳಿ ನೋಡೋಣ’ ಎಂದು ಸವಾಲು ಹಾಕಿದರು.

ರಾಜಕೀಯ ಗಬ್ಬೆದ್ದು ಹೋಗಿದೆ: ‘ಕರ್ನಾಟಕದಲ್ಲಿ ರಾಜಕಾರಣ ಗಬ್ಬೆದು ಹೋಗಿದೆ.‌ ಬಿಜೆಪಿ ಒಂದು ಕುಟುಂಬದ ಕೈಯಲ್ಲಿ ಸಿಲುಕಿದೆ. ಹೊಂದಾಣಿಕೆ ರಾಜಕೀಯದಿಂದ ಹಿರಿಯ ಕಾರ್ಯಕರ್ತರಿಗೆ ನೋವಾಗಿದೆ. ಬಿಜೆಪಿಯಲ್ಲಿ ಸಿದ್ಧಾಂತವೇ ಇಲ್ಲದಂತಾಗಿದೆ. ಕಾಂಗ್ರೆಸ್‌ನಲ್ಲಿ ಎಲ್ಲರೂ ಮುಖ್ಯಮಂತ್ರಿ ಆಗುವುದಾಗಿ ಹೇಳುತ್ತಿದ್ದಾರೆ. ಬಾಯಿ‌ ಮುಚ್ಚಿಕೊಂಡು ಇರುವಂತೆ ಸ್ವತಃ  ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದರೂ ಬೆಲೆ ಕೊಡುತ್ತಿಲ್ಲ’ ಎಂದು ಟೀಕಿಸಿದರು.

ADVERTISEMENT

ಬ್ರಿಗೇಡ್‌ ಉದ್ಘಾಟನೆ ನಾಳೆ: ‘ಕ್ರಾಂತಿವೀರ ಬ್ರಿಗೇಡ್‌’ ಉದ್ಘಾಟನೆ ಫೆ. 4ರಂದು ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯಲ್ಲಿ ನಡೆಯಲಿದೆ. ನಾಡಿನ 1008 ಸಾಧು, ಸಂತರ ಪಾದಪೂಜೆ ಮೂಲಕ ಬ್ರಿಗೇಡ್ ಉದ್ಘಾಟನೆ ನೆರವೇರಲಿದೆ. 1008 ಜನ ಮಹಿಳೆಯರ ಪೂರ್ಣಕುಂಭ ಮೆರವಣಿಗೆ ಇರಲಿದೆ. 50 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.ಯಾವುದೇ ರಾಜಕೀಯ ನಾಯಕರು ಬಂದರೂ ಸ್ವಾಗತ‌, ಬ್ರಿಗೇಡ್‌ಗೂ ರಾಜಕೀಯಕ್ಕೂ ಸಂಬಂಧವಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.