ADVERTISEMENT

ಅಟೋ ಚಾಲಕರ ಬಡಾವಣೆ ನಿರ್ಮಾಣಕ್ಕೆ ಜಮೀನು ಖರೀದಿಸಲು ಸ್ವಂತ ಹಣ: ಜನಾರ್ದನ ರೆಡ್ಡಿ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 15:49 IST
Last Updated 6 ಮಾರ್ಚ್ 2023, 15:49 IST
ಇಂಡಿ ಪಟ್ಟಣದ ಹಿರೇ ಇಂಡಿ ರಸ್ತೆಯಲ್ಲಿರುವ ಬಹಾರಪೇಠದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ನಡೆದ ಸಾರ್ವಜನಿಕ ಸಭೆಯಲ್ಲಿ ಜನಾರ್ಧನ ರೆಡ್ಡಿ ಮಾತನಾಡಿದರು
ಇಂಡಿ ಪಟ್ಟಣದ ಹಿರೇ ಇಂಡಿ ರಸ್ತೆಯಲ್ಲಿರುವ ಬಹಾರಪೇಠದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ನಡೆದ ಸಾರ್ವಜನಿಕ ಸಭೆಯಲ್ಲಿ ಜನಾರ್ಧನ ರೆಡ್ಡಿ ಮಾತನಾಡಿದರು   

ಇಂಡಿ: ಪಟ್ಟಣದಲ್ಲಿರುವ ಆಟೊ ಚಾಲಕರಿಗೆ ಮನೆ ನಿರ್ಮಿಸಿಕೊಳ್ಳಲು ಅನುಕೂಲವಾಗುವಂತೆ ಎರಡು ಎಕರೆ ಜಮೀನು ಖರೀದಿಸಲು ಸ್ವಂತ ಹಣ ನೀಡುತ್ತೇನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಪಟ್ಟಣದ ಬಹಾರಪೇಠದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ 13 ಜಿಲ್ಲೆಗಳಿಂದ 84 ಶಾಸಕರು ಆಯ್ಕೆಯಾಗುತ್ತಿದ್ದರೂ, ಶೇ 80 ರಷ್ಟು ಅನುದಾನ ದಕ್ಷಿಣ ಕರ್ನಾಟಕದವರು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ಪ್ರದೇಶಗಳು ಹಿಂದುಳಿದಿವೆ. ನಾವು ಈ ಪ್ರದೇಶಕ್ಕೆ ಬೃಹತ್‌ ಶಕ್ತಿ ನೀಡಲು ಈ ಭಾಗದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಆಯ್ಕೆ ಮಾಡುವ ಅವಶ್ಯಕತೆ ಇದೆ ಎಂದರು.

ರೈತರಿಗೆ ಬಸವೇಶ್ವರ ಹೆಸರಿನಲ್ಲಿ ಯೋಜನೆ ರೂಪಿಸಿದ್ದು, ಹೊಲದ ಮಾಲೀಕರಿಗೆ ಪ್ರತಿ ವರ್ಷ ₹15 ಸಾವಿರ ನೀಡುವುದಾಗಿ ತಿಳಿಸಿದರು.

ADVERTISEMENT

ರೈತರಿಗೆ 9 ಗಂಟೆ ಉಚಿತ ವಿದ್ಯುತ್, ಪ್ರತಿ ಗ್ರಾಮಗಳಲ್ಲಿ ಬಸವೇಶ್ವರ ಕೇಂದ್ರಗಳನ್ನು ತೆಗೆದು ಅಲ್ಲಿಂದ ರೈತರಿಗೆ ರಸಗೊಬ್ಬರ, ಬೀಜ ಪೂರೈಕೆ ಮಾಡಲಾಗುವುದು. ಪ್ರತಿ ವಿದ್ಯಾರ್ಥಿಗೆ ಎಲ್‌ಕೆಜಿಯಿಂದ ಪಿಜಿ ವರೆಗೆ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಿದರು.

ಪ್ರತಿ ತಾಲ್ಲೂಕಿನಲ್ಲಿ ಗಾರ್ಮೆಂಟ್‌ ಕಾರ್ಖಾನೆ ತೆಗೆದು, ಪ್ರತಿ ಮನೆ ಮಹಿಳೆಗೆ ಹೊಲಿಗೆ ಕೆಲಸ ನೀಡುತ್ತೇವೆ. ಅವರಿಗೆ ಕನಿಷ್ಠ ₹ 20 ಸಾವಿರ ಪ್ರತಿ ತಿಂಗಳಿಗೆ ಬರುವ ಹಾಗೆ ಮಾಡುವ ಯೋಜನೆ ಹೊಂದಿದ್ದೇವೆ ಎಂದರು.

ದೀಘ್ರ ಕಾಯಿಲೆಗಳಿಗೆ ಬಸವೇಶ್ವರ ಆರೋಗ್ಯ ಯೋಜನೆ ಅಡಿಯಲ್ಲಿ ಉಚಿತ ತಪಾಸಣೆ ಮಾಡುವ ಯೋಜನೆ ರೂಪಿಸಲಾಗುವುದು ಎಂದರು.

ಇಂಡಿ ಮತಕ್ಷೇತ್ರಕ್ಕೆ ಮಹಿಬೂಬ ಅರಬಿ ಅಭ್ಯರ್ಥಿ ಎಂದು ಘೋಷಿಸಿದರು. ನಾಗಠಾಣ ಅಭ್ಯರ್ಥಿ ಶ್ರೀಕಾಂತ ಬಂಡಿ, ಮಲ್ಲಿಕಾರ್ಜುನ ನೆಕ್ಕುಂಡಿ, ಸಮೀರ ಶೇಖ್‌, ಫೀರೋಜ್‌ ಶೇಖ್‌, ಗಣಿ ಶೇಖ್‌, ಸುಲ್ತಾನ ಪಟೇಲ, ಫಾರುಖ ಬೋರಾಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.