
ವಿಜಯಪುರ: ಜಿಲ್ಲೆಯಲ್ಲಿ ರೈತರಲ್ಲಿ ಸುಸ್ಥಿರ ಹೈನುಗಾರಿಕೆ ಉತ್ತೇಜಿಸಲು ‘ಕ್ಷೀರ ಪೈಲಟ್’ ಯೋಜನೆಗೆ ಚಾಲನೆ ಕಾರ್ಯಕ್ರಮ ನವೆಂಬರ್ 8ರಂದು ನಗರದ ಬಿ.ಎಲ್.ಡಿ.ಇ ಸಂಸ್ಥೆ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಗ್ರಂಥಾಲಯ ಸಭಾಂಗಣದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರ ವರೆಗೆ ಜಿಲ್ಲೆಯ ರೈತರಿಗೆ ಮಾದರಿ ರೈತರು ಹಾಗೂ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಹಾಲು ಒಕ್ಕೂಟದ ಅಧಿಕಾರಿಗಳಿಂದ ಮಾಹಿತಿ ಗೋಷ್ಠಿ ನಡೆಯಲಿದೆ. ಇದರಲ್ಲಿ ಆಸಕ್ತ ರೈತರು ಪಾಲ್ಗೊಳ್ಳಬಹುದಾಗಿದೆ.
ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಸೆಲ್ ಕಂಪನಿ ಸಂಸ್ಥಾಪಕ ಪ್ರಶಾಂತ ಪ್ರಕಾಶ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಬಿ.ಎಲ್.ಡಿ.ಇ ಅಧ್ಯಕ್ಷ ಮತ್ತು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಾಧಿಪತಿ ಬಸನಗೌಡ ಎಂ.ಪಾಟೀಲ, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ತಿಪಟೂರಿನ ಅಕ್ಷಯಕಲ್ಪ ಫೌಂಡೇಶನ್ ಸಂಸ್ಥಾಪಕ ಶಶಿಕುಮಾರ, ಬೆಂಗಳೂರಿನ ಕೃಷಿಕಲ್ಪ ಫೌಂಡೇಶನ್ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಸಿ.ಎಂ.ಪಾಟೀಲ ಭಾಗವಹಿಸಲಿದ್ದಾರೆ.
ಮೊದಲ ಹೆಜ್ಜೆಯಾಗಿ ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿ, ನಾಗರಾಳ, ನಿಡೋಣಿ, ಕುಮಠೆ, ಯಕ್ಕುಂಡಿ ಗ್ರಾಮಗಳ ಆಯ್ದ ಆಸಕ್ತ ರೈತರ ತೋಟಗಳಲ್ಲಿ ಈ ಹೈನುಗಾರಿಕೆ ಕ್ಷೀರ ಪೈಲೆಟ್ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದು, ಈಗಾಗಲೇ ರಾಜ್ಯದ ತಿಪಟೂರು ಭಾಗದಲ್ಲಿ ‘ಅಕ್ಷಯ ಕಲ್ಪ ಫೌಂಡೇಶನ್’ ಮೂಲಕ ಅಲ್ಲಿನ ರೈತರು ಸ್ವಾವಲಂಬಿಯಾಗಿರುವುದನ್ನು ಮಾದರಿಯಾಗಿಟ್ಟುಕೊಂಡು, ವಿಜಯಪುರ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು, ಬಿಎಲ್.ಡಿ.ಇ ಸಂಸ್ಥೆಯಿಂದ ಇದಕ್ಕೆ ಯೋಜನೆಗೆ ಅಗತ್ಯ ಹಣಕಾಸು ನೆರವನ್ನು ಆರಂಭಿಕವಾಗಿ ನೀಡಲಾಗುತ್ತಿದೆ ಎಂದು ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಮಹಾಂತೇಶ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.