ADVERTISEMENT

ಕಲಿಕಾ ನ್ಯೂನತೆ ಮಕ್ಕಳಿಗಷ್ಟೇ ಕ್ರಿಯಾ ಸಂಶೋಧನೆ ಸೀಮಿತವಲ್ಲ

ಚಂದ್ರಶೇಖರ ಕೊಳೇಕರ
Published 5 ಫೆಬ್ರುವರಿ 2019, 12:52 IST
Last Updated 5 ಫೆಬ್ರುವರಿ 2019, 12:52 IST
ಆಲಮಟ್ಟಿಯಲ್ಲಿ ನಡೆದ ರಾಜ್ಯ ಮಟ್ಟದ ಆರನೇ ಶಿಕ್ಷಣ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಡಾ ಭಾರತಿ ವೈ ಖಾಸನೀಸ್‌ ಮಾತನಾಡಿದರು
ಆಲಮಟ್ಟಿಯಲ್ಲಿ ನಡೆದ ರಾಜ್ಯ ಮಟ್ಟದ ಆರನೇ ಶಿಕ್ಷಣ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಡಾ ಭಾರತಿ ವೈ ಖಾಸನೀಸ್‌ ಮಾತನಾಡಿದರು   

ಆಲಮಟ್ಟಿ: ‘ಕಲಿಕಾ ನ್ಯೂನತೆ ಮಕ್ಕಳಿಗಷ್ಟೇ ಕ್ರಿಯಾ ಸಂಶೋಧನೆ ಕೈಗೊಳ್ಳದೇ, ಶೈಕ್ಷಣಿಕವಾಗಿ ಮುಂದುವರಿದ ಮಕ್ಕಳ ಕೌಶಲ ಉನ್ನತೀಕರಣಕ್ಕಾಗಿಯೂ ರೂಪಿಸಬೇಕು. ಅದರ ಹರಿವು, ವಿಸ್ತಾರ ಹಾಗೂ ಪರಿಣಾಮ ಅಪಾರ’ ಎಂದು ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಡಾ.ಭಾರತಿ ವೈ.ಖಾಸನೀಸ್ ಹೇಳಿದರು.

ರಾಜ್ಯ ಮಟ್ಟದ 6ನೇ ಶಿಕ್ಷಣ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಮಂಗಳವಾರ ನಡೆದ ‘ಕ್ರಿಯಾ ಸಂಶೋಧನೆ ತತ್ವ, ಆಚರಣೆ ಮತ್ತು ಬರಹ: ತಾತ್ವಿಕ ವಿವೇಚನೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಶೋಧನೆ ಹಂತದ ಪ್ರಾಕಲ್ಪಕ್ಕೆ ತಕ್ಕಂತೆ ಚಟುವಟಿಕೆಗಳನ್ನು ರೂಪಿಸಿದಾಗ ಸಂಶೋಧನೆ ಪೂರ್ಣಗೊಳ್ಳುತ್ತದೆ. ಅದಕ್ಕೂ ಮೊದಲು ಬೇರೆ ವಿಧಾನಗಳ ಮೂಲಕ ಮಗುವಿನಲ್ಲಿ ಕಲಿಕಾ ಆಸಕ್ತಿ ಬೆಳೆಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂದರು.

ADVERTISEMENT

‘ಶ,ಷ,ಸ ಎಂಬ ಶಬ್ದಗಳ ಉಚ್ಛಾರದಲ್ಲಿ ತಾವು ಕೈಗೊಂಡ ಕ್ರಿಯಾ ಸಂಶೋಧನೆ ಕುರಿತು ರಾಮದುರ್ಗ ತಾಲ್ಲೂಕಿನ ಮುದಕವಿಯ ವಿದ್ಯಾ ಕುಂದರಗಿ ಪ್ರಸ್ತಾಪಿಸಿದರು. ಬಳಿಕ ಮಾತನಾಡಿ, ಒಂದು ಪೇಪರ್ ಅನ್ನು ಬಾಯಿಯ ಮುಂದೆ ಹಿಡಿದು ಶ,ಷ,ಸ ಉಚ್ಛರಿಸಿದಾಗ ಹೊರಬರುವ ಗಾಳಿಯ ತಲುಪುವ ಜಾಗ ಹಾಗೂ ವ್ಯತ್ಯಾಸಗಳ ಬಗ್ಗೆ ಮಕ್ಕಳಿಗೆ ಅರಿವು ಮಾಡಿಸಬೇಕು. ಇಂತಹ ವೈಜ್ಞಾನಿಕ ಹಂತಗಳನ್ನು ಅನುಸರಿಸಬೇಕಿದೆ’ ಎಂದರು.

ಗಣಿತ ವಿಷಯದ ಬಗ್ಗೆ ಹಳಿಯಾಳ ತಾಲ್ಲೂಕು ಅರ್ಲವಾಡದ ದಿನೇಶ ನಾಯ್ಕ ಮಾತನಾಡಿ, ಸಂಶೋಧನೆ ಕೈಗೊಳ್ಳುವಾಗ ಪೂರಕ ಪರಿಸರ ಒದಗಿಸುವುದು ಅಗತ್ಯ. ದತ್ತಾಂಶ ಸಂಗ್ರಹ ಹಾಗೂ ವಿಶ್ಲೇಷಣೆಗೆ ಆದ್ಯತೆ ನೀಡಬೇಕು ಎಂದರು. ಕ್ರಿಯಾ ಸಂಶೋಧನೆ ಕೈಗೊಳ್ಳಬೇಕಾದರೆ ಪ್ರತಿ ಪ್ರೌಢಶಾಲೆಗಳಲ್ಲಿಯೂ ಗಣಿತದ ಪ್ರಯೋಗಾಲಯದ ಅಗತ್ಯ ಎಂದರು.

ಸಮಾಜ ವಿಜ್ಞಾನದ ವಿಷಯದ ಬಗ್ಗೆ ಹಾವೇರಿ ಜಿಲ್ಲಾ ಬ್ಯಾಡಗಿ ತಾಲ್ಲೂಕಿನ ಬಿಸಲಳ್ಳಿಯ ಶಿಕ್ಷಕ ಬಿ.ಎಂ.ಪಾಟೀಲ ಮಾತನಾಡಿ, ಸ್ವಅವಲೋಕನ, ಸ್ವವಿಮರ್ಶೆ ಇಲ್ಲದಿದ್ದರೆ ಕ್ರಿಯಾ ಸಂಶೋಧನೆ ವ್ಯರ್ಥ ಎಂದರು.

ಧಾರವಾಡ ಡಯಟ್ ಉಪನ್ಯಾಸಕಿ ಕಾಟೇವಾಡ ಮಾತನಾಡಿದರು. ವಿಜ್ಞಾನ ವಿಷಯದ ಬಗ್ಗೆ ರಾಮದುರ್ಗ ತಾಲ್ಲೂಕಿನ ಚಿಂಚನೂರ ಗ್ರಾಮದ ಗೋಪಾಲ ಹುಲ್ಲೂರ, ವಿಜಯಪುರ ಜಿಲ್ಲೆಯ ಯಕ್ಕುಂಡಿಯ ಅನ್ನಪೂರ್ಣ ಭೋಸಲೆ ಹಿಂದಿ ವಿಷಯದ ಬಗ್ಗೆ ತಾವು ಕೈಗೊಂಡ ಕ್ರಿಯಾ ಸಂಶೋಧನೆಯ ವಿಷಯ ಮಂಡಿಸಿದರು.

ಗದಗದ ಶ್ರೀಕಾಂತಗೌಡ ತಮ್ಮನಗೌಡ್ರ, ಹಾವೇರಿಯ ರವಿ ಆಹೇರಿ, ಇಂಡಿಯ ಎಸ್.ಎಸ್. ಕರ್ಜಗಿ ಸಂವಾದಕರಾಗಿ ಭಾಗಿಯಾಗಿದ್ದರು. ಎಸ್.ಬಿ.ಬಿಂಗೇರಿ ಸ್ವಾಗತಿಸಿದರು. ಸಿ.ಎಂ.ಬಂಡಗರ ನಿರೂಪಿಸಿದರು. ಐ.ಜಿ.ಆಳೂರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.