
ನಾಲತವಾಡ: ಜೀವನದಿ ಕೃಷ್ಣಾ ನದಿಯ ತಟದಿಂದ ಕೂಗಳತೆ ದೂರದಲ್ಲಿರುವ ಲೊಟಗೇರಿ ಗ್ರಾಮ ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದೆ.
ಲೊಟಗೇರಿ ಜನರ ಮನವಿಗೆ ಸ್ಪಂದಿಸಿ ಹಲವು ಯೋಜನೆಯನ್ನು ಆರಂಭಿಸಿದ್ದರೂ ಶುದ್ಧ ಕುಡಿಯುವ ನೀರು ಒದಗಿಸದೇ ಹಳ್ಳ ಹಿಡಿದಿವೆ. ‘ಸಮುದ್ರದ ಜೊತೆ ನೆಂಟಸ್ಥನ ಉಪ್ಪಿಗೆ ಬರ’ ಎಂಬ ಗಾದೆ ಮಾತಿನಂತೆ ಸುತ್ತಾರು ಊರುಗಳಿಗೆ ಶುದ್ಧ ಕುಡಿಯುವ ನೀರನ್ನು ಕೊಡುವ ನದಿ ಪಕ್ಕದ ಗ್ರಾಮದ ಜನರು ಕಳೆದ ಹಲವಾರು ವರ್ಷಗಳಿಂದ ಫ್ಲೋರೈಡ್ ಮಿಶ್ರಿತ ನೀರನ್ನೇ ಕುಡಿಯುತ್ತಿದ್ದಾರೆ.
ಈ ಗ್ರಾಮದ ಪಕ್ಕದಲ್ಲೇ ಕೃಷ್ಣಾ ನದಿ ಶುಭ್ರವಾಗಿ ಹರಿದರೂ ಈ ಗ್ರಾಮಕ್ಕೆ ಮಾತ್ರ ಕೊಳವೆಬಾವಿ ನೀರು ಪೂರೈಕೆಯಾಗುತ್ತಿದೆ. ಅಧಿಕ ಪ್ರಮಾಣದ ಫ್ಲೋರೈಡ್ ರಾಸಾಯನಿಕಯುಕ್ತ ನೀರು ಕುಡಿದು ಈ ಭಾಗದ ಜನರಿಗೆ ತೀವ್ರ ಸ್ವರೂಪದ ಮೊಣಕಾಲು ನೋವು, ಮೂಳೆ ಮುರಿತ, ಮೂಳೆ ಸವೆತ, ಹಲ್ಲುಗಳು ಕಂದಾಗುವುದು, ವಸಡುಗಳ ಸವೆತ ಚರ್ಮ ಸಂಬಂಧಿ ಆನಾರೋಗ್ಯವೂ ಕಂಡು ಬಂದಿದೆ. ತಮ್ಮ ಸಮಸ್ಯೆ ಬಗೆಹರಿಸುವಂತೆ ಕಳೆದ 12 ವರ್ಷಗಳಿಂದ ಈ ಗ್ರಾಮದ ಜನ ನೀಡಿದ ಮನವಿಗೆ ಬಿಡಿಗಾಸಿನ ಕಿಮ್ಮತ್ತೂ ಸಿಕ್ಕಿಲ್ಲ. ಕೃಷ್ಣಾ ನದಿ ಪಾತ್ರದಲ್ಲಿರುವ ಈ ಯೋಜನಾ ನಿರಾಶ್ರಿತರ ಗ್ರಾಮದ ಜನರ ಮುಗಿಯದ ಗೋಳಾಗಿದೆ.
ಬಿಜ್ಜೂರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮನೆಗಳಿದ್ದು, ಫ್ಲೋರೈಡ್ ಹಾಗೂ ಲವಣಯುಕ್ತ ನೀರು ಕುಡಿಯಬೇಕಾದ ಅನಿವಾರ್ಯತೆಯಿದೆ.
ಮುದ್ದೇಬಿಹಾಳ, ನಾಲತವಾಡ, ರಾಯಚೂರು ಜಿಲ್ಲೆಯ ಲಿಂಗಸುಗೂರು, ಬಾಗಲಕೋಟೆ ಜಿಲ್ಲೆಯ ಹುನಗುಂದ, ಇಳಕಲ್ ನಗರಗಳಿಗೆ ಶುದ್ಧ ಕುಡಿಯುವ ನೀರನ್ನು ನಿರಂತರವಾಗಿ ಪೂರೈಸುತ್ತಿರುವ ಕೃಷ್ಣಾ ನದಿಯ ಪಕ್ಕದಲ್ಲೇ ಇರುವ ಈ ಗ್ರಾಮ. ರಾಸಾಯನಿಕ ಯುಕ್ತ ಫ್ಲೋರೈಡ್ ಮಲಿನಯುಕ್ತ ನೀರು ಕುಡಿಯಬೇಕಾದ ಅನಿವಾರ್ಯತೆಯಿದೆ.
ನೀರಿನ ಘಟಕ: ಕುಡಿವ ನೀರಿನ ಸಮಸ್ಯೆ ನೀಗಿಸಲು ಸರ್ಕಾರ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಿದೆಯಾದರೂ ನಿಷ್ಕ್ರಿಯಗೊಂಡು, ಗ್ರಾಮಸ್ಥರ ಉಪಯೋಗಕ್ಕೆ ಇಲ್ಲದಂತಾಗಿದೆ. ಘಟಕ ಪ್ರಾರಂಭವೇ ಆಗಿಲ್ಲ ಎಂಬುದು ಸೋಜಿಗ. ಘಟಕ ಸ್ಥಾಪನೆಯಾಗಿ ಒಂದು ದಿನವೂ ಒಂದೇ ಒಂದು ತೊಟ್ಟು ಶುದ್ಧ ಕುಡಿಯುವ ನೀರು ಅದರಿಂದ ಬಂದಿಲ್ಲ. ನಂತರ ಘಟಕದಲ್ಲಿನ ಸಾಮಾಗ್ರಿಗಳು ತುಕ್ಕು ಹಿಡಿದಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೊಳವೆಬಾವಿ ನೀರೆಗತಿ: ಸದ್ಯ ಗ್ರಾಮಸ್ಥರು ಕುಡಿಯಲು ಫ್ಲೋರೈಡ್ ಅಂಶವಿರುವ ಕೊಳವೆಬಾವಿ ನೀರನ್ನು ಅವಲಂಬಿಸಿದ್ದಾರೆ. ಊರ ಪಕ್ಕದಲ್ಲೇ ಇರುವ ಕೃಷ್ಣಾ ನದಿಯ ನೀರು ಹೇಗಿದೆಯೋ ಹಾಗೆಯೇ ಕುಡಿಯಲು ಒದಗಿಸುವಂತೆ ಗ್ರಾಮಸ್ಥರ ಹಲವು ವರ್ಷಗಳ ಆಗ್ರಹ. ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.
ಬಯಲು ಬಹಿರ್ದೆಸೆ: ನದಿಯಿಂದ ಮುಳುಗಡೆಗೊಂಡು ನಿರಾಶ್ರಿತರ ತಾಣವಾದ ಗ್ರಾಮದ ಜನರಿಗೆ ವೈಯಕ್ತಿಕ, ಸಾಮೋಹಿಕ ಶೌಚಾಲಯಗಳಿಲ್ಲ, ರಸ್ತೆಗುಂಟೆ ಬಹಿರ್ದೆಸೆಗೆ ಹೋಗುತ್ತಿರುವುದು ಸಾಮಾನ್ಯವಾಗಿದೆ.
ಬೇಸಿಗೆ ಆರಂಭವಾಗುತ್ತಿದೆ. ಈಗಾಲಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ನದಿ ನೀರು ಒದಗಿಸಬೇಕು. ಇಲ್ಲವೆ ಹೊಸ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕುಲಕ್ಕಪ್ಪ ನಾಗರಬೆಟ್ಟ ಅಧ್ಯಕ್ಷ ಎಸ್‌ಡಿಎಂಸಿ ಲೋಟಗೇರಿ
ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದ್ದು ಗ್ರಾಮ ಪಂಚಾಯಿತಿ ಸುಪರ್ದಿಗೆ ಹಸ್ತಾಂತರಿಸಿದ ಕೂಡಲೇ ದುರಸ್ತಿಗೊಳಿಸಿ ಪುನಃ ಪ್ರಾರಂಭಿಸಿ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದುಪಿ.ಎಚ್.ಕುಂಬಾರ ಪಿಡಿಒ ಬಿಜ್ಜೂರ ಗ್ರಾ.ಪಂ
ನಮ್ಮೂರ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯವಿಲ್ಲ ಸರ್ಕಾರದಿಂದ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಯೋಜನೆಗಳು ಹೆಸರಿಗೆ ಮಾತ್ರ ಎನ್ನುವಂತಾಗಿವೆಅಂಬ್ರಣ್ಣ ಎನ್. ಪಾಕರೆಡ್ಡಿ ಅಧ್ಯಕ್ಷ ಎಕ್ಸ್‌ಫರ್ಟ್ ಸಮೂಹ ಸಂಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.