ADVERTISEMENT

ವಿಜಯಪುರದಲ್ಲಿ ಲಿಂಬೆ ಉತ್ಸವ ಏ.23, 24ಕ್ಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 13:52 IST
Last Updated 18 ಏಪ್ರಿಲ್ 2022, 13:52 IST
ವಿಜಯಪುರದಲ್ಲಿ ಸೋಮವಾರ ‘ಲಿಂಬೆ ಉತ್ಸವ‘ದ ಕರಪತ್ರಗಳನ್ನುಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಬಿಡುಗಡೆಗೊಳಿಸಿದರು
ವಿಜಯಪುರದಲ್ಲಿ ಸೋಮವಾರ ‘ಲಿಂಬೆ ಉತ್ಸವ‘ದ ಕರಪತ್ರಗಳನ್ನುಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಬಿಡುಗಡೆಗೊಳಿಸಿದರು   

ವಿಜಯಪುರ:ಏಪ್ರಿಲ್‌23, 24ಕ್ಕೆ ನಗರದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಲಿಂಬೆ ಉತ್ಸವ ಆಯೋಜಿಸಲಾಗಿದ್ದು, ಎಲ್ಲ ಲಿಂಬೆ ಬೆಳೆಗಾರರು ಹಾಗೂ ಸಾರ್ವಜನಿಕರು ಭಾಗವಹಿಸಿ, ಪ್ರಯೋಜನ ಪಡೆದುಕೊಳ್ಳಬೇಕು ಎಂದು ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ‘ಲಿಂಬೆ ಉತ್ಸವ‘ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎರಡು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 10.30 ರಿಂದ ಸಂಜೆ 5.30 ರ ವರೆಗೆ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ರಾಜ್ಯಮಟ್ಟದ ಲಿಂಬೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ತರಬೇತಿ ‘ಲಿಂಬೆ ಉತ್ಸವ’ದಲ್ಲಿ 40 ಮಳಿಗೆಗಳು, ಲಿಂಬೆ ಹಾಗೂ ಸಿರಿಧಾನ್ಯದ ವಿವಿಧ ಪದಾರ್ಥಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ADVERTISEMENT

ಎರಡು ದಿನ ನುರಿತ ತಜ್ಞರಿಂದ ಲಿಂಬೆ ಹಾಗೂ ಸಿರಿಧಾನ್ಯಗಳ ಸಂಸ್ಕರಣೆ, ಮಾರುಕಟ್ಟೆ, ರಫ್ತು ಅವಕಾಶಗಳ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

‘ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ’ಯಡಿ ಜಿಲ್ಲೆಯಲ್ಲಿ ಲಿಂಬೆಯ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಉತ್ತೇಜನಕ್ಕೆ ಪ್ರಾಶಸ್ಯ ನೀಡಿದ್ದು, ಈಗಾಗಲೇ 42 ಫಲಾನುಭವಿಗಳು ಶೇ 50 ರಷ್ಟು ಸಹಾಯಧನ ಪಡೆದು ಉದ್ಯಮ ಸ್ಥಾಪಿಸಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.

ಈ ಉತ್ಸವದಲ್ಲಿ ಕೇಂದ್ರದ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯ ತೋಟಗಾರಿಕೆ ಸಚಿವ ಮುನಿರತ್ನ, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಸಂಸದ, ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

“ಲಿಂಬೆಯ ನಾಡು ಸಿರಿಧಾನ್ಯಗಳ ಬೀಡು" ಜಿಲ್ಲೆಯ ರೈತರ ಆತ್ಮವಿಶ್ವಾಸ ಹೆಚ್ಚಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎರಡು ದಿನಗಳ ಲಿಂಬೆಯ ಉತ್ಸವನ್ನು ಯಶಸ್ವಿಗೊಳಿಸಲು ಅವರು ಮನವಿ ಮಾಡಿದರು.

‘ಲಿಂಬೆ ಉತ್ಸವ‘ ರಥವು ಜಿಲ್ಲೆಯ ಇಂಡಿ, ಸಿಂದಗಿ, ದೇವರ ಹಿಪ್ಪರಗಿ ಹಾಗೂ ಬಸವನ ಬಾಗೇವಾಡಿ ತಾಲ್ಲೂಕುಗಳಲ್ಲಿ 4 ದಿನ ಸಂಚಾರ ಮಾಡಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌,ಲಿಂಬೆ ಅಭಿವೃದ್ಧಿ ಮಂಡಳಿ ಸಹಾಯಕ ನಿರ್ದೇಶಕ ಆನಂದ ಬಿರಾದಾರ, ಸಿದ್ದು ಪೂಜಾರಿ, ಮಹಾದೇವ ಅಂಬಲಿ, ಚಂದ್ರಶೇಖರ ಕವಟಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.