ADVERTISEMENT

ಅಪರೂಪವಾದ ಬಾನಾಡಿಗಳ ಕಲರವ: ಲಕ್ಷಾಂತರ ಪಕ್ಷಿಗಳ ಆವಾಸ ತಾಣವಾದ ಕೃಷ್ಣೆಯ ಹಿನ್ನೀರು

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 6:02 IST
Last Updated 25 ಜನವರಿ 2026, 6:02 IST
ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಕಂಡುಬಂದ ಫ್ಲೆಮಿಂಗೋ  ಹಕ್ಕಿಗಳ ಸಾಲು
ಚಿತ್ರಗಳು: ಪ್ರವೀಣ ಬಡ್ಡಿ ಮತ್ತು ಹನುಮಂತ ಡೋಣಿ
ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಕಂಡುಬಂದ ಫ್ಲೆಮಿಂಗೋ  ಹಕ್ಕಿಗಳ ಸಾಲು ಚಿತ್ರಗಳು: ಪ್ರವೀಣ ಬಡ್ಡಿ ಮತ್ತು ಹನುಮಂತ ಡೋಣಿ   

ಆಲಮಟ್ಟಿ: ಮಳೆಗಾಲದಲ್ಲಿ ಅಬ್ಬರಿಸುವ ಆಲಮಟ್ಟಿ ಜಲಾಶಯದ ಹಿನ್ನೀರು ಡಿಸೆಂಬರ್ ವೇಳೆಗೆ ಬಹುತೇಕ ಶಾಂತವಾಗುತ್ತದೆ. ಆದರೆ, ಈ ಬಾರಿ ಜಲಾಶಯದ ಹಿನ್ನೀರು ಕಡಿಮೆಯಾಗಿಲ್ಲ. ಇದರಿಂದ ವಲಸೆ ಬರುವ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಿಲ್ಲ.

ಪ್ರತಿ ವರ್ಷ ನವೆಂಬರ್‌ನಿಂದ ಜನವರಿಯ ಚಳಿಗಾಲ ಪೂರ್ಣಗೊಳ್ಳುವವರೆಗೆ ಕೃಷ್ಣೆಯ ಹಿನ್ನೀರು ಲಕ್ಷಾಂತರ ಪಕ್ಷಿಗಳ ಆವಾಸ ತಾಣ. ಆಹಾರಕ್ಕಾಗಿ ಮಾತ್ರ (ಸಂತಾನೋತ್ಪತ್ತಿಗಾಗಿ ಅಲ್ಲ) ಈ ಕೃಷ್ಣೆಯ ಹಿನ್ನೀರನ್ನು ನಂಬಿಕೊಂಡು ದೇಶ, ವಿದೇಶಗಳಿಂದ ಪಕ್ಷಿಗಳು ಆಗಮಿಸುತ್ತವೆ.

‘ಪ್ರತಿ ವರ್ಷ ನವೆಂಬರ್‌ನಲ್ಲಿ 8 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾಣುತ್ತಿದ್ದ ಗುಜರಾತ್‌ನ ಕಚ್‌ನಿಂದ ಬರುತ್ತಿದ್ದ ಫ್ಲೆಮಿಂಗೋ (ರಾಜಹಂಸ), ಬಾರ್ ಹೆಡೆಡ್ ಗೂಸ್, ಚೀನಾ ಮತ್ತು ಮಂಗೋಲಿಯಾದಿಂದ ಬರುವ ಬ್ಲಾಕ್ ಟೇಲ್ಡ್ ಗಾಲ್ಟವಿಟ್, ಡೆಮೋಸಿಲ್ ಕ್ರೇನ್ ಸೇರಿದಂತೆ ನಾನಾ ಪಕ್ಷಿಗಳ ಸಂಖ್ಯೆ ಈ ಬಾರಿ ಸಾವಿರವೂ ದಾಟಿಲ್ಲ’ ಎನ್ನುತ್ತಾರೆ ಪಕ್ಷಿ ವೀಕ್ಷಕರು ಆಗಿರುವ ಆರ್.ಎಫ್.ಓ ಹನುಮಂತ ಡೋಣಿ ಹಾಗೂ ಪ್ರವೀಣ ಬಡ್ಡಿ.

ADVERTISEMENT

‘ಗುಜರಾತ್‌ನ ಕವ್‌ನಲ್ಲಿ ಫ್ಲೇಮಿಂಗೋ ಪಕ್ಷಿಗಳು ಇನ್ನೂ ತಮ್ಮ ಆವಾಸವನ್ನು ಬಿಟ್ಟಿಲ್ಲ. ತಡವಾಗಿ ಕೃಷ್ಣೆಯ ಹಿನ್ನೀರಿಗೆ ಬರುವ ಸಾಧ್ಯತೆಯೂ ಇದೆ’ ಎನ್ನುತ್ತಾರೆ ಅವರು.

‘ಬೇಸಿಗೆಯಲ್ಲಿ ಪಕ್ಷಿಗಳ ಸಂತಾನೋತ್ಪತ್ತಿ ಕಾರ್ಯ ನಡೆಯುತ್ತದೆ. ಆದರೆ, ಆಲಮಟ್ಟಿ ಹಿನ್ನೀರು ಪ್ರದೇಶದಲ್ಲಿ ಹೆಚ್ಚಾಗಿ ಚಳಿಗಾಲಕ್ಕೆ ಆಹಾರಕ್ಕೋಸ್ಕರ ಬರುವ ಪಕ್ಷಿಗಳೇ ಹೆಚ್ಚಿವೆ. ಪ್ರತಿ ವರ್ಷ ಆಸ್ಟ್ರೇಲಿಯಾದಿಂದ ಬರುವ ಓರಿಯಂಟಲ್ ಪ್ರಾಟಿನ್ ಕೋಲ್ ಎಂಬ ಪಕ್ಷಿಗಳು ಮಾತ್ರ ಸಹಸ್ರಾರು ಸಂಖ್ಯೆಯಲ್ಲಿ ಬೇಸಿಗೆಯಲ್ಲಿ ಬಂದು ಸಂತಾನೋತ್ಪತ್ತಿ ಕಾರ್ಯ ನಡೆಸಿ ಮರಿಯೊಂದಿಗೆ ಮರುಳುತ್ತವೆ’ ಎಂದು ವಿವರಿಸಿದರು.

ಅಲಾಸ್ಕಾದಿಂದ ಬರುವ ಪಿಂಟೆಲ್ಡ್ ಡಕ್ ಹಾಗೂ ಗ್ಲಾಸಿ ಐಬಿಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಮೊದ ಮೊದಲು ಕಂಡು ಬಂದರೂ ನಂತರ ಹೊಸಪೇಟೆಯ ಬಳಿ ಅಂಕಸಮುದ್ರದತ್ತ ಪ್ರಯಣ ಬೆಳೆಸಿವೆ.

ಗ್ರೇಟರ್ ಸ್ಪಾಟೆಡ್ ಈಗಲ್
ಪೇಂಟೆಡ್ ಸ್ಕಾರ್ಕ್
ಪಿನ್ ಟೇಲ್ಡ್ ಡಕ್ಸ್ ಮತ್ತು ಗಾಡ್ ವಿಟ್

ಪೂರಕ ವಾತಾವರಣ

ಹಿನ್ನೀರು ಕಡಿಮೆಯಾಗಿ ಕೆಸರು ತುಂಬಿರಬೇಕು ಪಾಚಿ ಅಲ್ಗಿ ಕಪ್ಪೆ ಚಿಪ್ಪು ಶಂಖದ ಹುಳು ಏಡಿ ಚಿಕ್ಕ ಚಿಕ್ಕ ಮೀನುಗಳು ಮೊಟ್ಟೆಗಳು ಹುಳ-ಹುಪ್ಪಡಿಗಳು ಸಾಕಷ್ಟು ದೊರೆತು ವಾತಾವರಣವೂ ಪೂರಕವಾದಾಗ ಪಕ್ಷಿಗಳ ಆವಾಸ ಹೆಚ್ಚಾಗುತ್ತದೆ. ಆದರೆ ಜಲಾಶಯದಲ್ಲಿ ಇನ್ನೂ 87 ಟಿಎಂಸಿ ಅಡಿವರೆಗೂ ನೀರು ಇದೆ. ವಾತಾವರಣವೂ ಒಮ್ಮೆ ಅತಿ ಚಳಿ ಶೀತಗಾಳಿ ಒಮ್ಮೊಮ್ಮೆ ಚಳಿಯೇ ಇಲ್ಲದ ವಾತಾವರಣ ಜತೆಗೆ ಹಿನ್ನೀರು ಕಡಿಮೆಯಾಗಿಲ್ಲ. ಇದರಿಂದ ಪಕ್ಷಿಗಳಿಗೆ ಹೆಚ್ಚಿನ ಆಹಾರ ದೊರೆಯುತ್ತಿಲ್ಲ. ಪಕ್ಷಿಗಳು ಗುಂಪು ಗುಂಪಾಗಿ ಆಗಮಿಸಿ ನಾಲ್ಕೈದು ದಿನ ಇಲ್ಲಿ ಇದ್ದು ನೋಡಿ ಬೇರೆಡೆ ಆಹಾರ ಆರಸಿ ವಲಸೆ ಹೋಗುತ್ತಿವೆ. ಆದರೂ ಕಾಮನ್ ಪೋಚಾರ್ಡ್ ಪಿನ್ ಟೇಲ್ ಡಕ್ಸ್ ನಾರ್ದನ್ ಶಾವಲರ್ ಗಾರ್ಗನಿ ಸೇರಿದಂತೆ ಕೆಲ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆಲಮಟ್ಟಿ ಜಲಾಶಯದ ಹಿನ್ನೀರಿನ ಹಳೇ ಆಲಮಟ್ಟಿ ಚಿಮ್ಮಲಗಿ ಬೇನಾಳ ಕೊರ್ತಿ ಕೊಲ್ಹಾರ ಬಾಗಲಕೋಟೆ ಜಿಲ್ಲೆಯ ಚಿಕ್ಕಸಂಗಮ ಹೆರಕಲ್ ಮಲ್ಲಾಪುರ ಬೆಣ್ಣೂರ ಅನಗವಾಡಿ ಯಡಹಳ್ಳಿ ಮತ್ತೀತರ ಕಡೆ ನೀವು ಪಕ್ಷಿಗಳನ್ನು ವೀಕ್ಷಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.