ADVERTISEMENT

ಕೃಷ್ಣಾ ನದಿ ರಕ್ಷಣೆಯ ಹೋರಾಟ ನಿರಂತರ: ರಾಜೇಂದ್ರ ಪೋದ್ದಾರ

​ಪ್ರಜಾವಾಣಿ ವಾರ್ತೆ
Published 12 ಮೇ 2025, 14:16 IST
Last Updated 12 ಮೇ 2025, 14:16 IST
ಆಲಮಟ್ಟಿಗೆ ಸೋಮವಾರ ಆಗಮಿಸಿದ ಕೃಷ್ಣಾ ಜಲ ಸದ್ಭಾವಯಾತ್ರೆಯನ್ನುದ್ದೇಶಿಸಿ ವಾಲ್ಮಿಯ ನಿವೃತ್ತ ನಿರ್ದೇಶಕ ಡಾ ರಾಜೇಂದ್ರ ಪೊದ್ದಾರ ಮಾತನಾಡಿದರು
ಆಲಮಟ್ಟಿಗೆ ಸೋಮವಾರ ಆಗಮಿಸಿದ ಕೃಷ್ಣಾ ಜಲ ಸದ್ಭಾವಯಾತ್ರೆಯನ್ನುದ್ದೇಶಿಸಿ ವಾಲ್ಮಿಯ ನಿವೃತ್ತ ನಿರ್ದೇಶಕ ಡಾ ರಾಜೇಂದ್ರ ಪೊದ್ದಾರ ಮಾತನಾಡಿದರು   

ಆಲಮಟ್ಟಿ: ‘ದೇಶದ ಮೂರನೇ ಅತಿ ದೊಡ್ಡ ನದಿ ಹಾಗೂ ನಾಲ್ಕು ರಾಜ್ಯಗಳ ರೈತರ ಜೀವನಾಡಿಯಾಗಿರುವ ಕೃಷ್ಣಾ ನದಿಯ ಒತ್ತುವರಿ, ಮರಳು ಗಣಿಗಾರಿಕೆ, ಹರಿಯುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅರಣ್ಯ ನಾಶ, ನದಿ ತೀರದ ಕಾರ್ಖಾನೆಗಳ ಪ್ರದೂಷಣದಿಂದ ನದಿಯ ಅಸ್ತಿತ್ವಕ್ಕೆ ಧಕ್ಕೆಯಾಗಿದೆ’ ಎಂದು ಧಾರವಾಡ ವಾಲ್ಮಿಯ ನಿವೃತ್ತ ನಿರ್ದೇಶಕ ರಾಜೇಂದ್ರ ಪೋದ್ದಾರ ಹೇಳಿದರು.

ಆಲಮಟ್ಟಿಯ ಪ್ರವಾಸಿ ಮಂದಿರದ ಹೊರ ಆವರಣದಲ್ಲಿ ಸೋಮವಾರ, ಬಸವ ಐಕ್ಯ ಸ್ಥಳ ಕೂಡಲಸಂಗಮದಿಂದ ಕೃಷ್ಣೆಯ ಉಗಮ ಸ್ಥಾನ ಮಹಾಬಲೇಶ್ವರದವರೆಗೆ ನಡೆಯುತ್ತಿರುವ ‘ಕೃಷ್ಣಾ ಜಲ ಸದ್ಭಾವ ಯಾತ್ರೆ’ಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಕೃಷ್ಣಾ ನದಿ ಸಂರಕ್ಷಣೆಯ ಕುರಿತು ಜನರಲ್ಲಿ ತಿಳಿವಳಿಕೆ ಹಾಗೂ ನದಿ ರಕ್ಷಣೆಗಾಗಿ ನದಿ ಹರಿಯುವ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ನಾಲ್ಕು ರಾಜ್ಯಗಳ ಸರ್ಕಾರಗಳು ನದಿ ರಕ್ಷಣೆಗಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವವರೆಗೆ ಹೋರಾಟ ನಿರಂತರ’ ಎಂದರು.

ADVERTISEMENT

ಆಂಧ್ರಪ್ರದೇಶದ ನೀರಾವರಿ ಸತ್ಯನಾರಾಯಣ ಬೋಳಿಶೆಟ್ಟಿ ಮಾತನಾಡಿ, ‘ನಾಲ್ಕು ರಾಜ್ಯಗಳ ಲಕ್ಷಾಂತರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕೊಟ್ಟು, ಕೋಟ್ಯಂತರ ಜನರ ಕುಡಿಯುವ ನೀರಿನ ದಾಹ ತಣಿಸುವ ಕೃಷ್ಣಾ ನದಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ನಾಲ್ಕು ರಾಜ್ಯಗಳ ಜನ ಇದಕ್ಕಾಗಿ ಒಗ್ಗೂಡಬೇಕಿದೆ’ ಎಂದರು.

ಮಹಾರಾಷ್ಟ್ರದ ನೀರಾವರಿ ತಜ್ಞ ನರೇಂದ್ರ ಚುಗ ಮಾತನಾಡಿ, ‘ನದಿ ರಕ್ಷಣೆ ತಮ್ಮ ಕರ್ತವ್ಯವಲ್ಲ ಎಂದು ನಾಲ್ಕು ರಾಜ್ಯಗಳು ತಮ್ಮ ಜವಾಬ್ದಾರಿಯಿಂದ ದೂರ ಸರಿಯುತ್ತಿವೆ’ ಎಂದು ವಿಷಾದಿಸಿದರು.

ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ‘ಕೃಷ್ಣಾ ನದಿಗೆ ಮಲಪ್ರಭಾ, ಘಟಪ್ರಭಾ, ಭೀಮಾ, ಡೋಣಿ ಮೊದಲಾದ ನದಿಗಳು ಬಂದು ಸೇರುತ್ತಿವೆ, ಆ ಎಲ್ಲಾ ಉಪನದಿಗಳ ಒತ್ತುವರಿ ಹೆಚ್ಚುತ್ತಿದೆ. ಅಲ್ಲಿ ಅವೈಜ್ಞಾನಿಕವಾಗಿ ರಸ್ತೆ, ರೈಲ್ವೆ ಸೇತುವೆ ನಿರ್ಮಾಣಗೊಳ್ಳುತ್ತಿವೆ, ಇದರಿಂದ ಆ ನದಿಗಳಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿ ಮಹಾಪೂರಕ್ಕೆ ಕಾರಣವಾಗುತ್ತಿವೆ’ ಎಂದರು.

ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಸವರಾಜ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ.ಬಸವರಾಜ, ಶಿವಕುಮಾರ ನಾಟಿಕಾರ, ಅಪ್ಪಾಸಾಹೇಬ ಯರನಾಳ, ಸಂಜು ಬಿರಾದಾರ, ನಿಂಗಪ್ಪ ಅವಟಿ, ವೆಂಕಟೇಶ ಜಾಹೀರದಾರ, ಸಕ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.