ADVERTISEMENT

‘ಪಾಟೀಲ ಬಹಿರಂಗವಾಗಿ ಕ್ಷಮೆ ಕೇಳಲಿ’

ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮೇಲೆ ಹಲ್ಲೆ ಯತ್ನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 16:01 IST
Last Updated 14 ಏಪ್ರಿಲ್ 2019, 16:01 IST
ಮುದ್ದೇಬಿಹಾಳದಲ್ಲಿ ಬಿಜೆಪಿ ಧುರೀಣರು, ಪುರಸಭೆ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮೇಲೆ ಗೃಹ ಸಚಿವ ಎಂ.ಬಿ.ಪಾಟೀಲ ಹಿಂಬಾಲಕರು ನಡೆಸಿದ ಗುಂಡಾವರ್ತನೆ ಖಂಡಿಸಿದರು.
ಮುದ್ದೇಬಿಹಾಳದಲ್ಲಿ ಬಿಜೆಪಿ ಧುರೀಣರು, ಪುರಸಭೆ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮೇಲೆ ಗೃಹ ಸಚಿವ ಎಂ.ಬಿ.ಪಾಟೀಲ ಹಿಂಬಾಲಕರು ನಡೆಸಿದ ಗುಂಡಾವರ್ತನೆ ಖಂಡಿಸಿದರು.   

ಮುದ್ದೇಬಿಹಾಳ: ‘ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ವಿಜಯಪುರದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ, ಸಭಾಂಗಣದೊಳಗೆ ನುಗ್ಗಿ ದಾಂದಲೆ ನಡೆಸಿದ ತಮ್ಮ ಹಿಂಬಾಲಕರ ಗೂಂಡಾ ವರ್ತನೆ ಬಗ್ಗೆ, ಗೃಹ ಸಚಿವ ಎಂ.ಬಿ.ಪಾಟೀಲ ತನಿಖೆ ನಡೆಸಿ, ತಾವೊಬ್ಬ ನಿಸ್ಪಕ್ಷಪಾತ ಗೃಹ ಸಚಿವ ಎನ್ನುವುದನ್ನು ಸಾಬೀತುಪಡಿಸಬೇಕು’ ಎಂದು ಬಿಜೆಪಿ ಧುರೀಣರು ಸವಾಲು ಹಾಕಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಮಾಜಿ ಸದಸ್ಯ ಮನೋಹರ ತುಪ್ಪದ, ಶಿವಶಂಕರಗೌಡ ಹಿರೇಗೌಡರ, ರಾಜೇಂದ್ರಗೌಡ ರಾಯಗೊಂಡ, ಶಿವನಗೌಡ ತಾಳಿಕೋಟೆ, ನಡಹಳ್ಳಿ ಮೇಲೆ ನಡೆದ ಹಲ್ಲೆ ಯತ್ನದ ಪ್ರಕರಣವನ್ನು ಖಂಡಿಸಿದರು.

‘ನೀರಾವರಿ ಸಚಿವರಾಗಿದ್ದಾಗ ಎಂ.ಬಿ.ಪಾಟೀಲ ನಡೆಸಿದ ಅವ್ಯವಹಾರವನ್ನು ದಾಖಲೆ ಸಮೇತ ಬಹಿರಂಗಪಡಿಸಲು ಶಾಸಕ ನಡಹಳ್ಳಿ ಪತ್ರಿಕಾಗೋಷ್ಠಿ ನಡೆಸಿದ್ದರು. ಇದನ್ನು ಸಹಿಸದ ಸಚಿವ ಪಾಟೀಲ ಈ ಘಟನೆಗೆ ಕಾರಣರಾಗಿದ್ದಾರೆ.

ADVERTISEMENT

ಸಚಿವರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರೆ ಸಾಲದು. ಬಹಿರಂಗವಾಗಿ ನಡಹಳ್ಳಿ ಕ್ಷಮೆ ಕೇಳಬೇಕು. ಒಬ್ಬ ಜನಪ್ರತಿನಿಧಿ ಮೇಲೆ ಗೂಂಡಾ ಕಾರ್ಯಕರ್ತರನ್ನು ಛೂ ಬಿಟ್ಟು ಅಪಮಾನಪಡಿಸಿದ್ದು ಖಂಡನೀಯ. ಇದು ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ನಡೆಯತ್ತಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಂತಿದೆ. ನಿಮ್ಮ ನ್ಯೂನತೆ ಎತ್ತಿ ತೋರಿಸಿದರೆ, ನಿಮ್ಮ ಲೂಟಿ ಬಹಿರಂಗಪಡಿಸಲು ಮುಂದಾದರೆ, ನಿಮ್ಮ ವಿರುದ್ಧ ದನಿ ಎತ್ತಿದವರನ್ನು ಹತ್ತಿಕ್ಕಲು ಪ್ರಯತ್ನಿಸುವ ನಿಮ್ಮ ನಡವಳಿಕೆ ಪ್ರಜಾತಂತ್ರ ವಿರೋಧಿ’ ಎಂದು ಧುರೀಣರು ಟೀಕಿಸಿದರು.

‘ಎಂ.ಬಿ.ಪಾಟೀಲ ವೀರಶೈವ ಲಿಂಗಾಯತ ಧರ್ಮ ಒಡೆಯಲು ಯತ್ನಿಸಿದ್ದಂತೆ, ಅವರ ತಂದೆ ಮಾಜಿ ಸಚಿವ ದಿವಂಗತ ಬಿ.ಎಂ.ಪಾಟೀಲ ಸಹ ಧರ್ಮ ಒಡೆಯಲು ಯತ್ನಿಸಿ, ಕಾಂಗ್ರೆಸ್ ಇಬ್ಭಾಗ ಮಾಡಿದ್ದರು. ಲಿಂಗಾಯತ ಸಮಾಜದ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ಷಡ್ಯಂತ್ರ ನಡೆಸಿ ಅವರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದ್ದರು. ಶಾಸಕ ನಡಹಳ್ಳಿ ನಿಜವಾದ ಬಸವಾನುಯಾಯಿ ಆಗಿದ್ದು ಘಟನೆ ನಡೆದಾಗ, ತುಂಬಾ ತಾಳ್ಮೆವಹಿಸಿ ಪರಿಸ್ಥಿತಿ ಕೈಮೀರುವುದನ್ನು ತಪ್ಪಿಸಿದ್ದಾರೆ. ಪಾಟೀಲ ಬಹಿರಂಗ ಕ್ಷಮೆ ಕೇಳದಿದ್ದರೆ ಚುನಾವಣೆ ಬಳಿಕ ಬಿಜೆಪಿ ವತಿಯಿಂದ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಅಶೋಕ ವನಹಳ್ಳಿ, ಸದಾನಂದ ಮಾಗಿ, ಧುರೀಣರಾದ ಜಿ.ಪಂ. ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಶರಣು ಬೂದಿಹಾಳಮಠ, ವಕೀಲ ಮಹಾಂತಗೌಡ ಪಾಟೀಲ, ಬಸನಗೌಡ ಪಾಟೀಲ ಸರೂರ, ಪರಶುರಾಮ ಮುರಾಳ, ರಾಜಶೇಖರ ಹೊಳಿ, ಪುನೀತ್ ಹಿಪ್ಪರಗಿ, ರಾಜಶೇಖರ ಮ್ಯಾಗೇರಿ, ವಕೀಲ ಮಲ್ಲನಗೌಡ ಪಾಟೀಲ, ಮಂಜು ರತ್ನಾಕರ, ಸಂಗಮೇಶ ಹೊಳಿ, ಶಿವನಗೌಡ ತಾಳಿಕೋಟೆ, ಗೌರಮ್ಮ ಹುನಗುಂದ, ಮಹಾಂತೇಶ ಗಂಜ್ಯಾಳ, ವಕೀಲ ಹಣಮಂತ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.