ADVERTISEMENT

ಕೃಷ್ಣಾ ಕೊಳ್ಳದ ನೀರಾವರಿ ಚರ್ಚೆಗೆ..?

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಇಂದಿನಿಂದ

ಡಿ.ಬಿ, ನಾಗರಾಜ
Published 9 ಡಿಸೆಂಬರ್ 2018, 20:00 IST
Last Updated 9 ಡಿಸೆಂಬರ್ 2018, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ವಿಧಾನ ಮಂಡಲದ ಅಧಿವೇಶನ ಆರಂಭಗೊಳ್ಳಲಿದ್ದು, ಅವಳಿ ಜಿಲ್ಲೆಯ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳು ಪ್ರಮುಖವಾಗಿ ಚರ್ಚೆಗೊಳಗಾಗಲಿವೆ ಎಂಬುದು ತಿಳಿದು ಬಂದಿದೆ.

ಸಿದ್ದರಾಮಯ್ಯ ನೇತೃತ್ವದ ಈ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ವಿಜಯಪುರ, ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯಲ್ಲಿ ಯುಕೆಪಿಯ ನೀರಾವರಿ ಕಾಮಗಾರಿಗಳು ಶರವೇಗದಲ್ಲಿ ನಡೆದಿದ್ದವು. ಎತ್ತ ನೋಡಿದರೂ ಕಾಲುವೆಗಳ ನಿರ್ಮಾಣ ಭರದಿಂದ ಸಾಗಿತ್ತು.

ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಆ ಅವಧಿಯಲ್ಲಿ ಐದು ವರ್ಷ ಜಲಸಂಪನ್ಮೂಲ ಸಚಿವರಿದ್ದರು. ಇದರ ಪರಿಣಾಮ ಯುಕೆಪಿ ಕಾಮಗಾರಿ ಶರವೇಗ ಕಂಡಿದ್ದವು. ಇದೀಗ ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಿದ್ದು, ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುತ್ತಿಲ್ಲ ಎಂಬ ದೂರು ಅವಿಭಜಿತ ಜಿಲ್ಲೆಯಲ್ಲಿ ಸಾರ್ವತ್ರಿಕವಾಗಿದೆ.

ADVERTISEMENT

ಅವಿಭಜಿತ ಜಿಲ್ಲೆಯಲ್ಲಿ ಕಾಲುವೆ ಕಾಮಗಾರಿ ಇದೀಗ ತಾರ್ಕಿಕ ಅಂತ್ಯ ತಲುಪಿವೆ. ಪೂರ್ಣಗೊಳಿಸಬೇಕಾದ ಜವಾಬ್ದಾರಿ ಸಮ್ಮಿಶ್ರ ಸರ್ಕಾರದ್ದಾಗಿದೆ. ಆದರೆ ಕಾಲುವೆ ಕಾಮಗಾರಿ ಈಗ ಹಿಂದಿನ ವೇಗದಲ್ಲಿ ನಡೆಯುತ್ತಿಲ್ಲ ಎಂಬ ದೂರು ಮುಳವಾಡ, ಚಿಮ್ಮಲಗಿ, ತುಬಚಿ–ಬಬಲೇಶ್ವರ ಏತ ನೀರಾವರಿ ಯೋಜನೆ ವ್ಯಾಪ್ತಿಯ ರೈತ ಸಮೂಹದ್ದಾಗಿದೆ.

‘ಕಾಲುವೆ ಕಾಮಗಾರಿ ಪೂರ್ಣಗೊಳ್ಳಬೇಕು. ನಂತರ ಹೊಲಗಾಲುವೆ ನಿರ್ಮಿಸಿ, ಹೊಲಗಳಿಗೆ ನೀರು ಹರಿಸಬೇಕು. ಇದರ ಜತೆಯಲ್ಲೇ ಆಲಮಟ್ಟಿಯ ಲಾಲ್‌ಬಹದ್ದೂರ್‌ ಶಾಸ್ತ್ರಿ ಜಲಾಶಯದ ಎತ್ತರವನ್ನು 519.60 ಮೀ ಎತ್ತರದಿಂದ 524.256 ಮೀ ಎತ್ತರಕ್ಕೆ ಹೆಚ್ಚಿಸಬೇಕು.

ಇದಕ್ಕೆ ಅಗತ್ಯವಿರುವ ಭೂ ಸ್ವಾಧೀನ ನಡೆಯಬೇಕು. ಪುನರ್‌ ವಸತಿ, ಪುನರ್ ನಿರ್ಮಾಣದ ಕೆಲಸ ವೇಗಗೊಳ್ಳಬೇಕು. ಯುಕೆಪಿಯ ಬಿ ಸ್ಕೀಂನಡಿ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗೆ ಎಷ್ಟು ನೀರು ಹಂಚಿಕೆಯಾಗಿದೆ. ಬಳಕೆಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದು ಸೇರಿದಂತೆ ನೀರಾವರಿಯ ಇನ್ನಿತರೆ ವಿಷಯಗಳ ಬಗ್ಗೆ ಈಗಾಗಲೇ ಸಭಾಪತಿ ಅವರಿಗೆ ಸ್ಟಾರ್‌ ಪ್ರಶ್ನೆ ಕಳುಹಿಸಿಕೊಟ್ಟಿರುವೆ. ಇದೇ 18ರ ಮಂಗಳವಾರ ಜಲಸಂಪನ್ಮೂಲ ಸಚಿವರು ಉತ್ತರಿಸಲಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ಟ್ಯಾಂಕರ್‌ ನೀರಿಗೆ ಮೊರೆ
‘ಇಂಡಿ ವಿಧಾನಸಭಾ ಕ್ಷೇತ್ರ ಶಾಶ್ವತ ಬರಪೀಡಿತ ಪ್ರದೇಶ. ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಬಿಗಡಾಯಿಸಿದೆ. ರಾಜ್ಯದ ನಿಂಬೆ ಬೆಳೆಯ ಅರ್ಧ ಪಾಲನ್ನು ಹೊಂದಿರುವ ತಾಲ್ಲೂಕಿನಲ್ಲಿ ಬೆಳೆಗಾರರ ಸಂಕಷ್ಟ ಹೆಚ್ಚಿದೆ. ಮಹಾರಾಷ್ಟ್ರ ಸರ್ಕಾರ ಹಿಂದಿನ ವರ್ಷಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಸಹಕರಿಸಿದಂತೆ, ರಾಜ್ಯ ಸರ್ಕಾರವೂ ಸ್ಪಂದಿಸಲಿ’ ಎಂಬ ಬೇಡಿಕೆಯನ್ನು ವಿಧಾನಸಭಾ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು.

‘ಇಂಡಿ ವಿಧಾನಸಭಾ ಕ್ಷೇತ್ರದ ಹಲ ಭಾಗಕ್ಕೆ ನೀರಾವರಿ ಸಂಪರ್ಕವಿದೆ. ಆದರೆ ಹಲ ವರ್ಷಗಳಿಂದ ಕಾಲುವೆಯ ತುತ್ತ ತುದಿಗೆ ನೀರು ಹರಿದ ಇತಿಹಾಸವಿಲ್ಲ. ಹೆಸರಿಗಷ್ಟೇ ನಮ್ಮದು ನೀರಾವರಿ ಪ್ರದೇಶ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಡಿನೋಟಿಫೈ ಮಾಡಿ ಎಂಬ ಆಗ್ರಹವನ್ನು ಹಲ ದಿನಗಳಿಂದ ಮಾಡುತ್ತಿರುವೆ. ಈ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುವ ಚಿಂತನೆ ನಡೆಸಿರುವೆ. ಆಲಮಟ್ಟಿ ಎತ್ತರದ ಕುರಿತಂತೆ ಸ್ಟಾರ್‌ ಪ್ರಶ್ನೆಯೊಂದನ್ನು ಕೇಳಿರುವೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.