ADVERTISEMENT

ಪ್ರಭಾರ ಅಧಿಕಾರಿಯೂ ಬರುವುದು ವಾರಕ್ಕೊಮ್ಮೆ!

ಐದು ವರ್ಷಗಳಿಂದ ಕಾರ್ಮಿಕ ನಿರೀಕ್ಷಕರಿಲ್ಲ

​ಪ್ರಜಾವಾಣಿ ವಾರ್ತೆ
Published 2 ಮೇ 2019, 15:51 IST
Last Updated 2 ಮೇ 2019, 15:51 IST
ಮುದ್ದೇಬಿಹಾಳ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿಗೆ ಕಳೆದ ಐದು ವರ್ಷಗಳಿಂದ ಒಬ್ಬರೂ ನೇಮಕವಾಗದೇ ಗುತ್ತಿಗೆ ಆಧಾರಿತ ಅನಧಿಕೃತ ಕೆಲಸಗಾರರೇ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಮುದ್ದೇಬಿಹಾಳ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿಗೆ ಕಳೆದ ಐದು ವರ್ಷಗಳಿಂದ ಒಬ್ಬರೂ ನೇಮಕವಾಗದೇ ಗುತ್ತಿಗೆ ಆಧಾರಿತ ಅನಧಿಕೃತ ಕೆಲಸಗಾರರೇ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ   

ಮುದ್ದೇಬಿಹಾಳ: ಕಾರ್ಮಿಕರ ಕಲ್ಯಾಣ ಇಲಾಖೆಯಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ಇಲ್ಲದೇ ಯೋಜನೆಗಳೆಲ್ಲ ನನೆಗುದಿಗೆ ಬಿದ್ದಿವೆ. ಕಳೆದ ಐದು ವರ್ಷಗಳಿಂದ ಇಲ್ಲಿ ಯಾವುದೇ ಅಧಿಕಾರಿಗಳೂ ಅಧಿಕಾರ ಸ್ವೀಕರಿಸಿಲ್ಲ.

ಕಾರ್ಮಿಕ ನಿರೀಕ್ಷಕರ ಕಚೇರಿಗೆ ಸದಾ ಬೀಗವಿರುತ್ತದೆ. ಸಿಂದಗಿ, ಇಂಡಿ, ಬಸವನ ಬಾಗೇವಾಡಿ ತಾಲ್ಲೂಕುಗಳಲ್ಲಿಯೂ ಈ ಹುದ್ದೆಗೆ ನೇಮಕವಾಗಿಲ್ಲ. ಸದ್ಯ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಕಾರ್ಮಿಕ ಅಧಿಕಾರಿ ಅಶೋಕ ಬಾಳಿಗಟ್ಟೆ ಅವರೇ ನಿರ್ವಹಿಸುತ್ತಿದ್ದಾರೆ. ಮುದ್ದೇಬಿಹಾಳಕ್ಕೆ ನಿಯೋಜನೆಯಾಗಿರುವ ಎಸ್‌.ಎಸ್‌.ಪಾಟೀಲ ಎಂಬುವವರು ನಿಗದಿತ ಮಂಗಳವಾರಕ್ಕೆ ಬರಬೇಕು ಎಂದಿದೆ. ಆದರೆ ಆ ದಿನವೂ ಅವರು ಬರುವುದು ನಿಶ್ಚಿತವಿರುವುದಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.

ಡಾಟಾ ಎಂಟ್ರಿಗಾಗಿ ಇರುವ ಮಿರಾಜುದ್ದೀನ್‌ ಎಂಬುವವರು ಸಹ ಸಂಪರ್ಕಕಕ್ಕೂ ಸಿಗುವುದು ದುರ್ಭರವಾಗಿದೆ. ಕಾರ್ಮಿಕ ಗುರುತಿನ ಚೀಟಿ ತೆಗೆಸಿಕೊಳ್ಳುವುದು ಕಷ್ಟಕರವಾಗಿದೆ. ₹ 50ಕ್ಕೆ ಮಾಡಿಕೊಡಬೇಕಿರುವ ಈ ಚೀಟಿಗಾಗಿ, ಬಡ ಕಾರ್ಮಿಕರು ಎಲ್ಲ ದಾಖಲೆಗಳನ್ನು ಸಲ್ಲಿಸಿದ ನಂತರ, ₹ 300 ನೀಡಿದರೂ ಗುರುತಿನ ಚೀಟಿಯ ಕೆಲಸವಾಗುತ್ತಿಲ್ಲ ಎಂದು ಕಾರ್ಮಿಕರು ತಮ್ಮ ಸಂಕಷ್ಟ ಹೇಳುತ್ತಾರೆ.

ADVERTISEMENT

ಕಳೆದ ಐದು ವರ್ಷಗಳಿಂದಲೂ ಪೂರ್ಣ ಪ್ರಮಾಣದ ಅಧಿಕಾರಿಗಳ ನೇಮಕಾತಿ ಆಗುತ್ತಿಲ್ಲ. ಕಾರ್ಮಿಕರ ಗೋಳು ತಪ್ಪುತ್ತಿಲ್ಲ. ಕಾರ್ಡ್‌ಗಳ ನವೀಕರಣ, ವಿತರಣೆ ಮುಂತಾದ ಕೆಲಸಗಳೆಲ್ಲ ನನೆಗುದಿಗೆ ಬಿದ್ದಿವೆ. ಇನ್ನಾದರೂ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಕಡೆಗೆ ಗಮನಹರಿಸಿದರೆ, ಬಡ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂದು ಶಿರೋಳದ ಸಮಾಜ ಸೇವಾಕರ್ತ ಬಸವರಾಜ ಮೇಟಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.