ADVERTISEMENT

ವಿಜಯಪುರ: ‘ಕ್ರಾಂತಿವೀರ ಬ್ರಿಗೇಡ್‌’ ಉದ್ಘಾಟನೆ ಫೆ.4ಕ್ಕೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 13:11 IST
Last Updated 5 ಜನವರಿ 2025, 13:11 IST
   

ವಿಜಯಪುರ: ‘ಕ್ರಾಂತಿವೀರ ಬ್ರಿಗೇಡ್‌’ ಉದ್ಘಾಟನಾ ಸಮಾರಂಭ ಫೆಬ್ರುವರಿ 4ರಂದು ಬಸವನ ಬಾಗೇವಾಡಿಯಲ್ಲಿ ನಡೆಯಲಿದೆ ಎಂದು ಬ್ರಿಗೇಡ್‌ ಸಂಚಾಲಕರಾದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲ್ಹಾಪುರ–ಕನ್ಹೇರಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಣಿ ಶಾಖಾ ಮಠದ ಸಿದ್ಧರಾಮಾನಂದಪುರಿ ಸ್ವಾಮೀಜಿ ಅವರು ಬ್ರಿಗೇಡ್‌ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.

1008 ಸಾಧು, ಸಂತರ ಪಾದಪೂಜೆ, 1008 ಸುಮಂಗಲಿಯರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಒಂದು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.

ADVERTISEMENT

ಜನವರಿ 12ರಿಂದ ರಾಜ್ಯದಾದ್ಯಂತ ಪ್ರವಾಸ ಮಾಡಿ, ಹಿಂದೂ ಧರ್ಮದ ಸಾಧು, ಸಂತರು, ಪ್ರಮುಖರಿಗೆ ಆಮಂತ್ರಣ ನೀಡಲಾಗುವುದು ಎಂದು ಹೇಳಿದರು.

ಬ್ರಿಗೇಡ್‌ ಉದ್ದೇಶ:

ರಾಜ್ಯದಲ್ಲಿ ಹಿಂದುಳಿದ, ದಲಿತ ಸಮುದಾಯಗಳಿಗೆ ಸೇರಿದ ಸಾವಿರಾರು ಸಣ್ಣಪುಟ್ಟ ಮಠ, ಮಾನ್ಯಗಳಿದ್ದು, ಧರ್ಮದ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಆದರೆ, ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡುವುದು ಬ್ರಿಗೇಡ್‌ನ ಮೊದಲ ಆದ್ಯತೆಯಾಗಿದೆ ಎಂದು ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ದೇವಸ್ಥಾನಗಳ ಅರ್ಚಕರಿಗೆ ಸರಿಯಾದ ಶಿಕ್ಷಣ ಇಲ್ಲ. ಅವರಿಗೆ ಧರ್ಮದ ಬಗ್ಗೆ ತರಬೇತಿ ಹಾಗೂ ಹಿಂದುಳಿದ, ದಲಿತ ಮತ್ತು ಎಲ್ಲ ವರ್ಗದ ಬಡವರ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುವ ಉದ್ದೇಶದಿಂದ ಕ್ರಾಂತಿವೀರ ಬ್ರಿಗೇಡ್‌ ಆರಂಭವಾಗುತ್ತಿದೆ ಎಂದು ಹೇಳಿದರು.

ಹಿಂದು ಧರ್ಮಕ್ಕೆ ಯಾವುದೇ ಸಮಸ್ಯೆ ಎದುರಾದರೆ ಅಲ್ಲಿ ಕ್ರಾಂತಿವೀರ ಬ್ರಿಗೇಡ್‌ ಧ್ವನಿ ಎತ್ತಲಿದೆ. ರಾಜಕಾರಣಕ್ಕೂ ಬ್ರಿಗೇಡ್‌ಗೂ ಯಾವುದೇ ಸಂಬಂಧವಿಲ್ಲ ಎಂದರು.

ಈಶ್ವರಪ್ಪ ಬೆನ್ನಿಗೆ ಬ್ರಿಗೇಡ್‌:

‘ರಾಜಕಾರಣದಿಂದ ಮಠ–ಮಾನ್ಯಗಳಿಗೆ ತೊಂದರೆಯಾದರೆ ಈಶ್ವರಪ್ಪ ನಮ್ಮ ಜೊತೆ ನಿಲ್ಲುತ್ತಾರೆ. ಅದೇ ರೀತಿ ಈಶ್ವರಪ್ಪನವರಿಗೆ ತೊಂದರೆಯಾದರೆ ಮಠ–ಮಾನ್ಯಗಳು ಅವರ ಬೆನ್ನಿಗೆ ನಿಲ್ಲಲಿವೆ’ ಎಂದು ಮಠಾಧೀಶರು ಘೋಷಿಸಿದರು.

ಮಖಣಾಪುರದ ಸೋಮೇಶ್ವರ ಸ್ವಾಮೀಜಿ, ಹುಲಜಂತಿಯ ಪಟ್ಟದ ಪೂಜಾರಿ ಮಾಳಿಂಗರಾಯರು, ಕ್ರಾಂತಿವೀರ ಬ್ರಿಗೇಡ್‌  ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಬಾಳಿಕಾಯಿ, ಬ್ರಿಗೇಡ್‌ನ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಶಿಲ್ಪಾ ಕುದರಗೊಂಡ, ಸಂಚಾಲಕ ಕೆ.ಇ.ಕಾಂತೇಶ್‌, ರಾಜು ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.