ADVERTISEMENT

ಉಪನ್ಯಾಸಕರ ಕೊರತೆ; ಪ್ರಪಾತಕ್ಕೆ ಕುಸಿದ ಫಲಿತಾಂಶ

ದ್ವಿತೀಯ ಪಿಯುಸಿಯಲ್ಲಿ ವಿಜಯಪುರ ಜಿಲ್ಲೆಗೆ ರಾಜ್ಯಮಟ್ಟದಲ್ಲಿ ಕೊನೆಯ ಸ್ಥಾನ

ಬಸವರಾಜ ಸಂಪಳ್ಳಿ
Published 14 ಜುಲೈ 2020, 13:07 IST
Last Updated 14 ಜುಲೈ 2020, 13:07 IST

ವಿಜಯಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಮತ್ತೆ ಕಳಪೆ ಸಾಧನೆ ಪ್ರದರ್ಶಿಸಿದ್ದಾರೆ. ಪರಿಣಾಮ ರಾಜ್ಯಮಟ್ಟದಲ್ಲಿ ವಿಜಯಪುರ ಕೊನೆಯ ಸ್ಥಾನ ಗಳಿಸಿದೆ. ದಶಕದಲ್ಲೇ ಪ್ರಥಮ ಬಾರಿಗೆ ಪಿಯುಸಿ ಫಲಿತಾಂಶ ಪ್ರಪಾತಕ್ಕೆ ಕುಸಿದಿದೆ.

ಪರೀಕ್ಷೆ ಬರೆದ 23,607 ವಿದ್ಯಾರ್ಥಿಗಳ ಪೈಕಿ 12,799 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದು, ಈ ಮೂಲಕ ಶೇ 54.22 ಫಲಿತಾಂಶ ಲಭ್ಯವಾಗಿದೆ.

ಕಳೆದ ವರ್ಷ (2019) ಶೇ 68.55 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಜಿಲ್ಲೆಯು ರಾಜ್ಯ ಮಟ್ಟದಲ್ಲಿ 14ನೇ ಸ್ಥಾನ ಪಡೆದು, ಸುಧಾರಣೆಯತ್ತ ಹೆಜ್ಜೆ ಇಟ್ಟಿತ್ತು. ಆದರೆ, ಈ ವರ್ಷ ಏಕಾಏಕಿ 16 ಸ್ಥಾನ ಕುಸಿತ ಕಾಣುವ ಮೂಲಕ ಅಂದರೆ, 32ನೇ ಸ್ಥಾನ ಪಡೆಯುವ ಮೂಲಕ ತೀವ್ರ ನಿರಾಶೆ ಮೂಡಿಸಿದೆ.

ADVERTISEMENT

ಉಪನ್ಯಾಸಕರ ಕೊರತೆ:

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ ದಡ್ಡಿ, ಜಿಲ್ಲೆಯಲ್ಲಿ 31 ಸರ್ಕಾರಿ, 54 ಅನುದಾನಿತ ಮತ್ತು 132 ಅನುದಾನ ರಹಿತ ಸೇರಿದಂತೆ ಒಟ್ಟು 217 ಪದವಿ ಪೂರ್ವ ಕಾಲೇಜುಗಳಿವೆ. ಅರ್ಧದಷ್ಟು ಉಪನ್ಯಾಸಕರ ಕೊರತೆಯಿಂದ ಸಮರ್ಪಕವಾಗಿ ಬೋಧನೆಯಾಗದೇ ಇರುವುದು ಫಲಿತಾಂಶ ಕುಸಿಯಲು ಮುಖ್ಯ ಕಾರಣವಾಗಿದೆ ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು 130 ಉಪನ್ಯಾಸಕರ ಕೊರತೆ ಇದೆ. ಕಾರಣ 64 ಉಪನ್ಯಾಸಕರು ವಾರದಲ್ಲಿ ಮೂರು ದಿನ ಒಂದು ಕಾಲೇಜು, ಉಳಿದ ಮೂರು ದಿನ ಮತ್ತೊಂದು ಕಾಲೇಜಿನಲ್ಲಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತೆಯೇ, 73 ಜನ ಅತಿಥಿ ಉಪನ್ಯಾಸಕರಿದ್ದಾರೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಎರಡು, ಮೂರು ತಿಂಗಳು ಆದ ಬಳಿಕ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುತ್ತಿರುವುದರಿಂದ ಪಾಠ, ಪ್ರವಚನಕ್ಕೆ ಅಡಚಣೆಯಾಗುತ್ತಿದೆ ಎಂದು ಹೇಳಿದರು.

ವೇತನ ಕಡಿಮೆ:

ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳಲ್ಲಿ ಬಹುತೇಕ ಉಪನ್ಯಾಸಕರಿಗೆ ಸರಿಯಾಗಿ ವೇತನ, ಸೌಲಭ್ಯಗಳು ನೀಡದೇ ಇರುವುದರಿಂದ ಅವರು ಬೋಧನೆಯಲ್ಲಿ ಹೆಚ್ಚು ಆಸಕ್ತಿ ವಹಿಸದೇ ಇರುವುದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಟಿವಿ, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಗೀಳು ಮತ್ತು ಪ್ರಭಾವದಿಂದ ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಕಡಿಮೆಯಾಗಿರುವುದೂ ಸಹ ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

ಸುಧಾರಣೆಗೆ ಕ್ರಮ:

ಮುಂದಿನ ವರ್ಷ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗಾಗಿ ಉಪನ್ಯಾಸಕರಿಗೆ ವಿದ್ಯಾರ್ಥಿಗಳನ್ನು ದತ್ತು ವಹಿಸಲಾಗುವುದು. ಅಲ್ಲದೇ, ಉಪನ್ಯಾಸಕರಿಗೆ ವಿಶೇಷ ತರಬೇತಿ ಏರ್ಪಡಿಸಲಾಗುವುದು. ಜೊತೆಗೆ ಪೂರಕ ಪರೀಕ್ಷೆಗಳನ್ನು ಹೆಚ್ಚು ಆಯೋಜಿಸಲಾಗುವುದು ಎಂದರು.

ಕಡಿಮೆ ಫಲಿತಾಂಶ ಪಡೆದುಕೊಂಡಿರುವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗುವುದು ಎಂದು ಹೇಳಿದರು.

ಗ್ರಾಮೀಣ ವಿದ್ಯಾರ್ಥಿಗಳೇ ಮುಂದು

ವಿಜಯಪುರ: ಮಂಗಳವಾರ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಿಂದಿಕ್ಕಿದ್ದಾರೆ.

ಪರೀಕ್ಷೆ ಬರೆದಿದ್ದ ಗ್ರಾಮೀಣ ಪ್ರದೇಶದ 9278 ವಿದ್ಯಾರ್ಥಿಗಳ ಪೈಕಿ 5149 ಮಂದಿ ಉತ್ತೀರ್ಣರಾಗುವ ಮೂಲಕ ಶೇ 55.5ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ. ನಗರ ಪ್ರದೇಶದಲ್ಲಿ ಪರೀಕ್ಷೆ ಬರೆದಿದ್ದ 14,329 ವಿದ್ಯಾರ್ಥಿಗಳ ಪೈಕಿ 7650 ಮಂದಿ ಉತ್ತೀರ್ಣರಾಗುವ ಮೂಲಕ ಶೇ 53.39ರಷ್ಟು ಫಲಿತಾಂಶ ಬಂದಿದೆ.

ಬಾಲಕಿಯರೇ ಮೇಲುಗೈ

ಜಿಲ್ಲೆಯಲ್ಲಿ ಶೇ 58.81ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಶೇ 43.90ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗ

ಪರೀಕ್ಷೆ ಬರೆದ 12,006 ವಿದ್ಯಾರ್ಥಿಗಳ ಪೈಕಿ 5189 ಮಂದಿ ಉತ್ತೀರ್ಣರಾಗಿದ್ದು, ಶೇ 43.22 ರಷ್ಟು ಫಲಿತಾಂಶ ಲಭಿಸಿದೆ. ಬಾಲಕರಿಗಿಂತ(ಶೇ 33.68) ಬಾಲಕಿಯರೇ ಮೇಲುಗೈ(ಶೇ49.44) ಸಾಧಿಸಿದ್ದಾರೆ.

ವಾಣಿಜ್ಯ ವಿಭಾಗ:

ಪರೀಕ್ಷೆ ಬರೆದ 4264 ವಿದ್ಯಾರ್ಥಿಗಳ ಪೈಕಿ, 2613 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 61.28 ರಷ್ಟು ಫಲಿತಾಂಶ ಲಭಿಸಿದೆ. ಬಾಲಕರಿಗಿಂತ(ಶೇ 49.10) ಬಾಲಕಿಯರೇ(ಶೇ 66.29) ಮುಂದಿದ್ದಾರೆ.

ವಿಜ್ಞಾನ ವಿಭಾಗ

ಪರೀಕ್ಷೆ ಬರೆದ 7337 ವಿದ್ಯಾರ್ಥಿಗಳಲ್ಲಿ 4997 ಮಂದಿ ಉತ್ತೀರ್ಣರಾಗುವ ಮೂಲಕ ಶೇ 68.11ರಷ್ಟು ಫಲಿತಾಂಶ ಲಭಿಸಿದೆ. ವಿದ್ಯಾರ್ಥಿಗಳಿಗಿಂತ(ಶೇ61.97) ವಿದ್ಯಾರ್ಥಿನಿಯರು(ಶೇ68.41) ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.