ADVERTISEMENT

ಡಿಎಸ್‌ಎಸ್‌ ಬಣ ಒಗ್ಗೂಡಿಸಲು ದೇವನೂರು ನೇತೃತ್ವ ವಹಿಸಲಿ

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 15:33 IST
Last Updated 11 ಆಗಸ್ಟ್ 2022, 15:33 IST
ಡಿ.ಜಿ.ಸಾಗರ್‌
ಡಿ.ಜಿ.ಸಾಗರ್‌   

ವಿಜಯಪುರ: ಅನೇಕ ಬಣಗಳಾಗಿರುವ ದಲಿತ ಸಂಘರ್ಷ ಸಮಿತಿಯನ್ನು ಒಂದುಗೂಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸಾಹಿತಿ ದೇವನೂರು ಮಹಾದೇವ ಮುಂದಾಳತ್ವ ವಹಿಸಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ್‌ ವಿನಂತಿ ಮಾಡಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ದಲಿತ ಸಂಘರ್ಷ ಸಮಿತಿ ಒಂದೇ ವೇದಿಕೆಯಡಿ ಒಗ್ಗೂಡಿಸಲು ಆರೇಳು ತಿಂಗಳಿಂದ ಮಾತುಕತೆ, ಪ್ರಯತ್ನಗಳು ನಡೆದಿವೆ. ಇಂದಲ್ಲ, ನಾಳೆ ಒಂದಾಗುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸ್ಪಷ್ಟಪಡಿಸಿದರು.

ದಲಿತ ಸಂಘರ್ಷ ಸಮಿತಿ ಹಲವು ಬಣಗಳಾಗಿದ್ದರೂ ಎಲ್ಲ ಮುಖಂಡರ ಗುರಿ, ಉದ್ದೇಶ, ತತ್ವದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ವ್ಯಕ್ತಿಪ್ರತಿಷ್ಠೆಯಿಂದ ಹೋಳಾಗಿದೆ ಎಂದರು.

ADVERTISEMENT

35 ವರ್ಷಗಳಿಂದ ದಲಿತ ಸಂಘರ್ಷ ಸಮಿತಿಯನ್ನು ರಾಜ್ಯದಲ್ಲಿ ಕಟ್ಟಿಬೆಳೆಸಲು ನಾನು ಸೇರಿದಂತೆ ಮಾವಳ್ಳಿ ಶಂಕರ್‌, ಲಕ್ಷ್ಮಿನಾರಾಯಣ ನಾಗಾವರ ಶ್ರಮಿಸುತ್ತಿದ್ದೇವೆ. ಎಲ್ಲರೂ ಒಂದುಗೂಡಿದರೆ ಮಾತ್ರ ಸಮುದಾಯಕ್ಕೆ ಒಳಿತಾಗಲಿದೆ. ಇದಕ್ಕೆ ನನ್ನ ಸಹಮತ ಇದೆ ಎಂದರು.

‘ಆರ್‌ಎಸ್‌ಎಸ್‌ ಆಳ ಮತ್ತು ಅಗಲ’ವನ್ನು ದೇಶದ ಮುಂದಿಟ್ಟಿರುವಂತೆ ದಲಿತ ಸಂಘರ್ಷ ಸಮಿತಿ ಬೆಳೆದು ಬಂದ ದಾರಿಯ ಕುರಿತು ದೇವನೂರು ಅವರು ಜನತೆಯ ಮುಂದಿಡುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.

ಖಂಡನೆ: ವೀರಶೈವ ಸಮಾಜದವರು ಬೇಡ ಜಂಗಮ ಎಂದು ಸುಳ್ಳು ಹೇಳಿಕೊಂಡು ಮೀಸಲಾತಿ ಕದಿಯಲು ಮುಂದಾಗಿರುವುದು ಖಂಡನೀಯ ಎಂದರು.

ಸಂವಿಧಾನಕ್ಕೆ ದಕ್ಕೆ:

ಮೋದಿ ಪ್ರಧಾನಿಯಾದ ಬಳಿಕ ಸಂವಿಧಾನಕ್ಕೆ ದೊಡ್ಡ ಪ್ರಮಾಣದಲ್ಲಿ ದಕ್ಕೆ ಎದುರಾಗಿದೆ. ಸಂವಿಧಾನದ ಬಗ್ಗೆ ಬಿಜೆಪಿಗೆ ಮೊದಲೇ ಗೌರವವಿಲ್ಲ ಎಂದು ಸಾಗರ್‌ ಹೇಳಿದರು.

ಬಿಜೆಪಿ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ, ಅಸಹಿಷ್ಣತೆ, ನಿರುದ್ಯೋಗ, ಆರ್ಥಿಕ ಅಭದ್ರತೆ ವಿಪರೀತವಾಗಿದೆ. ಮಹಿಳೆಯರು, ಮಕ್ಕಳು, ಬಡವರು, ಆದಿವಾಸಿಗಳು, ಅಸಂಘಟಿತ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ನಾಗರಿಕ ಹಕ್ಕುಗಳು ದಮನವಾಗಿವೆ ಎಂದರು.

ಚಿಂತನಾ ಸಮಾವೇಶ ಆ. 19ಕ್ಕೆ:

ವಿಜಯಪುರ: ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 131ನೇ ಜಯಂತ್ಯೋತ್ಸವದದ ಅಂಗವಾಗಿ ‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿ’ ಎಂಬ ವಿಷಯದ ಕುರಿತು ಚಿಂತನಾ ಸಮಾವೇಶವನ್ನು ಬಸವನ ಬಾಗೇವಾಡಿಯಲ್ಲಿ ಆಗಸ್ಟ್‌ 19ರಂದು ಆಯೋಜಿಸಲಾಗಿದೆ ಎಂದು ಸಾಗರ್‌ ತಿಳಿಸಿದರು.

ಅಂದು ಬೆಳಿಗ್ಗೆ 11.30ಕ್ಕೆ ಬಾಗೇವಾಡಿಯ ಬಸವ ಭವನದಲ್ಲಿ ನಡೆಯುವ ಸಮಾವೇಶವನ್ನು ಮಾಜಿ ಸಚಿವ ಡಾ.ಎಚ್‌.ಸಿ.ಮಹಾದೇವಪ್ಪ ಉದ್ಘಾಟಿಸಲಿದ್ದಾರೆ ಎಂದರು.

ಬೈಲೂರ ನಿಷ್ಕಲ ಮಂಟಪ, ಮುಂಡರಗಿ ತೋಂಟದಾರ್ಯಮಠದ ನಿಜಗುಣಾನಂದ ಪ್ರಭು ಸ್ವಾಮೀಜಿ ಸಮಾವೇಶದ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.

ಶಾಸಕ ಶಿವಾನಂದ ಪಾಟೀಲ, ಮಾಜಿ ಸಚಿವ ಎಚ್‌.ಆಂಜನೇಯ, ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ್‌, ಪ್ರೊ.ರಾಜು ಆಲಗೂರ, ಪ್ರೋ. ಮಲ್ಲಿಕಾ ಘಂಟಿ, ಸುಜಾತಾ ಚಲವಾದಿ, ಅಶೋಕ ಮನಗೂಳಿ, ಹಾಸಿಂಪೀರ ವಾಲೀಕಾರ ಪಾಲ್ಗೊಳ್ಳಲಿದ್ದಾರೆ ಎಂದರು.

ದಲಿತ ಸಂಘರ್ಷ ಸಮಿತಿ ಮುಖಂಡರಾದ ವಿನಾಯಕ ಗುಣಸಾಗರ, ವೈ.ಸಿ.ಮಯೂರ, ಸಿದ್ದು ರಾಯಣ್ಣನವರ, ಅಶೋಕ ಚಲವಾದಿ, ರಮೇಶ ಧರಣಾಕರ, ಶರಣು ಸಿಂಧೆ, ರಮೇಶ ಆಸಂಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.